ಭವಾನಿ ರೇವಣ್ಣಗೆ ರಿಲೀಫ್ – ಮಧ್ಯಂತರ ಜಾಮೀನು ಅವಧಿ ವಿಸ್ತರಣೆ!

Public TV
2 Min Read

– ಕೋರ್ಟ್‌ನಲ್ಲಿ ವಾದ-ಪ್ರತಿವಾದ ಹೇಗಿತ್ತು?

ಬೆಂಗಳೂರು: ಕೆ.ಆರ್ ನಗರ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಹೆಚ್.ಡಿ ರೇವಣ್ಣ ಪತ್ನಿ ಭವಾನಿಯವರ ಮಧ್ಯಂತರ ಜಾಮೀನು ಅವಧಿಯನ್ನು ಹೈಕೋರ್ಟ್ ವಿಸ್ತರಣೆ ಮಾಡಿದೆ. ಮುಂದಿನ ಆದೇಶದವರೆಗೆ ಜಾಮೀನು ವಿಸ್ತರಣೆಗೊಂಡಿದೆ. ಈ ಮೂಲಕ ಭವಾನಿ ರೇವಣ್ಣ ಅವರ ಮಧ್ಯಂತರ ಜಾಮೀನು ರದ್ದು ಕೋರಿ ಎಸ್‌ಐಟಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ

ಕೋರ್ಟ್‌ನಲ್ಲಿ ವಾದ-ಪ್ರತಿವಾದ ಹೇಗಿತ್ತು?
ಭವಾನಿ ರೇವಣ್ಣ ಅವರ ಮಧ್ಯಂತರ ಜಾಮೀನು ಅವಧಿಯನ್ನು ರದ್ದುಗೊಳಿಸುವಂತೆ ಕೋರಿ ಎಸ್‌ಐಟಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಕೃಷ್ಣದೀಕ್ಷಿತ್ ಅವರಿದ್ದ ಪೀಠ ವಿಚಾರಣೆ ನಡೆಸಿತು. ಭವಾನಿ ರೇವಣ್ಣ ಅವರಿಗೆ ನೀಡಿದ್ದ ಮಧ್ಯಂತರ ಜಾಮೀನು ಅವಧಿಯನ್ನು ವಜಾಗೊಳಿಸುವಂತೆ ಎಸ್‌ಐಟಿ ಪರ ವಕೀಲರು ರದ್ದು ಮಾಡುವಂತೆ ಮನವಿ ಮಾಡಿದ್ದರು.

ಭವಾನಿ ಅವರು ಸರಿಯಾಗಿ ವಿಚಾರಣೆಗೆ ಸಹಕಾರ ನೀಡುತ್ತಿಲ್ಲ, ಸುಳ್ಳು ಮಾಹಿತಿ ನೀಡುತ್ತಾ ಇದ್ದಾರೆ. ನಮ್ಮ ಬಳಿ ಇರುವ ಸಾಕ್ಷ್ಯಗಳನ್ನು ಒಪ್ಪುತ್ತಿಲ್ಲ. ರಿಲೀಫ್ ಸಿಕ್ಕಿದ್ದನ್ನ ದುರುಪಯೋಗ ಮಾಡಿಕೊಳ್ತಾ ಇದ್ದಾರೆ ಎಂದು ಎಸ್‌ಐಟಿ ಪರ ವಕೀಲರಾದ ಜಗದೀಶ್ ವಾದ ಮಂಡನೆ ಮಾಡಿದರು. ಈ ವೇಳೆ ನ್ಯಾಯಪೀಠ ಕೆಲಹೊತ್ತು ವಿಚಾರಣೆ ಮುಂದೂಡಿತ್ತು.

ಪುನಃ ವಿಚಾರಣೆ ಆರಂಭಗೊಂಡ ನಂತರ ಎಸ್‌ಐಟಿ ಪರ ರವಿಕುಮಾರ್ ವರ್ಮ ವಾದ ಮಂಡಿಸಿದರು. ಭವಾನಿ ವಿಚಾರಣೆಗೆ ಸಹಕರಿಸುತ್ತಿಲ್ಲ, ಭವಾನಿ ಅವರ ಮಗನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಗಂಡನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ಇದೆ. ಇಬ್ಬರೂ ಮೊಬೈಲ್ ಅನ್ನು ಕೊಡುತ್ತಿಲ್ಲ. ತನಿಖೆಗೆ ಸಹಕಾರವನ್ನೂ ನೀಡುತ್ತಿಲ್ಲ ಎಂದು ವಾದಿಸಿದರು. ಈ ವೇಳೆ ಜಡ್ಜ್ ಭವಾನಿ ಅವರಿಗೆ ಎಷ್ಟು ಪ್ರಶ್ನೆ ಕೇಳಿದ್ದೀರಿ? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ವಕೀಲರು 30 ಪ್ರಶ್ನೆ ಕೇಳಿದ್ರೆ 2ಕ್ಕೆ ಉತ್ತರ ನೀಡಿದ್ದಾರೆ ಎಂದು ತಿಳಿಸಿದರು.

ಮುಂದುವರಿದು, ಭವಾನಿ ಅವರ ಬಂಧನ ಅನಿವಾರ್ಯತೆ ಇದೆ. ಆಕೆಯಿಂದ ಮೊಬೈಲ್ ಮತ್ತು ಸಿಮ್ ಕಾರ್ಡ್ಗಳನ್ನು ವಶಕ್ಕೆ ಪಡೆಯಬೇಕು. ಸಿಮ್‌ಕಾರ್ಡ್ಗಳು ಆಕೆ ಸಾಕಷ್ಟು ಬದಲು ಮಾಡಿದ್ದಾರೆ. ಭವಾನಿಗೆ ನೋಟಿಸ್ ನೀಡಿದರೂ ವಿಚಾರಣೆಗೆ ಹಾಜರಾಗಿಲ್ಲ ವಿಚಾರಣೆಗೆ ಹಾಜರಾಗದೇ ಇದ್ದಾಗ ನೋಟಿಸ್ ಮೇಲೆ ವಾರೆಂಟ್ ಪಡೆಯಲಾಗಿದೆ. ಅರೆಸ್ಟ್ ವಾರೆಂಟ್ ಆಕೆಯ ವಿರುದ್ಧ ಇದೆ ಎಂದು ವಾದಿಸಿದರು.

ನಂತರ ನ್ಯಾ. ದೀಕ್ಷಿತ್, ಸಂತ್ರಸ್ತರಿಗೆ ಸಂಬಂಧಿಸಿದ್ದು ಎನ್ನಲಾದ ಪೆನ್‌ಡ್ರೈವ್ ವಿಡಿಯೊಗಳು ದೇಶಾದ್ಯಂತ ಓಡಾಡಿವೆ. ಅವರ ಗತಿ ಏನಾಗಬೇಕು? ಸಂತ್ರಸ್ತೆಯ ಮರ್ಯಾದೆ ಹಾಳಾಗಿದೆ, ಸರ್ಕಾರ ಇದರ ಬಗ್ಗೆ ಯಾಕೆ ಮುತುವರ್ಜಿ ವಹಿಸಿದೆ? ಎಂದು ಮರು ಪ್ರಶ್ನೆ ಮಾಡಿದರು. ಇದಕ್ಕೆ ವಕೀಲರು, 40 ಸಾವಿರ ಪೆನ್‌ಡ್ರೈವ್ ಅನ್ನು ಮನೆ ಮನೆಗೆ ಹೋಗಿ ಹಂಚಿದ್ದಾರೆ, ಪೆನ್‌‌ಡ್ರೈವ್ ಹಂಚಿದವರನ್ನ ಅರೆಸ್ಟ್ ಮಾಡಿದ್ದೀವಿ ಎಂದು ಕೋರ್ಟ್‌ಗೆ ತಿಳಿಸಿದರು. ವಾದ ಪ್ರತಿವಾದಗಳನ್ನು ಆಲಿಸಿದ ಕೋರ್ಟ್ ಎಸ್‌ಐಟಿ ಅರ್ಜಿಯನ್ನು ವಜಾಗೊಳಿಸಿ, ಮುಂದಿನ ಆದೇಶದ ವರೆಗೆ ಮಧ್ಯಂತರ ಜಾಮೀನು ಅವಧಿ ವಿಸ್ತರಣೆ ಮಾಡಿ ಆದೇಶಿಸಿತು.

Share This Article