ಮಧ್ಯಂತರ ಜಾಮೀನಿನ ಬೆನ್ನಲ್ಲೇ ಭವಾನಿ ರೇವಣ್ಣ SIT ಮುಂದೆ ಹಾಜರು

Public TV
1 Min Read

ಬೆಂಗಳೂರು: ಕೆ.ಆರ್ ಪೇಟೆ ಸಂತ್ರಸ್ತೆಯ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಮಧ್ಯಂತರ ಜಾಮೀನು ನೀಡಿದ ಬೆನ್ನಲ್ಲೇ ಇದೀಗ ಭವಾನಿ ರೇವಣ್ಣ ಎಸ್‍ಐಟಿ ಮುಂದೆ ಹಾಜರಾಗಿದ್ದಾರೆ.

ಶುಕ್ರವಾರ (ಇಂದು) ಮಧ್ಯಾಹ್ನ ಒಂದು ಗಂಟೆಗೆ ಎಸ್‍ಐಟಿ ವಿಚಾರಣೆಗೆ ಹಾಜರಾಗುವಂತೆ ಹೈಕೋರ್ಟ್ (Highcourt) ಸೂಚಿಸಿತ್ತು. ಅಲ್ಲದೇ ವಿಚಾರಣೆಯ ಬಳಿಕ 5 ಗಂಟೆಗಳ ಕಾಲ ಮಾತ್ರ ಅವರನ್ನು ಕಸ್ಟಡಿಯಲ್ಲಿ ಇರಿಸಿಕೊಳ್ಳಬಹುದು ಎಂದು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ವಕೀಲ ಅರುಣ್ ಜೊತೆ ಇದೀಗ ಭವಾನಿ ವಿಚಾರಣೆಗೆ ಹಾಜರಾಗಿದ್ದಾರೆ.

ಭವಾನಿ ಅವರನ್ನು ಎಸ್‍ಐಟಿ ಬಂಧಿಸಬಾರದು. ಕೆ ಆರ್ ನಗರ ತಾಲೂಕು ಮತ್ತು ಹಾಸನಕ್ಕೆ ಭವಾನಿ (Bhavani Revanna) ಪ್ರವೇಶಿಸಿಬಾರದು. ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಕೋರ್ಟ್ ಷರತ್ತು ವಿಧಿಸಿದೆ. ಭವಾನಿ ವಿಚಾರಣೆಗೆ ಹಾಜರಾಗದಿದ್ದಕ್ಕೆ ಬಂಧನ ವಾರೆಂಟ್ ಜಾರಿ ಮಾಡಲಾಗಿದೆ. ಈ ಆದೇಶ ಅಮಾನತಿನಲ್ಲಿ ಇಡಲಾಗಿದೆ ಎಂದು ಹೇಳಿದ ಹೈಕೋರ್ಟ್, ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿತು. ಇದನ್ನೂ ಓದಿ: ನಾಗೇಂದ್ರ ಬೆನ್ನಲ್ಲೇ ಬಸನಗೌಡ ದದ್ದಲ, ಎನ್.ಎಸ್.ಬೋಸರಾಜು ರಾಜೀನಾಮೆಗೆ ಒತ್ತಾಯ

ಪ್ರಕರಣ ಸಂಬಂಧ ಈ ಹಿಂದೆ ವಿಶೇಷ ತನಿಖಾ ತಂಡ (SIT) ನೋಟಿಸ್ ಹಾಗೂ ಬಂಧನ ವಾರೆಂಟ್ ನೀಡಿದರೂ ಭವಾನಿ ರೇವಣ್ಣ ಅವರ ಸುಳಿವಿರಲಿಲ್ಲ. ಹೀಗಾಗಿ ಭವಾನಿ ರೇವಣ್ಣ ಅವರು ಅಜ್ಞಾತವಾಸದಲ್ಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಕೋರ್ಟ್ ಆದೇಶದ ಬೆನ್ನಲ್ಲೇ ಭವಾನಿ ಅವರು ಎಸ್‍ಐಟಿ ಮುಂದೆ ಹಾಜರಾಗಿರುವುದು ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಂತಾಗಿದೆ.

Share This Article