ಭಾರತ್ ಬಂದ್: ರಾಜ್ಯದಲ್ಲಿ ಎಲ್ಲಿ? ಏನಾಯ್ತು? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

Public TV
3 Min Read

ಬೆಂಗಳೂರು: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕರೆಕೊಟ್ಟಿದ್ದ ಭಾರತ್ ಬಂದ್ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಯಶಸ್ವಿಯಾಗಿದ್ದು, ಬೆಳಗ್ಗೆಯಿಂದಲೂ ಸಾರಿಗೆ ಸಂಪರ್ಕ, ವಹಿವಾಟು ಇಲ್ಲದೇ ಅಸ್ತವ್ಯಸ್ತ ಗೊಂಡಿದ್ದ ಸಾರ್ವಜನಿಕ ಜೀವನ ಸಂಜೆ ವೇಳೆಗೆ ಸಹಜ ಸ್ಥಿತಿಯತ್ತ ಮರಳಿತು.

ಬಂದ್ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳು, ಪಟ್ಟಣ ಹಾಗೂ ನಗರದಗಳಲ್ಲಿ ಪೊಲೀಸರು ಬೀಗಿ ಬಂದೋಬಸ್ತ್ ಅಳವಡಿಸಿದ್ದರು. ಇದರ ಹೊರತಾಗಿಯೂ ಕೆಲವೆಡೆ ಕಲ್ಲು ತೂರಾಟ ಸೇರಿದಂತೆ ಕೆಲ ಅಹಿತರಕರ ಘಟನೆಗಳು ವರದಿಯಾಗಿದೆ.

ಹಲವು ನಗರಗಳಲ್ಲಿ ಬೆಳಂಬೆಳಗ್ಗೆ ಪ್ರತಿಭಟನೆಗಳು ಶುರುವಾದವು. ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದವು. ಬೆಳಗ್ಗೆ 11 ಗಂಟೆಯಾಗುತ್ತಿದ್ದಂತೆ ಪ್ರತಿಭಟನೆಯ ಕಾವು ಏರತೊಡಗಿತು. ರಾಜ್ಯದೆಲ್ಲೆಡೆ ಗಲಾಟೆ, ಪ್ರತಿಭಟನೆಗಳು ನಡೆದವು. ಉಡುಪಿ ಸೇರಿದಂತೆ ಹಲವಡೆ ಗಲಾಟೆ ನಡೆದಿದ್ದು, ಕೆಲವು ಕಡೆ ಬಲವಂತವಾಗಿ ಅಂಗಡಿ ಮುಂಗಟ್ಟು ಮುಚ್ಚಿಸಲಾಯಿತು. ಉಡುಪಿಯ ಬನ್ನಂಜೆಯಲ್ಲಿ ಅಂಗಡಿ ಬಂದ್ ಮಾಡಿಸುವ ವಿಚಾರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದು, ಬಿಜೆಪಿ ಜಿಲ್ಲಾಧ್ಯಕ್ಷ ಪ್ರಭಾಕರ್ ತಲೆಗೆ ಗಾಯವಾಗಿತ್ತು. ಬಳಿಕ ಗುಂಪು ಚದುರಿಸಲು ಎಸ್ಪಿ ಸೇರಿದಂತೆ ಪೊಲೀಸರು ಲಾಠಿ ಚಾರ್ಜ್ ನಡೆಸಿ ಪರಿಸ್ಥಿತಿ ನಿಯಂತ್ರಿಸಿದರು. ಸದ್ಯ ನಾಳೆ ಬೆಳಗ್ಗೆ 6 ಗಂಟೆವರೆಗೆ ಉಡುಪಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಮೋದಿ ಅಧಿಕಾರಕ್ಕೆ ಬಂದ 4 ವರ್ಷ 5 ತಿಂಗಳಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ತೈಲ ದರ ಏರಿಕೆ ಬಗ್ಗೆ ಒಂದೂ ಮಾತು ಮಾತನಾಡಿಲ್ಲ. ಪೆಟ್ರೋಲ್ ಡೀಸೆಲ್ ಮೇಲೆ ತೆರಿಗೆ ದರ ಏರಿಸಿ 11 ಲಕ್ಷ ಕೋಟಿ ರೂ. ಹಣ ಪಡೆದಿದ್ದೀರಿ ಆ ಹಣ ಎಲ್ಲಿ ಹೋಯಿತು ಎಂದು ಲೋಕಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು. ಈ ಹೋರಾಟಕ್ಕೆ ಪ್ರಧಾನಿ ಮೋದಿ ಸ್ಪಂದಿಸದಿದ್ದರೆ ಮತ್ತೊಂದು ಬ್ರಹ್ಮಾಸ್ತ್ರ ಬಿಡಲಿದ್ದೇವೆ ಎಂದು ಮಾಜಿಸ ಸಚಿವ ಎಚ್.ಕೆ.ಪಾಟೀಲ್ ಎಚ್ಚರಿಸಿದರು. ಇಂದು ಕರೆ ನೀಡಿರುವ ಬಂದ್ ಚುನಾವಣೆ ಪ್ರೇರಿತದ ದುರುದ್ದೇಶದ ಬಂದ್ ಬಿಜೆಪಿ ರಾಜ್ಯಾಧ್ಯಲ್ಷ ಬಿಎಸ್ ಯಡಿಯೂರಪ್ಪ, ಉದಾಸಿ, ಪ್ರತಾಪ್ ಸಿಂಹ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.


ಬೆಂಗಳೂರು ಸ್ತಬ್ಧ: ಬಂದ್ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಹೆಚ್ಚಿನ ಜನರು ಮನೆಯಿಂದ ಹೊರಬಾರದೇ ರಸ್ತೆಗಳು ಬಿಕೋ ಎನ್ನುತ್ತಿತ್ತು. ಮೈಸೂರು ಬ್ಯಾಂಕ್ ವೃತ್ತದಲ್ಲಿ ಕಾಂಗ್ರೆಸ್ ನಾಯಕರು ಎತ್ತಿನ ಗಾಡಿ ಏರಿ ಪ್ರತಿಭಟನೆ ನಡೆಸಿ ಬಳಿಕ ಪ್ರಧಾನಿ ಮೋದಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಟೌನ್‍ಹಾಲ್‍ನಿಂದ ರಾಜಭವನದವರೆಗೆ ಜೆಡಿಎಸ್ ಪಾದಯಾತ್ರೆ ನಡೆಸಲು ಯತ್ನಿಸಿತ್ತು. ಆದರೆ ಈ ಪ್ರತಿಭಟನೆಗೆ ರಾಜ್ಯ ಜೆಡಿಎಸ್ ಅಧ್ಯಕ್ಷರೇ ಗೈರಾಗಿದ್ದರು. ಪ್ರತಿ ಪ್ರತಿಭಟನ ಸ್ಥಳಕ್ಕೆ ಎಂಎಲ್‍ಸಿ ಶರವಣ ಕುದುರೆ ಏರಿ ಬಂದು ಗಮನ ಸೆಳೆದರು. ಮತ್ತೊಂದೆಡೆ ಕನ್ನಡ ಪರ ಸಂಘಟನೆಗಳಾದ ಕರವೇ ನಾರಾಯಣ ಗೌಡ ಬಣ ಮೌರ್ಯ ವೃತ್ತದಲ್ಲಿ, ಪ್ರವೀಣ್ ಕುಮಾಣ ಮೇಖ್ರಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ರಾಜಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಇಲ್ಲಿಯೂ ಪೊಲೀಸರು ಪ್ರತಿಭಟನಾಕಾರನ್ನು ತಡೆದರು. ಪ್ರತಿಭಟನೆ ವೇಳೆ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಎಮ್ಮೆ ಏರಿ ಪ್ರತಿಭಟಿಸಿದರು.

ದುಪ್ಪಟ್ಟು ವಸೂಲಿ: ಬಂದ್ ಅನ್ನು ಬಂಡವಾಳ ಮಾಡಿಕೊಂಡ ಖಾಸಗಿ ಬಸ್‍ಗಳು ದುಪ್ಪಟ್ಟು ಹಣ ವಸೂಲಿ ಮಾಡಿದರೆ, ಓಲಾ, ಊಬರ್ ಕ್ಯಾಬ್ ಸಂಘದ ಸದಸ್ಯರು ಕಾರಿಗೆ ಹಗ್ಗ ಕಟ್ಟಿ ಎಳೆದು ಪ್ರತಿಭಟನೆ ನಡೆಸಿದರು. ಭಾರತ್ ಬಂದ್ ಕಾರಣ ಬೇರೆ ಊರಿಂದ ಬಂದ ಸಾರ್ವಜನಿಕರು ಬೆಂಗಳೂರು ಸೇರಿದಂತೆ ಹಲವು ಬಸ್ ಇಲ್ಲದೇ ಪರದಾಡಿದರು. ಮಧ್ಯಾಹ್ನ 3 ಗಂಟೆ ಬಳಿ ನಗರಗಳುಸ ಯಥಾ ಸ್ಥಿತಿಗೆ ತಲುಪಿತ್ತು. ಬಂದ್ ನಿಂದ ಬೆಳಗ್ಗೆ ಇಂದ ರಸ್ತೆಗಳಿಯದ ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಸಂಚಾರ ಆರಂಭವಾಯಿತು. ಮಾಲ್‍ಗಳು, ಚಿತ್ರಮಂದಿರಗಳು ಸಂಜೆ ವೇಳೆಗೆ ಪುನರ್ ಆರಂಭವಾದವು.

https://www.youtube.com/watch?v=iYMBznDqMeQ

Share This Article
Leave a Comment

Leave a Reply

Your email address will not be published. Required fields are marked *