ಭಾನು ವೆಡ್ಸ್ ಭೂಮಿ: ಪ್ರೇಮ ಕಥೆಗುಂಟು ಮಾಸ್ ನಂಟು!

Public TV
1 Min Read

ಬೆಂಗಳೂರು: ಜೆಕೆ ಆದಿ ಚೊಚ್ಚಲ ನಿರ್ದೇಶನದ ಭಾನು ವೆಡ್ಸ್ ಭೂಮಿ ಚಿತ್ರ ಈ ವಾರ ರಾಜ್ಯಾದ್ಯಂತ ತೆರೆ ಕಾಣಲಿದೆ. ಈ ಶೀರ್ಷಿಕೆಯೇ ರೊಮ್ಯಾಂಟಿಕ್ ಲವ್ ಸ್ಟೋರಿಯ ಛಾಯೆ ಹೊಂದಿದೆ. ಅದಕ್ಕೆ ತಕ್ಕುದಾದ ಪ್ರೇಮ ವೃತ್ತಾಂತವನ್ನೇ ಈ ಸಿನಿಮಾ ಒಳಗೊಂಡಿದೆ ಎಂಬುದೂ ಸತ್ಯ. ಆದರೆ ಇಲ್ಲಿರೋ ಕಥೆ ಪ್ರೀತಿ ಪ್ರೇಮಗಳಿಗೆ ಮಾತ್ರವೇ ಸೀಮಿತವೇ ಎಂಬ ಪ್ರಶ್ನೆಗೆ ಚಿತ್ರತಂಡದ ಕಡೆಯಿಂದ ಭಾನು ವೆಡ್ಸ್ ಭೂಮಿಯ ಬಗ್ಗೆ ಮತ್ತೊಂದಷ್ಟು ವಿಚಾರಗಳೂ ಹೊರ ಬರುತ್ತವೆ.

ಪ್ರೀತಿಗಾಗಿ ಯುದ್ಧ ನಡೆದದ್ದೂ ಇದೆ. ಆಧುನಿಕ ಕಾಲಮಾನದಲ್ಲಿ ಅದಕ್ಕಾಗಿ ಹೊಡೆದಾಟ ಬಡಿದಾಟಗಳೂ ಸಂಭವಿಸುತ್ತಿವೆ. ಅದೇ ರೀತಿ ಬಾನು ವೆಡ್ಸ್ ಭೂಮಿ ಚಿತ್ರದಲ್ಲಿಯೂ ಪಕ್ಕಾ ಮಾಸ್, ಆಕ್ಷನ್ ದೃಶ್ಯಾವಳಿಗಳೂ ಇವೆ. ಹಾಗಂತ ಅವುಗಳೇನು ಕಮರ್ಶಿಯಲ್ ಟಚ್ ಕೊಡುವುದಕ್ಕೆ ಬೇಕೆಂದೇ ಪೋಣಿಸಿದಂಥವುಗಳಲ್ಲ. ಇಲ್ಲಿ ಮಾಸ್ ಮತ್ತು ಆಕ್ಷನ್ ಸನ್ನಿವೇಶಗಳು ಕಥೆಯ ಓಘಕ್ಕೆ ಪೂರಕವಾಗಿವೆಯಂತೆ. ಈ ಆಕ್ಷನ್ ಸೀನುಗಳನ್ನೂ ಕೂಡಾ ಅಷ್ಟೇ ತಾಜಾತನದಿಂದ ಕಟ್ಟಿಕೊಡಲು ಪ್ರಯತ್ನಿಸಲಾಗಿದೆ.

ಇಂಥಾ ಆಕ್ಷನ್ ದೃಶ್ಯಾವಳಿಗಳಲ್ಲಿ ನವ ನಾಯಕ ಸೂರ್ಯಪ್ರಭ್ ಪಳಗಿದ ನಟನಂತೆಯೇ ನಟಿಸಿದ್ದಾರಂತೆ. ಶಾಲಾ ಕಾಲೇಜು ದಿನಗಳಲ್ಲಿಯೇ ನಟನೆಯ ಗುಂಗು ಹತ್ತಿಸಿಕೊಂಡಿದ್ದ ಇವರು ಉತ್ತರಕರ್ನಾಟಕದ ನವಲಗುಂದದ ಹುಡುಗ. ಆದರೆ, ಓದು, ಬದುಕಿನ ಅನಿವಾರ್ಯತೆಗಳು ಸೂರ್ಯನನ್ನು ಬೇರೆಯದ್ದೇ ಟ್ರ್ಯಾಕಿಗಿಳಿಸಿತ್ತು. ಇನ್ಫೋಸಿಸ್‍ನಲ್ಲಿ ಸಾಫ್ಟ್‍ವೇರ್ ಇಂಜಿನಿಯರ್ ಆಗಿ ಕೈ ತುಂಬಾ ಸಂಬಳ ಪಡೆಯುತ್ತಿದ್ದರೂ ಕಲೆಯ ಸೆಳೆತವೆಂಬುದು ಅವರನ್ನು ನಾಯಕ ನಟನಾಗಿ ಪಾದಾರ್ಪಣೆ ಮಾಡಲು ಪ್ರೇರೇಪಿಸಿದೆ.

ಈ ಚಿತ್ರದ ನಾಯಕನಿಗಾಗಿ ಆಡಿಷನ್ ನಡೆಸಿದ್ದ ನಿರ್ದೇಶಕ ಜೆಕೆ ಆದಿ ಕಥೆಗೆ ಸೂಟ್ ಆಗುವಂತಿದ್ದಾರೆಂಬ ಕಾರಣದಿಂದಲೇ ಸೂರ್ಯಪ್ರಭ್ ಅವರನ್ನು ಆಯ್ಕೆ ಮಾಡಿದ್ದರಂತೆ. ಆ ನಂತರದಲ್ಲಿ ಶ್ರದ್ಧೆಯಿಂದ ಫೈಟಿಂಗ್, ಡ್ಯಾನ್ಸ್ ಸೇರಿದಂತೆ ಎಲ್ಲವನ್ನೂ ಕಲಿತುಕೊಂಡ ಸೂರ್ಯ ಒಳ್ಳೆಯ ಅಭಿನಯ ನೀಡಿದ್ದಾರಂತೆ. ಈ ಚಿತ್ರದಲ್ಲಿ ನಾಯಕ ಸೂರ್ಯ ಹೊಸಬರಾದರೂ ನಾಯಕಿಯಾಗಿರೋ ಮಲೆನಾಡ ಹುಡುಗಿ ರಿತಿಷಾ ಮಲ್ನಾಡ್ ಪಾಲಿಗಿದು ಆರನೇ ಚಿತ್ರವಂತೆ.

Share This Article
Leave a Comment

Leave a Reply

Your email address will not be published. Required fields are marked *