ಈ ವಾರ ಪ್ರೇಕ್ಷಕರ ಮುಂದೆ ಅವತರಿಸಲಿದ್ದಾನೆ ಭೈರವ ಡಾಲಿ!

Public TV
1 Min Read

ಬೆಂಗಳೂರು: ಟಗರು ಚಿತ್ರದಲ್ಲಿ ಡಾಲಿ ಪಾತ್ರದ ಮೂಲಕ ವಿಜೃಂಭಿಸಿದ್ದರಲ್ಲಾ ಧನಂಜಯ್? ಅದಾಗಿ ವಾರದೊಪ್ಪತ್ತಿನಲ್ಲಿಯೇ ರಾಮ್ ಗೋಪಾಲ್ ವರ್ಮಾ ಅವರನ್ನು ಹೈಜಾಕ್ ಮಾಡಿದ್ದರು. ತಾವು ನಿರ್ಮಾಣ ಮಾಡಲಿರೋ ಚಿತ್ರಕ್ಕೆ ಏಕಾಏಕಿ ಧನಂಜಯ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿ ಚಿತ್ರೀಕರಣಕ್ಕೂ ಚಾಲನೆ ನೀಡಿ ಬಿಟ್ಟಿದ್ದರು. ಹಾಗೆ ಒಂದೇ ಉಸಿರಿಗೆ ತಯಾರಾಗಿ ನಿಂತಿರೋ ಚಿತ್ರ ಭೈರವ ಗೀತಾ!

ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗಿ, ದಕ್ಷಿಣ ಭಾರತೀಯ ಚಿತ್ರರಂಗದ ಗಮನ ಸೆಳೆದುಕೊಂಡಿರೋ ಈ ಚಿತ್ರ ಇದೇ ವಾರ ಅದ್ಧೂರಿಯಾಗಿ ತೆರೆ ಕಾಣಲಿದೆ!

ರಾಮ್ ಗೋಪಾಲ್ ವರ್ಮಾ ಯಾವುದನ್ನೂ, ಯಾರನ್ನೂ ಒಪ್ಪಿಕೊಳ್ಳುವ ಜಾಯಮಾನದವರಲ್ಲ. ಅವರು ಎಂತೆಂಥಾ ನಿರ್ದೇಶಕರನ್ನು, ನಟ ನಟಿಯರನ್ನೇ ಗೇಲಿ ಮಾಡಿ ನಕ್ಕು ವಿವಾದಕ್ಕೀಡಾದ ಅದೆಷ್ಟೋ ಉದಾಹರಣೆಗಳಿದ್ದಾವೆ. ಅಂಥಾದ್ದರಲ್ಲಿ ಟಗರು ಚಿತ್ರದಲ್ಲಿನ ಡಾಲಿ ಪಾತ್ರವನ್ನು ಅವರು ಒಪ್ಪಿಕೊಂಡಿದ್ದೇ ದೊಡ್ಡ ವಿಚಾರ.

ಹಾಗೆ ಡಾಲಿಯನ್ನು ಮೆಚ್ಚಿ ಕೊಂಡಾಡಿದ ವರ್ಮಾ ಭೈರವ ಗೀತಾ ಚಿತ್ರದ ರಗಡ್ ಪ್ರೇಮ್ ಕಹಾನಿಯ ಪಾತ್ರವಾಗಿಸಿದ್ದಾರೆ. ಉಳ್ಳವರ ವಿರುದ್ಧ ಪ್ರೀತಿಯನ್ನಷ್ಟೇ ಬೆನ್ನಿಗಿಟ್ಟುಕೊಂಡು ತಿರುಗಿ ಬೀಳೋ ಪ್ರೇಮಿಯ ಕಥೆಯಾಧಾರಿತವಾದ ಈ ಚಿತ್ರದಲ್ಲಿ ಭರಪೂರ ರೊಮ್ಯಾನ್ಸೂ ಇದೆ ಎಂಬುದು ಪೋಸ್ಟರುಗಳ ಮೂಲಕವೇ ಸಾಬೀತಾಗಿದೆ. ಈ ಮೂಲಕವೇ ಭೈರವ ಗೀತಾ ಬಗ್ಗೆ ಎಲ್ಲೆಡೆ ಕುತೂಹಲ ನಿಗಿನಿಗಿಸೋ ಕೆಂಡದಂತಾಗಿದೆ. ಅಸಲಿಗೆ ಭೈರವನ ಖದರ್ ಎಂಥಾದ್ದೆಂಬುದು ಈ ವಾರ ಜಾಹೀರಾಗಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *