ಶಿಕ್ಷಕನಿಂದ 1 ಲಕ್ಷ ರೂ. ಲಂಚ ಪಡೆಯುವಾಗ ಭದ್ರಾವತಿ ಬಿಇಒ ʻಲೋಕಾʼ ಬಲೆಗೆ

1 Min Read

ಶಿವಮೊಗ್ಗ: ಶಿಕ್ಷಕರೊಬ್ಬರ ವಾರ್ಷಿಕ ವೇತನ ಬಡ್ತಿ ಹಾಗೂ ಇತರೆ ಸರ್ಕಾರಿ ಭತ್ಯೆಗಳನ್ನು ಮಂಜೂರು ಮಾಡುವುದಕ್ಕಾಗಿ ಲಂಚಕ್ಕೆ ಬೇಡಿಕೆ ಇಟ್ಟು ಹಣ ಸ್ವೀಕರಿಸುತ್ತಿದ್ದ ವೇಳೆ ಭದ್ರಾವತಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕಾಯುಕ್ತ ಖೆಡ್ಡಕ್ಕೆ ಬಿದ್ದಿದ್ದಾರೆ. ಈ ಪ್ರಕರಣದಲ್ಲಿ ಬಿಇಒ ಮಧ್ಯವರ್ತಿಯಾಗಿದ್ದವನನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದವರನ್ನು ಬಿಇಒ ಎ.ಕೆ.ನಾಗೇಂದ್ರಪ್ಪ ಹಾಗೂ ಮಂಜುನಾಥ್‌ ಎಂದು ಗುರುತಿಸಲಾಗಿದೆ. ಶಿಕ್ಷಕರಾದ ಲಿಂಗರಾಜು ಅವರು 2011ರಿಂದ 2023ರವರೆಗೆ ತಮ್ಮ ಇಲಾಖೆಯಿಂದ ಬರಬೇಕಾದ ವಾರ್ಷಿಕ ವೇತನ ಬಡ್ತಿ ಹಾಗೂ ಇತರೆ ಭತ್ಯೆಗಳನ್ನು ಮಂಜೂರು ಮಾಡುವಂತೆ ಹಲವು ಬಾರಿ ಬಿಇಒ ಹಾಗೂ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಅಲ್ಲದೇ ಕಛೇರಿಗೆ ಅಲೆದು ಅಲೆದು ಸುಸ್ತಾಗಿ ಹೋಗಿದ್ದರು. ಕೆಲಸ ಮಾತ್ರ ಆಗಿರಲಿಲ್ಲ. ಇತ್ತೀಚೆಗೆ ಬಿಇಒ ಮತ್ತು ಮಧ್ಯವರ್ತಿ ಇಬ್ಬರೂ ಸೇರಿಕೊಂಡು ಎಲ್ಲಾ ಆರ್ಥಿಕ ಸೌಲಭ್ಯಗಳನ್ನು ಮಾಡಿಕೊಡುವುದಕ್ಕೆ 4 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಖಾತೆ ಬದಲಾವಣೆಗಾಗಿ 8,500 ರೂ. ಲಂಚ ಸ್ವೀಕಾರ – ಲೋಕಾ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿ

ಈ ಬಗ್ಗೆ ಲಿಂಗರಾಜು ಅವರು ಮಾ.2 ರಂದು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಅದೇ ದಿನ ಸಂಜೆ 7 ಗಂಟೆ ವೇಳೆಗೆ ಭದ್ರಾವತಿ ಬಿಇಒ ಕಚೇರಿಯ ಕೊಠಡಿಯಲ್ಲಿ, ಲಿಂಗರಾಜು ಅವರಿಂದ 1 ಲಕ್ಷ ರೂ. ಲಂಚದ ಹಣವನ್ನು ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಹಣವನ್ನು ಜಪ್ತಿ ಮಾಡಿದ್ದಾರೆ. ಅಲ್ಲದೇ ನಾಗೇಂದ್ರಪ್ಪ ಎ.ಕೆ. ಮತ್ತು ಮಧ್ಯವರ್ತಿ ಮಂಜುನಾಥನನ್ನು ವಶಕ್ಕೆ ಪಡೆಯಲಾಗಿದೆ.

ದೂರಿನನ್ವಯ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988 (ತಿದ್ದುಪಡಿ-2018)ರ ಕಲಂ 7(ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಲಂಚ ಪಡೆಯುವಾಗ ಸಿಕ್ಕಿಬಿದ್ದ ಚಂದ್ರು ಲಮಾಣಿ – ಶಾಸಕರ ಉಚ್ಚಾಟನೆಗೆ ಬಿಜೆಪಿ ಚಿಂತನೆ

Share This Article