ಗಮನಿಸಿ, ಐಟಿ ರಿಟರ್ನ್ಸ್ ಹೆಸರಲ್ಲಿ ಬರೋ ಇಮೇಲ್ ಓಪನ್ ಮಾಡೋ ಮೊದಲು ಈ ಸುದ್ದಿ ಓದಿ

Public TV
2 Min Read

ಮುಂಬೈ: ಐಟಿ ರಿಟರ್ನ್ಸ್ ಸಲ್ಲಿಸಲು ಡೆಡ್‍ಲೈನ್ ಹತ್ತಿರವಾಗುತ್ತಿರುವುದರಿಂದ ಸೈಬರ್ ವಂಚಕರು ಜನರಿಗೆ ಟೋಪಿ ಹಾಕಲು ಮುಂದಾಗಿದ್ದಾರೆ. ಐಟಿ ಇಲಾಖೆಗೆ ಸಂಬಂಧ ಪಟ್ಟ ಇಮೇಲ್ ಮಾದರಿಯಲ್ಲೇ ಅದೇ ತರಹದ ಇಮೇಲನ್ನು ಸೈಬರ್ ವಂಚಕರು ಸೃಷ್ಟಿಸಿದ್ದಾರೆ. ಹೀಗಾಗಿ ನೀವು ಆದಾಯ ತೆರಿಗೆದಾರರಾಗಿದ್ದರೆ ವಂಚಕರ ಜಾಲದಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ.

ಹೌದು. ಆದಾಯ ತೆರಿಗೆ ರಿಟರ್ನ್ಸ್ ಹಣವನ್ನು ಮರಳಿ ಪಡೆಯಲು ನೆಟ್ ಬ್ಯಾಂಕಿಂಗ್ ಮಾಹಿತಿಗಳನ್ನು ನೀಡಬೇಕೆಂದು ಸ್ಪ್ಯಾಮ್ ಮೇಲ್‍ಗಳ ಮೂಲಕ ಆದಾಯ ತೆರಿಗೆದಾರರನ್ನು ವಂಚಿಸಲು ನಾನಾ ರೀತಿಯ ಪ್ರಯತ್ನಗಳನ್ನು ಸೈಬರ್ ವಂಚಕರು ನಡೆಸಿರುವುದು ಈಗ ಬೆಳಕಿಗೆ ಬಂದಿದೆ.

ಸರಕಾರಿ ವೆಬ್‍ಸೈಟ್ ಅಥವಾ ಇಮೇಲ್ ವಿಳಾಸಗಳ ರೀತಿಯಲ್ಲೇ ಸೈಬರ್ ವಂಚಕರು ನಕಲಿ ವೆಬ್‍ಸೈಟ್, ಇಮೇಲ್‍ಗಳನ್ನು ಸೃಷ್ಟಿಸಿ ಆದಾಯ ತೆರಿಗೆದಾರರನ್ನು ಬಲೆಗೆ ಕೆಡವಲು ಯತ್ನಿಸಿದ್ದಾರೆ. ಐಟಿ ರಿಟರ್ನ್ಸ್ ಸಲ್ಲಿಸಲು ಆದಾಯ ಇಲಾಖೆ ತನ್ನ @donotreplyincometaxindiaefiling.gov.in ಇಮೇಲ್ ಮೂಲಕ ಸಂದೇಶ ಬರುತ್ತದೆ. ಆದರೆ ಸೈಬರ್ ವಂಚಕರು @donotreplyincometaxindiafilling.gov.in ಎಂಬ ನಕಲಿ ಮೇಲ್ ಐಡಿಯನ್ನು ಸೃಷ್ಟಿಸಿದ್ದಾರೆ. ಇದರಲ್ಲಿ efiling ನಲ್ಲಿ e ನಾಪತ್ತೆಯಾಗಿದ್ದು, filing ಬದಲು filling ಎಂದು ಬಳಸಿ ನಕಲಿ ಮೇಲ್ ಐಡಿ ಓಪನ್ ಮಾಡಿದ್ದಾರೆ.

ಈ ಕುರಿತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, ನಾವು ನಮ್ಮ ವೆಬ್‍ಸೈಟಿನಲ್ಲಿ ಹಾಗೂ ಮೊಬೈಲ್‍ಗೆ ಸಂದೇಶಗಳನ್ನು ಕಳುಹಿಸಿ ಆನ್‍ಲೈನ್ ವಂಚಕರ ಬಗ್ಗೆ ಎಚ್ಚರಿಕೆ ನೀಡುತ್ತಿರುತ್ತೇವೆ. ಅನುಮಾನಾಸ್ಪದ ಇ-ಮೇಲ್‍ಗಳಿಗೆ ಜನರು ಯಾವುದೇ ಕಾರಣಕ್ಕೂ ಉತ್ತರಿಸುವುದು ಬೇಡ. ಇಂತಹ ವೆಬ್ ಸೈಟ್‍ಗಳಲ್ಲಿ ಯಾವುದೇ ಕಾರಣಕ್ಕೂ ನಿಮ್ಮ ಬ್ಯಾಂಕ್ ಅಕೌಂಟ್‍ನ ಮಾಹಿತಿ, ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡಿನ ಮಾಹಿತಿಯನ್ನು ನೀಡಬೇಡಿ. ಈ ರೀತಿಯ ಮಾಹಿತಿಗಳನ್ನು ಆದಾಯ ತೆರಿಗೆ ಇಲಾಖೆ ಕೇಳುವುದಿಲ್ಲ ಎಂದು ತಿಳಿಸಿದ್ದಾರೆ.

ಜುಲೈ 31 ಡೆಡ್‍ಲೈನ್ ಹತ್ತಿರ ಬರುತ್ತಿರುವುದರಿಂದ ಈ ರೀತಿಯ ಸ್ಪ್ಯಾಮ್ ಮೇಲ್‍ಗಳು ಹೆಚ್ಚಾಗುತ್ತಿವೆ. ಐಟಿ ಇಲಾಖೆ ಕಡೆಯಿಂದ ಎಂದು ಹೇಳಿಕೊಂಡು ವಂಚಕರು ನಿಮಗೆ ದೂರವಾಣಿ ಕರೆಗಳನ್ನು ಹಾಗೂ ಇ-ಮೇಲ್ ಮಾಡುತ್ತಿರುತ್ತಾರೆ. ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಯಾವುದೇ ಕಾರಣಕ್ಕೂ ಗ್ರಾಹಕರಿಗೆ ಫೋನ್ ಮಾಡಿ ದಾಖಲೆಗಳನ್ನು ಕೇಳುವುದಿಲ್ಲ. ಈ ಕುರಿತು ಗ್ರಾಹಕರು ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *