ಮೋದಿ ಗೆದ್ದರೆ ಶಾಂತಿ ಮಾತುಕತೆಗೆ ಉತ್ತಮ ಅವಕಾಶ ಸಿಗುತ್ತೆ: ಇಮ್ರಾನ್ ಖಾನ್

Public TV
2 Min Read

– ಭಾರತದಲ್ಲಿ ಮುಸ್ಲಿಂ, ಮುಸ್ಲಿಮೇತರ ಮೇಲೆ ದಾಳಿ ಮಾಡಲಾಗುತ್ತಿದೆ

ಇಸ್ಲಾಮಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದರೆ ಭಾರತದೊಂದಿಗೆ ಶಾಂತಿ ಮಾತುಕತೆಗೆ ಉತ್ತಮ ಅವಕಾಶ ಸಿಗುತ್ತದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಗುರುವಾರ ಮಾತನಾಡಿದ ಇಮ್ರಾನ್ ಖಾನ್ ಅವರು, ಲೋಕಸಭಾ ಚುನಾವಣೆ ಬಳಿಕ ಭಾರತದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಪಾಕಿಸ್ತಾನದ ಜೊತೆಗಿರುವ ಕಾಶ್ಮೀರದ ಸಮಸ್ಯೆ ಬಗೆಹರಿಸಲು ಸ್ವಲ್ಪ ಭಯಪಡುವ ಸಾಧ್ಯತೆಯಿದೆ. ಒಂದು ವೇಳೆ ಬಲಪಂಥೀಯ ಪಕ್ಷವಾದ ಬಿಜೆಪಿಯು ಅಧಿಕಾರಕ್ಕೆ ಬಂದರೆ ಸಮಸ್ಯೆಗೆ ಕೆಲವು ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಈಗ ನಡೆಯುತ್ತಿರುವ ಬೆಳವಣಿಗೆಯನ್ನು ನೋಡುತ್ತೇನೆ ಎಂದು ಯಾವತ್ತೂ ಯೋಚನೆ ಮಾಡಿರಲಿಲ್ಲ. ಭಾರತದಲ್ಲಿ ಮುಸ್ಲಿಂ ಮತ್ತು ಮುಸ್ಲಿಮೇತರ ಮೇಲೆ ದಾಳಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಭಾರತೀಯ ಮುಸ್ಲಿಮರು ಹಲವು ವರ್ಷಗಳಿಂದಲೂ ತಮ್ಮ ಪರಿಸ್ಥಿತಿಯ ಬಗ್ಗೆ ಸಂತೋಷವಾಗಿದ್ದರು. ಆದರೆ ಈಗ ತೀವ್ರ ಹಿಂದೂ ರಾಷ್ಟ್ರೀಯತೆಯಿಂದಾಗಿ ಅವರಲ್ಲಿ ಆತಂಕ ಶುರುವಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಂತೆ ಭಯ ಮತ್ತು ರಾಷ್ಟ್ರೀಯತೆ ಭಾವದಿಂದಲೇ ಅಧಿಕಾರಕ್ಕೆ ಬಂದವರು. ಜಮ್ಮು ಮತ್ತು ಕಾಶ್ಮೀರದ ಜನರಿಗೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸುವ ಭರವಸೆಯನ್ನು ಬಿಜೆಪಿಯು ದಶದ ಜನತೆ ನೀಡಿದೆ. ಇದು ಜಮ್ಮು-ಕಾಶ್ಮೀರದ ಜನರ ಆತಂಕಕ್ಕೆ ಕಾರಣವಾಗಿದ್ದು, ಇದು ಚಿಂತಿಸಬೇಕಾದ ವಿಷಯವಾಗಿದೆ ಎಂದು ಹೇಳಿದ್ದಾರೆ.

ಕಾಶ್ಮೀರ ವಿಚಾರವಾಗಿ ಪಾಕಿಸ್ತಾನ ಹಾಗೂ ಭಾರತದ ಮಧ್ಯೆ 1947ರಿಂದಲೂ ಹೋರಾಟ ನಡೆದಿದೆ. ಪುಲ್ವಾಮಾದಲ್ಲಿ 2019 ಫೆಬ್ರವರಿ 14ರಂದು ನಡೆದ ಆತ್ಮಾಹುತಿ ಬಾಂಬ್ ದಾಳಿಯಿಂದ ಪರಿಸ್ಥಿತಿ ಮತ್ತಷ್ಟು ಉದ್ವಿಘ್ನಗೊಂಡಿತ್ತು. ಈ ದಾಳಿಯಲ್ಲಿ 40 ಸಿಆರ್‍ಪಿಎಫ್‍ನ 40 ಯೋಧರು ಹುತಾತ್ಮರಾಗಿದ್ದಾರೆ ಎಂದರು.

ಪಾಕಿಸ್ತಾನ ಮೂಲದ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ಪುಲ್ವಾಮಾ ದಾಳಿಯನ್ನು ಮಾಡಿದೆ ಎನ್ನಲಾಗಿತ್ತು. ಇದು ಪಾಕಿಸ್ತಾನದ ಗಡಿ ದಾಟಿ ಭಾರತೀಯ ವಾಯು ಪಡೆ ವಿಮಾನಗಳು ಬಂದು ಉಗ್ರರ ಮೂರು ತರಬೇತಿ ನೆಲೆಯ ಮೇಲೆ ಬಾಂಬ್ ದಾಳಿ ಮಾಡಲು ಪ್ರೇರಣೆ ನೀಡಿತ್ತು ಎಂದು ಏರ್ ಸ್ಟ್ರೈಕ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಲೋಕಸಭಾ ಚುನಾವಣೆಗೆ ತಿರುವು ನೀಡುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ವಾರದಲ್ಲಿ ಪಾಕಿಸ್ತಾನದ ವಿರುದ್ಧ ಮಿಲಿಟರಿ ದಾಳಿ ಮಾಡುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *