ಗಬ್ಬರ್ ಸಿಂಗ್ ಹಾಡಿಗೆ ಡ್ಯಾನ್ಸ್ ಮಾಡಿಸಿದ್ದ ಪೊಲೀಸಪ್ಪನಿಗೆ ಸುಣ್ಣ ಬಣ್ಣ ಕಂಟಕ!

Public TV
1 Min Read

ಕೋಲಾರ: ಸಾಮಾನ್ಯವಾಗಿ ಕಟ್ಟಡಕ್ಕೆ ಸುಣ್ಣ ಬಣ್ಣ ಹಚ್ಚಿದರೆ ಅದಕ್ಕಂಟಿದ್ದ ಪಾಪ ಕಳೆದು ಹೊಸತನ ಮೂಡುತ್ತೆ ಅನ್ನೋ ನಂಬಿಕೆ ನಮ್ಮಲ್ಲಿದೆ. ಆದ್ರೆ ಇಲ್ಲೊಂದು ಸರ್ಕಾರಿ ಕಟ್ಟಡಕ್ಕೆ ಸುಣ್ಣ ಬಣ್ಣ ಬಳಿದ್ರೆ ಸಾಕು, ಬಣ್ಣ ಬಳಿಸಿದವರ ಬದುಕಿಗೆ ಕಪ್ಪುಚುಕ್ಕೆ ಬೀಳುತ್ತೆ. ಆಶ್ಚರ್ಯ ಆದ್ರೂ ನಂಬಲೇ ಬೇಕು ಅಧಿಕಾರಿಗಳಿಗೆ ಮಾರವಾಗಿರುವ ಬಣ್ಣದ ಕಥೆ.

ಪೊಲೀಸ್ ಠಾಣೆಯಲ್ಲಿ ಆರೋಪಿಗೆ ಗಬ್ಬರ್ ಸಿಂಗ್ ಹಾಡಿಗೆ ಡ್ಯಾನ್ಸ್ ಮಾಡಿಸಿದ್ದ ಕೋಲಾರದ ಬೇತಮಂಗಲ ಠಾಣೆ ಪಿಎಸ್‍ಐ ಹೊನ್ನೇಗೌಡ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರು. ಅಲ್ಲದೆ ಕೊನೆಗೆ ಜಾತಿನಿಂದನೆ ಆರೋಪದಲ್ಲಿ ಅಮಾನತಾಗಿ ಮನೆಗೆ ಹೋಗಿದ್ದಾರೆ. ಆದರೆ ಈ ಪೊಲೀಸ್ ಸ್ಟೇಷನ್ ವಿಚಾರದಲ್ಲಿ ಹೊಸ ಗುಸು ಗುಸು ಶುರುವಾಗಿದೆ.

ಪೊಲೀಸ್ ಸ್ಟೇಷನ್‍ಗೆ ಯಾರಾದ್ರೂ ಸುಣ್ಣ ಬಣ್ಣ ಬಳಿಸಿದ್ರೆ ಕಂಟಕ ಎದುರಾಗಿ ಆಪಾದನೆಗೆ ಗುರಿಯಾಗ್ತಾರಂತೆ. ಪಿಎಸ್‍ಐ ಹೊನ್ನೇಗೌಡ ಕೂಡಾ ಈ ಘಟನೆ ನಡೆಯೋ 2 ವಾರಗಳ ಹಿಂದಷ್ಟೇ ಹಿರಿಯ ಅಧಿಕಾರಿಗಳ ಭೇಟಿಯ ಸಲುವಾಗಿ ಸುಣ್ಣ ಬಣ್ಣ ಬಳಿಸಿದ್ದರು. ಕೆಲ ಸಿಬ್ಬಂದಿ ಸುಣ್ಣ ಬಳಿಯೋದು ಬೇಡ ಸಾರ್ ಅಂತ ಬುದ್ಧಿ ಹೇಳಿದ್ರೂ ಹೊನ್ನೇಗೌಡ ಕೇಳಿರಲಿಲ್ವಂತೆ.. ಹೀಗಾಗಿ ಹೊನ್ನೇಗೌಡ ಸಂಕಷ್ಟಕ್ಕೆ ಸುಣ್ಣಬಣ್ಣವೇ ಕಾರಣ ಅಂತಿದ್ದಾರೆ ಗ್ರಾಮಸ್ಥರು.

ಇಂಥಹ ಘಟನೆ ನಡೆದಿರೋದು ಇದೇ ಮೊದಲಲ್ಲ. ಈ ಹಿಂದೆ ಪಿಎಸ್‍ಐ ಆಗಿದ್ದ ಜಗದೀಶ್ ಎಂಬವರು ಠಾಣೆಗೆ ಸುಣ್ಣ ಬಣ್ಣ ಬಳಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದು ಅಮಾನತ್ತಾಗಿ ಹೊರನಡೆದಿದ್ರು. ಇಷ್ಟೇ ಅಲ್ಲ. ಈ ಇಬ್ಬರೂ ಪಿಎಸ್‍ಐಗಳೂ ಪೊಲೀಸ್ ಸ್ಟೇಷನ್ ಜೊತೆಗೆ ಗ್ರಾಮದ ಕೆರೆ ದಂಡೆಯ ಮೇಲಿರುವ ಶಿವನ ದೇವಾಲಯಕ್ಕೂ ಬಣ್ಣ ಬಳಿಸಿದ್ದರು. ಹೀಗಾಗಿ ಪೊಲೀಸ್ ಠಾಣೆ ಮತ್ತು ಶಿವನ ದೇವಾಲಯಕ್ಕೆ ಸುಣ್ಣ ಬಳಿದ್ರೆ ಕಂಟಕ ಗ್ಯಾರಂಟಿ ಅನ್ನೋ ಗುಸು ಗುಸು ಸುದ್ದಿ ಹರಿದಾಡುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *