ರಷ್ಯಾ-ಉಕ್ರೇನ್‌ ಯುದ್ಧ ನಿಲ್ಲಿಸಲು ಮುಂದಾದ ಟ್ರಂಪ್‌ಗೆ ಯುರೋಪಿಯನ್ ಒಕ್ಕೂಟ ಬೆಂಬಲ – ನಾಳೆಯ ಸಭೆ ಮೇಲೆ ನಿಗಾ

Public TV
1 Min Read

– ನಾಳೆ ಟ್ರಂಪ್‌-ಝಲೆನ್ಸ್ಕಿ ಮಹತ್ವದ ಸಭೆ
– ರಷ್ಯಾದ ಮೇಲೆ ಇನ್ನಷ್ಟು ನಿರ್ಬಂಧ ಹೇರುವ ಎಚ್ಚರಿಕೆ

ವಾಷಿಂಗ್ಟನ್‌: ಕಳೆದ ಮೂರು ವರ್ಷಗಳಿಂದಲೂ ನಡೆಯುತ್ತಿರುವ ರಷ್ಯಾ-ಉಕ್ರೇನ್‌ ಯುದ್ಧವನ್ನ (Russia Ukraine War) ನಿಲ್ಲಿಸಲು ಶತಪ್ರಯತ್ನ ಮಾಡುತ್ತಿರುವ ಟ್ರಂಪ್‌ಗೆ (Donald Trump) ಈಗ ಯುರೋಪಿಯನ್ ಒಕ್ಕೂಟದ ಬೆಂಬಲ ಸಿಕ್ಕಿದೆ.

ಹೌದು. ಟ್ರಂಪ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ಬಳಿಕ ಪ್ರತಿಕ್ರಿಯಿಸಿದ ಯೂರೋಪಿಯನ್ ಒಕ್ಕೂಟದ ದೇಶಗಳು, ಮುಂದಿನ ಮಾತುಕತೆಯಲ್ಲಿ ಟ್ರಂಪ್‌ ಮತ್ತು ಪುಟಿನ್ ಮಾತ್ರ ಇರಬಾರದು. ಉಕ್ರೇನ್‌ ಅಧ್ಯಕ್ಷ ವೊಲೊಡಿಮಿ‌ರ್ ಝಲೆನ್‌ಸ್ಕಿ (Volodymyr Zelensky) ಅವರೂ ಇರಬೇಕು ಎಂದು ಆಗ್ರಹಿಸಿವೆ.

ಟ್ರಂಪ್‌ ಮತ್ತು ಝಲೆನ್‌ಸ್ಕಿ ಅವರೊಂದಿಗೆ ಕೆಲಸ ಮಾಡಲು ನಾವು ಸಿದ್ಧರಿದ್ದೇವೆ. ಟ್ರಂಪ್-ಪುಟಿನ್-ಝಲೆನ್‌ಸ್ಕಿ ಮೂವರೂ ಸೇರಿ ಮಾತುಕತೆ ನಡೆಸಬೇಕು. ನ್ಯಾಟೊಗೆ ಸೇರುವ ಉಕ್ರೇನ್‌ನ ಯತ್ನಕ್ಕೆ ರಷ್ಯಾವು ತಡೆಯೊಡ್ಡಬಾರದು ಎಂದು ಒಕ್ಕೂಟವು ಹೇಳಿದೆ.

ಉಕ್ರೇನ್‌ನಲ್ಲಿ ಯುದ್ಧ ನಿಲ್ಲುವವರೆಗೂ ನಾವು ರಷ್ಯಾದ ಮೇಲೆ ಒತ್ತಡ ಹೇರುವ ಕ್ರಮವನ್ನು ಮುಂದುವರಿಸಲಿದ್ದೇವೆ. ರಷ್ಯಾದ ಮೇಲೆ ಇನ್ನಷ್ಟು ನಿರ್ಬಂಧ ಹೇರುತ್ತೇವೆ. ರಷ್ಯಾದ ಯುದ್ಧದ ಆರ್ಥಿಕತೆಯು ನೆಲಸಮವಾಗಬೇಕು ಮತ್ತು ಶಾಂತಿ ಸ್ಥಾಪನೆಯಾಗಬೇಕು ಎಂದು ಒಕ್ಕೂಟ ಆಗ್ರಹಿಸಿದೆ.

ಒಪ್ಪಂದವಿಲ್ಲದೇ ಸಭೆ ಅಂತ್ಯ
ಇನ್ನೂ ಉಕ್ರೇನ್-ರಷ್ಯಾ ಸಂಘರ್ಷವನ್ನ ಕೊನೆಗೊಳಿಸುವ ನಿಟ್ಟಿನಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅಲಾಸ್ಕದಲ್ಲಿ ನಡೆಸಿದ ಸಭೆಯು ಯಾವುದೇ ಅಂತಿಮ ಒಪ್ಪಂದಗಳಿಲ್ಲದೇ ಅಂತ್ಯಗೊಂಡಿತು. ಆ ಬಳಿಕ ಯುರೋಪಿಯನ್‌ ಒಕ್ಕೂಟ ನಾಯಕರ ಜೊತೆಗೆ ಟ್ರಂಪ್‌ ಚರ್ಚೆ ಮಾಡಿದ್ದು, ಕದನ ವಿರಾಮಕ್ಕಲ್ಲ, ಯುದ್ಧವನ್ನೇ ನಿಲ್ಲಿಸುವ ಪ್ರಸ್ತಾಪ ಮಾಡಿದ್ದು, ಇದಕ್ಕೆ ಐರೋಪ್ಯ ರಾಷ್ಟ್ರಗಳು ಒಕ್ಕೂಟ ಬೆಂಬಲ ವ್ಯಕ್ತಪಡಿಸಿವೆ.

ನಾಳೆ ಹೈವೋಲ್ಟೇಜ್‌ ಸಭೆ
ಇನ್ನೂ ಸೋಮವಾರ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜೊತೆಗೆ ಟ್ರಂಪ್‌ ಹಾಗೂ ಇತರ ಯುರೋಪಿಯನ್ ನಾಯಕರು ವಾಷಿಂಗ್ಟನ್‌ನಲ್ಲಿ ಸಭೆ ನಡೆಸಲಿದ್ದಾರೆ. ಈ ಸಭೆಯ ಮೇಲೆ ವಿಶ್ವನಾಯಕರ ಚಿತ್ತ ನೆಟ್ಟಿದೆ

Share This Article