ಕಾರ್ಯಕರ್ತರಿಗೆ ಸ್ಥಾನಮಾನ ಕೊಡ್ಲಿಲ್ಲವೆಂದು ಎಚ್‍ಡಿಡಿ ಕಣ್ಣೀರು ಹಾಕಿದ್ದಾರೆ: ದತ್ತಾ

Public TV
2 Min Read

– ಸಮಾವೇಶ ಪ್ರಾರಂಭಕ್ಕೆ ಟೈಂ, ಘಳಿಗೆ ನೋಡಿದ ಜೆಡಿಎಸ್
– ಜೆಡಿಎಸ್ ಪಾದಯಾತ್ರೆ ಎರಡು ತಿಂಗಳು ಮುಂದೂಡಿಕೆ
– ಪ್ರಾದೇಶಿಕ ಪಕ್ಷ ಬೆಳೆಯಲು ಕುಟುಂಬ ರಾಜಕಾರಣ ಬೇಕು

ಬೆಂಗಳೂರು: ಪಕ್ಷದ ಕಾರ್ಯಕರ್ತರಿಗೆ ಸ್ಥಾನಮಾನ ನೀಡಲಿಲ್ಲ ಅಂತ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಕಣ್ಣೀರು ಹಾಕಿದ್ದಾರೆ ಎಂದು ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ವೈಎಸ್‍ವಿ ದತ್ತಾ ಹೇಳಿದ್ದಾರೆ.

ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಪಕ್ಷ ಇವತ್ತು ಸಂಕಷ್ಟದಲ್ಲಿ ಇದೆ. ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳುತ್ತೇವೆ. ಮತ್ತೆ ಪಕ್ಷ ಕಟ್ಟೋಣ. ಅಧಿಕಾರಿಕ್ಕೆ ಬಂದಾಗಲೆಲ್ಲ ನಮ್ಮ ಜೊತೆ ಸೇರಿಕೊಂಡವರು ಸರಿಯಾಗಿ ಮೆರೆಯುತ್ತಾರೆ. ಆದರೆ ನಮ್ಮ ಕಾರ್ಯಕರ್ತರಿಗೆ ಏನು ಸಿಗುವುದಿಲ್ಲ. ಆಗಿದ್ದು ಈಗ ಆಗಿ ಹೋಯಿತು. ಮತ್ತೆ ಪಕ್ಷ ಸಂಘಟನೆ ಮಾಡೋಣ ಎಂದು ಪಕ್ಷದ ಕಾರ್ಯಕರ್ತರಿಗೆ ಕರೆಕೊಟ್ಟಿದ್ದಾರೆ.

ರಾಜ್ಯದಲ್ಲಿ ಸಂಪುಟ ರಚನೆ ಮಾಡಲು ಬಿಜೆಪಿ ಹೈಕಮಾಂಡ್‍ಗೆ 15 ದಿನಗಳಿಂದ ಆಗಿಲ್ಲ. ನಮ್ಮ ರಾಜ್ಯದ ಮಂತ್ರಿಗಳು ಯಾರು ಆಗಬೇಕು ಅಂತ ಪ್ರಧಾನಿ ಮೋದಿ ತೀರ್ಮಾನ ಮಾಡುವುದು ಅಂದರೆ ನಮಗೆ ನಾಚಿಕೆ ಆಗಬೇಕು. ಇದು ಕರ್ನಾಟಕಕ್ಕೆ ಅವಮಾನ. ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಅದನ್ನು ನಿಭಾಯಿಸಲು ಯಾವ ಸಚಿವರೂ ಇಲ್ಲ. ಆದರೆ ಜೆಡಿಎಸ್ ರಾಜ್ಯದಿಂದಲೇ ಅಧಿಕಾರ ಮಾಡುತ್ತದೆ. ಹೀಗಾಗಿ ರಾಜ್ಯಕ್ಕೆ ಜೆಡಿಎಸ್ ಬೇಕು ಎಂದು ಬಿಜೆಪಿ ವಿರುದ್ಧ ಗುಡುಗಿದರು.

ಜೆಡಿಎಸ್ ಪಾದಯಾತ್ರೆಯು ಆಗಸ್ಟ್ 20ರಿಂದ ಆರಂಭವಾಗಬೇಕಿತ್ತು. ಆದರೆ ಮಳೆಗಾಲ, ಹಬ್ಬ ಹರಿದಿನ ಹಿನ್ನೆಲೆಯಲ್ಲಿ ಎರಡು ತಿಂಗಳು ಮುಂದೂಡಿಕೆ ಮಾಡಲಾಗಿದೆ ಎಂದು ತಿಳಿಸಿದರು.

ಪಕ್ಷ ಬೆಳೆಯಬೇಕಾದರೆ 18ರಿಂದ 35 ವರ್ಷದ ಯುವಕರು ಅವಶ್ಯಕತೆ ಇದೆ. ಅಂತಹ ಯುವಕರು ನಮ್ಮ ಪಕ್ಷಕ್ಕೆ ಸೇರಬೇಕು. ಯುವಕರ ಪಡೆ ನಿರ್ಮಾಣ ಮಾಡಿ ಪಕ್ಷ ಸಂಘಟನೆ ಮಾಡಬೇಕು ಎಂದು ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಟ್ಟರು.

ಕುಟುಂಬ ರಾಜಕಾರಣ ತಪ್ಪಲ್ಲ. ತಮಿಳುನಾಡು, ಆಂಧ್ರಪ್ರದೇಶ, ಒಡಿಶಾದಲ್ಲಿ ಕುಟುಂಬ ರಾಜಕಾರಣ ಪಕ್ಷ ಆಡಳಿತ ಮಾಡುತ್ತಿಲ್ಲವೇ. ಕುಟುಂಬ ರಾಜಕಾರಣ ಹಣೆ ಪಟ್ಟಿಯನ್ನು ಜೆಡಿಎಸ್‍ಗೆ ಯಾಕೆ ಕೊಡಬೇಕು. ರಾಜ್ಯದ ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷ ಬೇಕು. ಪ್ರಾದೇಶಿಕ ಪಕ್ಷ ಬೆಳೆಯಲು ಕುಟುಂಬ ರಾಜಕಾರಣ ಬೇಕು ಎಂದು ದೇವೇಗೌಡರ ಕುಟುಂಬ ರಾಜಕಾರಣ ಪರವಾಗಿ ಬ್ಯಾಟ್ ಬೀಸಿದರು.

ಪ್ರಾದೇಶಿಕ ಪಕ್ಷಕ್ಕೆ ಕುಟುಂಬ ರಾಜಕಾರಣ ಎಂಬ ಆರೋಪ ಮಾಡುವುದು ಸುಲಭ. ಆದರೆ ಪಕ್ಷ ಕಟ್ಟುವ ಕಷ್ಟ ನಮಗೆ ಗೊತ್ತು. ಬಿಜು ಪಟ್ನಾಯಕ್ ಅವರ ಪುತ್ರ ಹಾಗೂ ಕರುಣಾನಿಧಿ ಅವರ ಮಗ ಅಲ್ಲಿನ ಪ್ರಾದೇಶಿಕ ಪಕ್ಷ ಮುಂದುವರಿಸಬೇಕಾಗಿ ಬಂತು. ತಂದೆ ಕಟ್ಟಿದ ಪಕ್ಷವನ್ನು ಮಕ್ಕಳೇ ಮುಂದುವರಿಸುತ್ತಿದ್ದಾರೆ. ಎಚ್.ಡಿ.ರೇವಣ್ಣ, ಎಚ್.ಡಿ.ಕುಮಾರಸ್ವಾಮಿ ಅವರನ್ನು ಕುಟುಂಬ ರಾಜಕಾರಣ ಎನ್ನುವುದಾ? ಪಕ್ಷ ಕಟ್ಟಲು ಸಂಸದ ಪ್ರಜ್ವಲ್ ರೇವಣ್ಣ ಹಾಗೂ ನಿಖಿಲ್ ಕುಮಾರಸ್ವಾಮಿ ಅವರನ್ನು ಕಳಿಸಿದರೆ ಏನು ಅಂದುಕೊಳ್ಳುತ್ತಾರೋ ಎಂದು ಯೋಚಿಸಬೇಡಿ. ಹೀಗೆ ಯೋಚಿಸಿ ಯಾರನ್ನೋ ಕಳಿಸಿದರೆ ಪಕ್ಷ ಸಂಘಟನೆ ಆಗಲ್ಲ. ಮುಖ ಪರಿಚಯ ಇರುವ ವ್ಯಕ್ತಿಯೇ ಆಗಬೇಕು ಎಂದು ಹೇಳಿದರು.

ಇಂದು 12 ಗಂಟೆ ನಂತರ ರಾಹುಕಾಲ ಪ್ರಾರಂಭವಾಗುತ್ತಿತ್ತು. ಹೀಗಾಗಿ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಹಾಗೂ ಮುಖಂಡರು ಬಾರದೇ ಇದ್ದರೂ ದೀಪ ಬೆಳಗಿಸಿ ಸಮಾವೇಶಕ್ಕೆ ಚಾಲನೆ ನೀಡಲಾಯಿತು. ಬಳಿಕ ಎಚ್.ಡಿ.ದೇವೇಗೌಡ ಅವರು ಬಂದ ನಂತರ ಕಾರ್ಯಕ್ರಮ ಮುಂದುವರಿಸಲು ನಿರ್ಧಾರ ಮಾಡಲಾಯಿತು.

Share This Article
Leave a Comment

Leave a Reply

Your email address will not be published. Required fields are marked *