ಬೆಂಗಳೂರು: ಸಿಲಿಕಾನ್ ಸಿಟಿಯ ವೈನ್ ಶಾಪ್ ಮುಂದೆ ರಕ್ತದ ಓಕುಳಿ ನಡೆದಿದೆ. ರಾತ್ರಿ ಬೆಂಗಳೂರಿನ ಅಗ್ರಹಾರ ಬಡಾವಣೆಯಲ್ಲಿ ರೌಡಿಶೀಟರ್‍ನನ್ನ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
28 ವರ್ಷದ ಭರತ್ ಅಲಿಯಾಸ್ ಕೋಗಿಲು ಭರತ್ ಎಂಬಾತನನ್ನು ನಾಲ್ಕೈದು ಜನ ಯುವಕರ ತಂಡ ಅಟ್ಟಾಡಿಸಿಕೊಂಡು ಹೋಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದೆ.
ತಲೆ ಮುಖ ಹೊಟ್ಟೆ ದೇಹದ ಇತರ ಭಾಗಗಳಿಗೆ ಮಚ್ಚು ಲಾಂಗಿನಿಂದ ಹೊಡೆದು ಎಸ್ಕೇಪ್ ಆಗಿದ್ದಾರೆ. ನಿನ್ನೆ ರಾತ್ರಿ 9.30ರ ಸುಮಾರಿಗೆ ಅಗ್ರಹಾರ ಬಡಾವಣೆಯಲ್ಲಿರುವ ವಿಜಯ್ ವೈನ್ಸ್ ನಲ್ಲಿ ಕುಡಿದು ಹೊರಬಂದ ಭರತನ್ನ ಹೊಂಚುಹಾಕಿ ಕಾಯುತ್ತಿದ್ದ ದುಷ್ಕರ್ಮಿಗಳ ತಂಡ ಲಾಂಗು, ಚಾಕುವಿಂದ ಹೊಡೆದು ಕೊಂದಿದ್ದಾರೆ.
ಕೋಗಿಲು ಭರತನ ವಿರುದ್ಧ ಯಲಹಂಕ, ಸಂಪಿಗೆಹಳ್ಳಿ ಸೇರಿದಂತೆ ಇತರೆ ಪೊಲೀಸ್ ಠಾಣೆಗಳಲ್ಲಿ ಕೇಸ್ ದಾಖಲಾಗಿದ್ದವು. ಸದ್ಯ ಕೊಲೆ ಪ್ರಕರಣವನ್ನ ಸಂಪಿಗೆಹಳ್ಳಿ ಪೊಲೀಸರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಭರತ್ ಅಲಿಯಾಸ್ ಕೋಗಿಲು ಭರತ್ ಕಳೆದ ವಿಧಾನಸಭಾ ಚುನಾವಣಾ ಸಮಯದಲ್ಲಿ ಮಾಜಿ ಸಚಿವ ಕಾಂಗ್ರೆಸ್ಸಿನ ಕೃಷ್ಣೇಬೈರೇಗೌಡರ ಪರ ಪ್ರಚಾರ ಮಾಡಿದ್ದ, ಆ ಸಮಯದಲ್ಲಿ ತನ್ನ ಕಾರಿಗೆ ತಾನೇ ಬೆಂಕಿ ಹಾಕಿ ಇದನ್ನ ಬಿಜೆಪಿ ಪಕ್ಷದವರು ಮಾಡಿದರು ಅಂತ ಆರೋಪಿಸಿದ್ದನು. ಆ ಸಮಯದಲ್ಲಿ ಭರತ್ ತನ್ನ ಕಾರಿಗೆ ಬೆಂಕಿ ಹಚ್ಚೋ ಸಿಸಿಟಿವಿ ವಿಡಿಯೋ ಸಿಕ್ಕಿ ತನ್ನ ಅಸಲಿಯತ್ತು ಬಯಲಾಗಿತ್ತು.
ಕೊಲೆ ಮಾಡಿದ ಯುವಕರ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು ವೈನ್ ಶಾಪ್‍ನ ಸಿಸಿಟಿವಿ ವಿಡಿಯೋವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಲೆ ಮಾಡಿದವರು ಅಗ್ರಹಾರ ಬಡಾವಣೆಯ ಯುವಕರೇ ಎಂದು ತಿಳಿದುಬಂದಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.