ಯಶವಂತಪುರ- ಕಾರವಾರ- ವಾಸ್ಕೋ ಮಾರ್ಗದಲ್ಲಿ ಹೊಸ ರೈಲು ಸಂಚಾರ ಆರಂಭ

Public TV
3 Min Read

– ಹೊಸ ರೈಲಿಗೆ ಬಿಎಸ್‍ವೈ ಚಾಲನೆ

ಬೆಂಗಳೂರು: ಕಾರವಾರ ಮಾರ್ಗವಾಗಿ ಯಶವಂತಪುರ-ವಾಸ್ಕೋ ರೈಲು ಸಂಚಾರಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಂದು ಚಾಲನೆ ನೀಡಿದರು.

ಯಶವಂತಪುರ ರೈಲು ನಿಲ್ದಾಣದಲ್ಲಿ ಹೊಸ ರೈಲಿಗೆ ಸಿಎಂ ಚಾಲನೆ ನೀಡಿದರು. ಇದೇ ವೇಳೆ ಯಶವಂತಪುರ-ವಿಜಯಪುರ-ಯಶವಂತಪುರ ರೈಲನ್ನು ಎಲ್‍ಎಚ್‍ಬಿ ಕೋಚ್‍ಗಳಾಗಿ ಪರಿವರ್ತನೆ ಕಾರ್ಯಕ್ರಮಕ್ಕೂ ಚಾಲನೆ ನೀಡಿದರು.

ರೈಲು ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಯಡಿಯೂರಪ್ಪ, ಯಶವಂತಪುರ-ಕಾರವಾರ-ವಾಸ್ಕೋ ಮಾರ್ಗದಲ್ಲಿ ಇಂದು ಹೊಸ ರೈಲು ಚಾಲನೆ ಸಂತಸ ತಂದಿದೆ. ಈ ರೈಲು ಸಂಜೆ ಬೆಂಗಳೂರಿಂದ ಹೊರಟು ಬೆಳಗ್ಗೆ ಕಾರವಾರಕ್ಕೆ ತಲುಪಲಿದೆ. ಹೊಸ ರೈಲಿನಿಂದ ಶಿರಾಡಿಘಾಟ್ ಮೇಲಿನ ವಾಹನ ಸಂಚಾರ ಒತ್ತಡ ಕಡಿಮೆಯಾಗಲಿದೆ. ನಾನು ಮುಖ್ಯಮಂತ್ರಿಯಾದ ಹೊಸದರಲ್ಲಿ ರೈಲ್ವೆ ಯೋಜನೆಗಳಿಗೆ ಭೂಮಿ, ಅರ್ಧ ವೆಚ್ಚ ಕೊಡುವ ಭರವಸೆ ಕೊಟ್ಟಿದ್ದೆ. ಸರ್ಕಾರ ರೈಲ್ವೆ ಯೋಜನೆಗಳಿಗೆ ಸದಾ ಬೆಂಬಲ ಕೊಡಲಿದೆ. ಬರುವ ದಿನಗಳಲ್ಲಿ ಇನ್ನಷ್ಟು ಹೊಸ ರೈಲುಗಳ ಸೇವೆ ಸಿಗಲಿದೆ ಎಂದರು.

ಕೇಂದ್ರದ ರಾಜ್ಯ ರೈಲ್ವೆ ಸಚಿವ ಸುರೇಶ್ ಅಂಗಡಿ ಮಾತನಾಡಿ, ಈ ಹೊಸ ರೈಲಿನ ಇನ್ನೊಂದು ವಿಶೇಷ ಎಂಬಂತೆ ರೈಲು ಚಾಲನೆ ಮಾಡುವವರಿಬ್ಬರೂ ಮಹಿಳಾ ಲೋಕೊಪೈಲಟ್ ಗಳು. ಸಂಸದೆ ಶೋಭಾ ಕರಂದ್ಲಾಜೆಯವರು ಈ ಹೊಸ ರೈಲಿಗೆ ಒತ್ತಾಯ ಮಾಡಿದವರು. ಶೋಭಾ ಅವರು ರಾಣಿ ಚೆನ್ನಮ್ಮ ರೀತಿಯಲ್ಲಿ ಹೋರಾಡಿ ಈ ಹೊಸ ರೈಲು ಸಂಚರಿಸಲು ಕಾರಣರಾಗಿದ್ದಾರೆ. ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಮಹಿಳಾ ಲೋಕೊಪೈಲಟ್‍ಗಳಿಂದ ರೈಲು ಚಾಲನೆ ಮಾಡಲಾಗುತ್ತಿದೆ ಎಂದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಇನ್ನೂ ಕೆಲವು ಜಿಲ್ಲೆಗಳಿಗೆ ರೈಲು ಸೇವೆ ದೊರೆತಿಲ್ಲ, ನಾನು ಪ್ರತಿನಿಧಿಸುವ ಚಿಕ್ಕಮಗಳೂರಿಗೆ ರೈಲು ಬಂದಿದ್ದೇ ನಮ್ಮ ಸರ್ಕಾರ ಬಂದ ಮೇಲೆ. ಹಬ್ಬಗಳು ಬಂದರೆ ನಮ್ಮ ಭಾಗದ ಜನ ಟ್ಯಾಕ್ಸಿ, ಟಿಟಿ ಮಾಡಿಕೊಂಡು ಊರಿಗೆ ಹೋಗಬೇಕಿತ್ತು. ಬೆಂಗಳೂರಿನಲ್ಲಿ ಕರಾವಳಿಯ ಸಾಕಷ್ಟು ಜನ ಇದ್ದಾರೆ. ಆದರೆ ನಮ್ಮ ಊರುಗಳಿಗೆ ಹೋಗಲು ರೈಲು ಸೇವೆ ಇರಲಿಲ್ಲ. ಇಂದು ನಮ್ಮ ಭಾಗದ ಜನರ ನಿರೀಕ್ಷೆ ಈಡೇರಿದೆ ಎಂದರು.

https://twitter.com/ShobhaBJP/status/1236162444264796163

ಉಡುಪಿ, ಭಟ್ಕಳ, ಕಾರವಾರ ಮಾರ್ಗದಲ್ಲಿ ಈ ಹೊಸ ರೈಲು ಸಂಚರಿಸಲಿದೆ. ಕೇಂದ್ರ ಸಚಿವ ಸುರೇಶ್ ಅಂಗಡಿಯವರಿಗೆ ಅಭಿನಂದನೆಗಳು. ಇಂದು ಹೊಸ ರೈಲು ಸೇವೆ ಸಿಕ್ಕಿದೆ. ಆದರೆ ಈ ಮಾರ್ಗದಲ್ಲಿರುವ ಹಳೆ ರೈಲನ್ನು ನಿಲ್ಲಿಸಬೇಡಿ. ಹಳೆಯ ರೈಲು ಸಂಚಾರ ಮುಂದುವರಿಯಲಿ, ಯಡಿಯೂರಪ್ಪನವರು ಮೊದಲ ಸಲ ಸಿಎಂ ಆಗಿದ್ದಾಗಿಂದಲೂ ರೈಲ್ವೆ ಯೋಜನೆಗಳಿಗೆ ಬೆಂಬಲಿಸುತ್ತಿದ್ದಾರೆ. ರೈಲ್ವೆ ಯೋಜನೆಗಳಿಗೆ ಶೇ.50ರಷ್ಟು ನೆರವು ಕೊಡುವುದಾಗಿ ಹೇಳಿದ ಮೊದಲ ಸಿಎಂ ಯಡಿಯೂರಪ್ಪ. ಅಲ್ಲದೆ ಶಿವಮೊಗ್ಗ ಮಾರ್ಗವಾಗಿ ಹಾಸನ, ಬೇಲೂರು, ಚಿಕ್ಕಮಗಳೂರು, ಶೃಂಗೇರಿಗೆ ರೈಲು ಸೇವೆ ಅಗತ್ಯವಿದೆ. ಈ ಬೇಡಿಕೆಯನ್ನೂ ಶೀಘ್ರದಲ್ಲೇ ಕೇಂದ್ರ ಸರ್ಕಾರ ಈಡೇರಿಸಲಿ ಎಂದು ಆಶಯ ವ್ಯಕ್ತಪಡಿಸಿದರು.

ರೈಲು ವೇಳಾಪಟ್ಟಿ: ಪ್ರತಿ ದಿನ ಸಂಜೆ 6ಕ್ಕೆ ಯಶವಂತಪುರದಿಂದ 14 ಬೋಗಿಗಳ ಈ ರೈಲು ಹೊರಡಲಿದೆ. ಕುಣಿಗಲ್ ಮೂಲಕವಾಗಿ ಹಾಸನಕ್ಕೆ ರಾತ್ರಿ 9.15ಕ್ಕೆ, ಪಡೀಲ್ ಗೆ ಬೆಳಗ್ಗಿನ ಜಾವ 3ಕ್ಕೆ, ಉಡುಪಿಗೆ ಬೆಳಗ್ಗೆ 5ಕ್ಕೆ, ಕುಂದಾಪುರ 5.30ಕ್ಕೆ, ಕಾರವಾರಕ್ಕೆ ಬೆಳಗ್ಗೆ 8.30 ಮತ್ತು ವಾಸ್ಕೋಗೆ ಬೆಳಗ್ಗೆ 10.30ಕ್ಕೆ ತಲುಪಲಿದೆ. ಮರಳಿ ವಾಸ್ಕೋದಿಂದ ಸಂಜೆ 5.20ಕ್ಕೆ ಹೊರಡಲಿದ್ದು, ಸಂಜೆ 7.25ಕ್ಕೆ ಕಾರವಾರ, 9.30ಕ್ಕೆ ಕುಂದಾಪುರ, 10ಕ್ಕೆ ಉಡುಪಿ, ಬೆಳಗ್ಗೆ 8ಕ್ಕೆ ಯಶವಂತಪುರ ತಲುಪಲಿದೆ. ಯಶವಂತಪುರ, ಚಿಕ್ಕಬಾಣಾವರ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಾಣಿಯೂರು, ಕಬಕ, ಪುತ್ತೂರು, ಬಂಟ್ವಾಳ, ಸುರತ್ಕಲ್, ಮೂಲ್ಕಿ, ಉಡುಪಿ, ಬಾರ್ಕೂರ್, ಕುಂದಾಪುರ, ಬೈಂದೂರು, ಭಟ್ಕಳ, ಮುರುಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರಸ್ತೆ, ಅಂಕೋಲಾ, ಕಾರವಾರ, ವಾಸ್ಕೋಗಳಲ್ಲಿ ಈ ಹೊಸ ರೈಲು ನಿಲುಗಡೆಯಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *