ಬೆಂಗಳೂರು: ನೆರೆ ಪರಿಹಾರ ಕೊಡದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಕಾಂಗ್ರೆಸ್ ವಿರುದ್ಧ ಸಿಎಂ ಯಡಿಯೂರಪ್ಪ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೇಂದ್ರ ಅನುದಾನ ಬಿಡುಗಡೆ ಮಾಡಲು ದೇಶದ 5-6 ರಾಜ್ಯಗಳಲ್ಲಿ ಪ್ರವಾಹ ಬಂದು ಇಂತಹ ಸ್ಥಿತಿ ನಿರ್ಮಾಣ ಆಗಿದೆ. ಎಲ್ಲರಿಗೂ ಒಟ್ಟಿಗೆ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತೆ. ಆದಷ್ಟು ಬೇಗ ಅನುದಾನ ಬಿಡುಗಡೆ ಮಾಡಲಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಅವರಿಗೆ ಆತುರ ಜಾಸ್ತಿ ಪರಿಹಾರ ಬಿಡುಗಡೆ ಮುಂಚೆ ಇವರು ಆತುರವಾಗಿ ಪ್ರತಿಭಟನೆ ಮಾಡ್ತಿರೋದು ಸರಿಯಲ್ಲ. ಏನು ಬೇರೆ ಕಾರ್ಯಕ್ರಮ ಇಲ್ಲ ಎಂದು ಕಾಂಗ್ರೆಸ್ ಅವರ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಕಾಂಗ್ರೆಸ್‍ನವರು ಗೊಂದಲ ಉಂಟು ಮಾಡೋಕೆ ಪ್ರತಿಭಟನೆಗೆ ಮುಂದಾಗಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರ ಮನೆ ಕಟ್ಟಲು 1 ಲಕ್ಷ ಬಿಡುಗಡೆ ಮಾಡಿದೆ. 10 ಸಾವಿರ ಹಣ ಕುಟುಂಬಗಳಿಗೆ ಕೊಟ್ಟಿದ್ದೇವೆ. ಅಗತ್ಯ ಕ್ರಮ ನಾವು ತಗೊಂಡಿದ್ದೇವೆ. ಇಷ್ಟೆಲ್ಲ ಮಾಡಿದರು ಅವರಿಗೆ ತೃಪ್ತಿ ಇಲ್ಲ. ಹೀಗಾಗಿ ರಾಜಕೀಯ ಮಾಡುತ್ತಿದ್ದಾರೆ. ಸಂತೋಷದಿಂದ ಪ್ರತಿಭಟನೆ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಪ್ರಧಾನಿ ಮೋದಿ ಬಳಿ ಸರ್ವ ಪಕ್ಷ ನಿಯೋಗ ಕರೆದುಕೊಂಡು ಹೋಗಿ ಅನ್ನೋ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಅವರು, ಮೋದಿ ಬಳಿಗೆ ಸರ್ವ ಪಕ್ಷ ನಿಯೋಗ ತೆಗೆದುಕೊಂಡು ಹೋಗುವ ಅಗತ್ಯ ಇಲ್ಲ. ಪ್ರಧಾನಿ ಮೋದಿ ಮೇಲೆ ನಮಗೆ ವಿಶ್ವಾಸ ಇದೆ. ಆದಷ್ಟು ಬೇಗ ಅನುದಾನ ಮೋದಿ ಬಿಡುಗಡೆ ಮಾಡುತ್ತಾರೆ ಎಂದು ತಿಳಿಸಿದರು.