ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಮ್ಮಾರಿ ಕೊರೊನಾ ವೈರಸ್ ಮತ್ತೊಂದು ಬಲಿ ಪಡೆದುಕೊಂಡಿದ್ದು, ಮೃತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಆದರೆ ಖಾಸಗಿ ನರ್ಸಿಂಗ್ ಹೋಮ್ ಎಡವಟ್ಟಿನಿಂದಾಗಿ ದೊಡ್ಡ ಅವಾಂತರವೇ ಸೃಷ್ಟಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.
ಹೆಣ್ಣೂರು ಬಾಣಸವಾಡಿಯ 57 ವರ್ಷದ ಮಹಿಳೆ ಕೊರೊನಾಗೆ ಬಲಿಯಾದವರು. ಮಹಿಳೆಯು ಉಸಿರಾಟದ ತೊಂದರೆಯಿಂದಾಗಿ ಮೊದಲು ಎರಡು ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದರು. ಅವರನ್ನು ಕೋವಿಡ್ ಶಂಕೆ ಹಿನ್ನೆಲೆ ಸರ್ಕಾರಿ ಆಸ್ಪತ್ರೆಗೆ ರೆಫರ್ ಮಾಡಿದ್ದರೂ ಕುಟುಂಬಸ್ಥರು ಮುಚ್ಚಿಟ್ಟು ಹೆಬಿಆರ್ ಬಡಾವಣೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನ್ನಪ್ಪಿದ್ದಾರೆ.
ಮಹಿಳೆಯ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ ಆಸ್ಪತ್ರೆಯವರು ಖಾಸಗಿ ಲ್ಯಾಬ್ ಟೆಕ್ನಿಷಿಯನ್ ಮೂಲಕ ಹೈದರಾಬಾದ್ ಮೂಲದ ಲ್ಯಾಬ್‍ಗೆ ಗಂಟಲು ದ್ರವವನ್ನು ಕೊರೊನಾ ಪರೀಕ್ಷೆಗೆ ಕಳಿಸಿದ್ದರು. ಅಲ್ಲಿಂದ ರಿಪೋರ್ಟ್ ನಲ್ಲಿ ಪಾಸಿಟಿವ್ ಎನ್ನುವುದು ಗೊತ್ತಾಗಿದೆ. ಆ ಲ್ಯಾಬ್‍ನವರು ಕೂಡ ಆರೋಗ್ಯ ಇಲಾಖೆಗೂ ಒಂದು ಪ್ರತಿ ಕಳಿಸಿದ್ದರು. ಇದರಿಂದ ಎಚ್ಚೆತ್ತ ಆರೋಗ್ಯ ಇಲಾಖೆ ಆಸ್ಪತ್ರೆಗೆ ದೌಡಾಯಿಸಿತ್ತು. ಅಷ್ಟರಲ್ಲೇ ಕುಟುಂಬಸ್ಥರು ಮಹಿಳೆಯ ಶವದ ಹತ್ತಿರ ಹೋಗಿ ಅದನ್ನು ವಶಕ್ಕೆ ಪಡೆದುಕೊಳ್ಳಲು ತಯಾರಾಗುತ್ತಿದ್ದರು. ಆದರೆ ಆರೋಗ್ಯ ಇಲಾಖೆಯು ಮಹಿಳೆಯ ಮೃತದೇಹವನ್ನು ವಶಪಡಿಸಿಕೊಂಡಿದೆ.
ಜಿಲ್ಲಾ ವೈದ್ಯಾಧಿಕಾರಿ ಡಾ.ಗೂಳೂರು ಶ್ರೀನಿವಾಸ್ ಅವರು ನೀಡಿದ ವರದಿಯ ಮೇರೆಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್ ಶಿವಮೂರ್ತಿ ಅವರ ಆದೇಶದಂತೆ ಹೆಚ್‍ಬಿಆರ್ ಬಡಾವಣೆಯ ಬೆಂಗಳೂರು ನಾರ್ಥ್ ಹಾಸ್ಪಿಟಲ್‍ಗೆ ಬೀಗ ಹಾಕಲಾಗಿದೆ. ಅಲ್ಲಿದ್ದ 6 ಜನ ಒಳರೋಗಿಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ. ಮಹಿಳೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಆಸ್ಪತ್ರೆ ಸಿಬ್ಬಂದಿ ಹಾಗೂ ಸಂಬಂಧಿಕರು ಸೇರಿ ಒಟ್ಟು 25 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.
ರಾಜ್ಯ ಕುಟುಂಬ ಕಲ್ಯಾಣ ಹಾಗೂ ಆರೋಗ್ಯ ಇಲಾಖೆ ಶನಿವಾರ ಸಂಜೆ ಬಿಡುಗಡೆ ಮಾಡಿದ ಬುಲೆಟಿನ್ ಪ್ರಕಾರ, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 794ಕ್ಕೆ ಏರಿಕೆಯಾಗಿದೆ. ಈ ಪೈಕಿ 386 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರೆ, 30 ಜನರು ಮೃತಪಟ್ಟಿದ್ದರು. ಆದರೆ ಬೆಂಗಳೂರಿನ ಮಹಿಳೆ ಸಾವಿನ ನಂತರ ಕೊರೊನಾಗೆ ಬಲಿಯಾದವರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.