ಬೆಂಗಳೂರು: ಗೃಹಿಣಿ ಮತ್ತು ಆಕೆಯ 2 ವರ್ಷದ ಮಗ ಅಪಾರ್ಟ್ ಮೆಂಟಿನ 7ನೇ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆ ನಗರದ ಆರ್ ಟಿ ನಗರದ ಸೆಕೆಂಡ್ ಸ್ಟೇಜ್ ನಲ್ಲಿ ನಡೆದಿದೆ.
ಈ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ. 29 ವರ್ಷದ ಭಾವನಾ ತನ್ನ ಪುಟ್ಟ ಕಂದಮ್ಮ ದೇವಂತ್ ನನ್ನು ಹಿಡಿದುಕೊಂಡು ಶ್ರೀರಾಮ್ ವೈಟ್ ಹೌಸ್ ಅಪಾರ್ಟ್ ಮೆಂಟ್ ನಿಂದ ಜಿಗಿದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಪತಿ ಅರಿಹಂತ್ ಜೊತೆ ಭಾವನಾ ವಾಸಿಸುತ್ತಿದ್ದರು. ಪತಿ ಖಾಸಗಿ ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಭಾವನಾ ಅವರು ಈಗಾಗಲೇ ಆಕೆಯ ಪತಿ, ಪೋಷಕರು ಹಾಗೂ ಪತಿಯ ಇಬ್ಬರು ಸಹೋದರಿಯರಿಂದ ಸಾಕಷ್ಟು ನೊಂದಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ವ್ಯವಹಾರ ಅಧ್ಯಯನದಲ್ಲಿ ಪದವೀಧರೆಯಾಗಿರುವ ಭಾವನಾ ಅವರು ಈಗಾಗಲೇ ಚಾರ್ಟೆಡ್ ಅಕೌಂಟೆನ್ಸಿಯ ಕೆಲ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಮುಂದೆ ಸಿಎ ಮಾಡಬೇಕೆಂಬ ಮಹದಾಸೆಯಲ್ಲಿದ್ದರು. ಅಲ್ಲದೆ ಉಳಿದ ಪೇಪರ್ ಗಳನ್ನು ಮಗ ಶಾಲೆಗೆ ಹೋಗಲು ಆರಂಭಿಸಿದ ಬಳಿಕ ಕ್ಲಿಯರ್ ಮಾಡಬೇಕು ಎಂದಿದ್ದರು ಎಂದು ಭಾವನಾ ಕುಟುಂಬಸ್ಥರು ತಿಳಿಸಿದ್ದಾರೆ.
ತನಿಖಾಧಿಕಾರಿಗಳು ಮೇಲ್ನೋಟಕ್ಕೆ ಇಬ್ಬರು ಆಕಸ್ಮಾತ್ತಾಗಿ ಬಾಲ್ಕನಿಯಿಂದ ಬಿದ್ದಿದ್ದಾರೆ ಎಂದು ಹೇಳಿದ್ದಾರೆ. ಬೆಡ್ ರೂಮಿನಲ್ಲಿ ಭಾವನಾ ತನ್ನ ಮಗನೊಂದಿಗೆ ಇದ್ದಿದ್ದು, ಈ ವೇಳೆ ಆಕಸ್ಮಾತ್ತಾಗಿ ಕೆಳಕ್ಕೆ ಬಿದ್ದಿರಬಹುದು. ಬೀಳುವುದಕ್ಕೂ ಮೊದಲು ಭಾವನಾ ತನ್ನ ಬೆಡ್ ರೂಮಿಗೆ ಲಾಕ್ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಅರಿಹಂತ್ ಹಣಕ್ಕೋಸ್ಕರ ಭಾವನಾಗೆ ಕಿರುಕುಳ ನೀಡುತ್ತಿದ್ದನು. ಅಲ್ಲದೆ ಆಕೆಯ ಮೇಲೆ ಸುಖಾ ಸುಮ್ಮನೆ ಸಂಶಯ ವ್ಯಕ್ತಪಡಿಸುತ್ತಿದ್ದನು ಎಂದು ಭಾವನಾ ಸಹೋದರಿಯರು ಉತ್ತರ ಡಿಸಿಪಿ ಎನ್ ಶಶಿಕುಮಾರ್ ಅವರಲ್ಲಿ ದೂರಿದ್ದಾರೆ.
ಇದು ಕೊಲೆಯೋ ಆತ್ಮಹತ್ಯೆಯೋ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶಶಿಕುಮಾರ್, ಘಟನೆ ಬಗ್ಗೆ ಸತ್ಯಾಸತ್ಯತೆ ತಿಳಿಯಲು ಸಮಯ ಬೇಕು. ಸದ್ಯ ನಾವು ಭಾವನಾ ಸಹೋದರಿಯರಿಂದ ಮಾಹಿತಿ ಕಲೆ ಹಾಕಿದ್ದೇವೆ. ಒಂದು ವೇಳೆ ಅವರು ಕೊಲೆ ಎಂದೋ ಅಥವಾ ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿಕೊಂಡರೆ ಅದೇ ರೀತಿ ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸುವುದಾಗಿ ಅವರು ಹೇಳಿದ್ದಾರೆ.
ಕುಟುಂಬದ ಬಗ್ಗೆ ಮಾತನಾಡ್ತಿರಲಿಲ್ಲ:
ಭಾವನಾ ಯಾವತ್ತೂ ತನ್ನ ಮನೆಯಲ್ಲಿ ನಡೆಯುತ್ತಿರುವ ವಿಚಾರಗಳನ್ನು ಹಂಚಿಕೊಳ್ಳುತ್ತಿರಲಿಲ್ಲ. ಮಧ್ಯಾಹ್ನ 3.50ರ ಸುಮಾರಿಗೆ ನಮಗೊಂದು ದೊಡ್ಡದಾದ ಶಬ್ಧ ಕೇಳಿಸಿದೆ. ಕೂಡಲೇ ನಾವು ಹೋಗಿ ನೋಡಿದಾಗ ಭಾವನಾ ಮತ್ತು ಆಕೆಯ ಮಗ ಸಾವನ್ನಪ್ಪಿದ್ದರು ಎಂದು ಅಪಾರ್ಟ್ ಮೆಂಟ್ ಸೆಕ್ಯೂರಿಟಿಟ ಗಾರ್ಡ್ ರಾಜು ತಿಳಿಸಿದ್ದಾರೆ.
ಈ ಘಟನೆ 4 ಗಂಟೆ ಸುಮಾರಿಗೆ ಬೆಳಕಿಗೆ ಬಂದಿದೆ. ರಸ್ತೆಯಲ್ಲಿ ಜನ ತುಂಬಿದ್ದರು. ಅಪಾರ್ಟ್ ಮೆಂಟ್ ನ ನಿವಾಸಿಯೊಬ್ಬರು ಮಹಿಳೆ ಮತ್ತು ಮಗು ರಕ್ತದ ಮಡುವಿನಲ್ಲಿ ಬಿದ್ದಿರುವುದಾಗಿ ತಿಳಿಸಿದರು ಎಂದು ಸ್ಥಳೀಯ ನಿವಾಸಿ ಜಮುನಾ ದೇವಿ ಹೇಳಿದ್ದಾರೆ.
ಭಾವನಾ ನಮ್ಮ ಜೊತೆ ಮಾತನಾಡುತ್ತಿದ್ದರು. ಆದರೆ ಯಾವತ್ತೂ ತಮ್ಮ ಮನೆಯ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿರಲಿಲ್ಲ. ಪ್ರತಿ ದಿನ ಸಂಜೆ ಮಗ ದೇವಂತ್ ನನ್ನು ಅಪಾರ್ಟ್ ಮೆಂಟ್ ಕೆಳಗಡೆ ಬಂದು ನಮ್ಮ ಜೊತೆ ಮಾತನಾಡುತ್ತಿದ್ದರು. ಅಲ್ಲದೆ ದೇವಂತ್ ಕೂಡ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದರು ಎಂದು ಜಮುನಾದೇವಿ ಬೇಸರ ವ್ಯಕ್ತಪಡಿಸಿದರು.