ವಿರಾಟ್‍ಗೆ ಎಚ್ಚರಿಕೆ ನೀಡಿ ಒಂದು ಡೀಮೆರಿಟ್ ಅಂಕ ಕೊಟ್ಟ ಐಸಿಸಿ

Public TV
2 Min Read

ಬೆಂಗಳೂರು: ಭಾರತದ ನಾಯಕ ವಿರಾಟ್ ಕೊಹ್ಲಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಎಚ್ಚರಿಕೆ ನೀಡಿ ಒಂದು ಡೀಮೆರಿಟ್ (ಋಣಾತ್ಮಕ) ಅಂಕ ನೀಡಿದೆ.

ಭಾನುವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ನಡೆದ ಮೂರನೇ ಟಿ-20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಬೌಲರ್ ಬ್ಯೂರಾನ್ ಹೆಂಡ್ರಿಕ್ಸ್ ಅವರನ್ನು ರನ್ ಓಡುವಾಗ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿದ್ದಾರೆ ಎಂದು ಐಸಿಸಿ ವಿರಾಟ್ ಕೊಹ್ಲಿ ಅವರಿಗೆ ಡೀಮೆರಿಟ್ ಅಂಕವನ್ನು ನೀಡಿದೆ.

ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಐಸಿಸಿ ನೀತಿ ಸಂಹಿತೆ ಪ್ರಾಥಮಿಕ(ಲೆವೆಲ್ ಒನ್) ಹಂತವನ್ನು ಉಲ್ಲಂಘಿಸಿದ್ದಾರೆ ಎಂದು ಪಂದ್ಯದ ಆನ್ ಫೀಲ್ಡ್ ಅಂಪೈರ್ ಗಳಾದ ನಿತಿನ್ ಮೆನನ್ ಮತ್ತು ಸಿಕೆ ನಂದನ್ ವರದಿ ನೀಡಿದ ಹಿನ್ನೆಲೆಯಲ್ಲಿ ಈ ಶಿಸ್ತುಕ್ರಮವನ್ನು ಕೈಗೊಳ್ಳಲಾಗಿದೆ.

ನಡೆದಿದ್ದೇನು?
ಭಾನುವಾರದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲ ಬ್ಯಾಟ್ ಮಾಡಿದ ಭಾರತದ ಇನ್ನಿಂಗ್ಸ್ ನ ಐದನೇ ಓವರ್ ನಲ್ಲಿ ರನ್ ಓಡುತ್ತಿರುವ ಸಮಯದಲ್ಲಿ ದಕ್ಷಿಣ ಆಫ್ರಿಕಾ ಬೌಲರ್ ಬ್ಯೂರಾನ್ ಹೆಂಡ್ರಿಕ್ಸ್ ಅವರ ಬಲ ಭುಜಕ್ಕೆ ಕೊಹ್ಲಿ ಡಿಕ್ಕಿ ಹೊಡೆದಿದ್ದರು. ಈ ಹಿನ್ನೆಲೆಯಲ್ಲಿ ಐಸಿಸಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಕೊಹ್ಲಿ ನೀತಿ ಸಂಹಿತೆಯ ಆರ್ಟಿಕಲ್ 2.12 ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯದಲ್ಲಿ ಎದುರಾಳಿ ಆಟಗಾರ, ಅಂಪೈರ್ ಅಥವಾ ಮ್ಯಾಚ್ ರೆಫ್ರಿಯನ್ನು ಪ್ರಚೋದನಕಾರಿ ರೀತಿಯಲ್ಲಿ ಮುಟ್ಟುವಂತಿಲ್ಲ. ಹೀಗಾಗಿ ಐಸಿಸಿ ಕೊಹ್ಲಿಗೆ ಒಂದು ಡೀಮೆರಿಟ್ ಅಂಕ ನೀಡಿದೆ. ಇದನ್ನು ಓದಿ: ನಿಜವಾದ ಶ್ರೇಷ್ಠ ಆಟಗಾರ ನೀವು- ವಿರಾಟ್ ಆಟಕ್ಕೆ ಅಫ್ರಿದಿ ಮೆಚ್ಚುಗೆ

ಏನಿದು ಡೀಮೆರಿಟ್ ಅಂಕ
ಈ ಡೀಮೆರಿಟ್ ಅಂಕ ಎಂಬ ನಿಯಮವನ್ನು ಐಸಿಸಿ 2016 ರಲ್ಲಿ ಜಾರಿಗೆ ತಂದಿತು. ಈ ನಿಯಮದ ಪ್ರಕಾರ ಯಾವುದೇ ಆಟಗಾರ ಪಂದ್ಯವನ್ನು ಆಡುವಾಗ ಎದುರಾಳಿ ಆಟಗಾರನ್ನು ಪ್ರಚೋದನ ಕಾರಿ ರೀತಿಯಲ್ಲಿ ಟಚ್ ಮಾಡಿದ್ದು ಕಂಡು ಬಂದರೆ ಈ ಅಂಕವನ್ನು ನೀಡಲಾಗುತ್ತದೆ. ಈ ಅಂಕವನ್ನು ಯಾವುದೇ ಆಟಗಾರ 24 ತಿಂಗಳಲ್ಲಿ 4 ಬಾರಿ ಪಡೆದರೆ ಆ ಆಟಗಾರನನ್ನು ಒಂದು ಟೆಸ್ಟ್ ಅಥವಾ 2 ಏಕದಿನ ಅಥವಾ 2 ಅಂತಾರಾಷ್ಟ್ರೀಯ ಟಿ-20 ಪಂದ್ಯಗಳಿಂದ ಅಮಾನತು ಮಾಡಲಾಗುತ್ತದೆ.

2016 ರಿಂದ ಕೊಹ್ಲಿ ಇದನ್ನು ಸೇರಿ ಮೂರು ಡೀಮೆರಿಟ್ ಅಂಕವನ್ನು ಪಡೆದಿದ್ದಾರೆ. 2018ರ ಜನವರಿ 15ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಂಪೈರ್ ಜೊತೆ ಅನುಚಿತ ವರ್ತನೆಗಾಗಿ ಮೊದಲ ಡೀಮೆರಿಟ್ ಅಂಕ ಪಡೆದಿದ್ದರು. ನಂತರ 2019ರ ಐಸಿಸಿ ವಿಶ್ವಕಪ್‍ನಲ್ಲಿ ಜೂನ್ 22ರಂದು ನಡೆದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಎರಡನೇ ಡೀಮೆರಿಟ್ ಅಂಕಕ್ಕೆ ಪಡೆದಿದ್ದರು.

Share This Article
Leave a Comment

Leave a Reply

Your email address will not be published. Required fields are marked *