ತಿಥಿಗೆ ಬಾಡಿಗೆಗೆ ಸಿಗುತ್ತೆ ಕಾಗೆ- ವೈರಲ್ ಆಯ್ತು ಯುವಕನ ಪೋಸ್ಟ್

Public TV
2 Min Read

– ಕಾಗೆಯನ್ನ ಕಾಡಿಗೆ ಬಿಟ್ಟ ಅರಣ್ಯಾಧಿಕಾರಿಗಳು

ಬೆಂಗಳೂರು: ಉಪಾಯ ಇದ್ದರೆ ಯಾವುದು ವ್ಯರ್ಥವಾಗುವುದಿಲ್ಲ ಎಂಬುದಕ್ಕೆ ಉಡುಪಿಯ ನಿವಾಸಿಯೊಬ್ಬರು ತಾಜಾ ಉದಾಹರಣೆಯಾಗಿದ್ದಾರೆ.

ಯಾವುದೇ ಕುಟುಂಬದಲ್ಲಿ ಸಾವು ಸಂಭವಿಸುವ ಸಂದರ್ಭದಲ್ಲಿ ತಿಥಿ ಕಾರ್ಯಗಳು ಸಾಂಪ್ರದಾಯಿಕವಾಗಿ ನಡೆಯುತ್ತದೆ. ಈ ಸಂದರ್ಭದಲ್ಲಿ ಮೃತರಿಗೆ ಪ್ರಿಯವಾದ ಆಹಾರಗಳನ್ನು ಅರ್ಪಿಸುತ್ತೇವೆ. ಆದರೆ ಈ ವೇಳೆ ಕಾಗೆ ಅನ್ನ ತಿನ್ನದಿದ್ದರೆ ಮೃತರ ಕುಟುಂಬಸ್ಥರು ನೊಂದುಕೊಳ್ಳುತ್ತಾರೆ. ಇದನ್ನೇ ಮನಗಂಡ ಯುವಕರೊಬ್ಬರು ಬ್ಯುಸಿನೆಸ್ ಮಾಡಿಕೊಂಡಿದ್ದಾರೆ.

ಉಡುಪಿ ಜಿಲ್ಲೆಯ ಪ್ರಶಾಂತ್ ಪೂಜಾರಿ ಎಂಬವರು ಈ ಕಾರ್ಯದಲ್ಲಿ ತೊಡಗಿದ್ದು, ಶ್ರಾದ್ಧ, ತಿಥಿ ಕಾರ್ಯಕ್ರಮಗಳಿಗೆ ಕಾಗೆ ಬೇಕಾದರೆ ಬಾಡಿಗೆಗೆ ದೊರೆಯುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಹಾಕಿದ್ದಾರೆ. ಈ ಪೋಸ್ಟ್ ಸದ್ಯ ರಾಷ್ಟ್ರಮಟ್ಟದಲ್ಲಿ ವೈರಲ್ ಆಗುತ್ತಿದ್ದು, ಯುವಕನ ಚಿಂತನೆಗೆ ಸಾಕಷ್ಟು ಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.

ಸಾಂದರ್ಭಿಕ ಚಿತ್ರ

ಕಾಗೆ ಸಿಕ್ಕಿದ್ದು ಹೇಗೆ?
ಪ್ರಶಾಂತ್ ಪೂಜಾರಿ ಅವರಿಗೆ ಪ್ರಾಣಿ, ಪಕ್ಷಿಗಳು ಎಂದರೆ ತುಂಬಾ ಇಷ್ಟ. ಒಂದು ದಿನ ಇವರ ಮನೆಯ ಸಮೀಪ ಮೂರು ಕಾಗೆ ಮರಿಗಳು ಅನಾಥವಾಗಿ ಬಿದ್ದಿದ್ದವು. ಇದನ್ನು ಗಮನಿಸಿದ್ದ ಪ್ರಶಾಂತ್, ಅವುಗಳ ಆರೈಕೆ ಮಾಡಲು ಮುಂದಾಗಿದ್ದರು. ಆದರೆ 3ರಲ್ಲಿ 2 ಮರಿಗಳು ಸಾವನ್ನಪ್ಪಿದ್ದು, ಒಂದು ಮಾತ್ರ ಬದುಕುಳಿದಿತ್ತು.

ಈ ಸಂದರ್ಭದಲ್ಲಿ ಅವರಿಗೆ ಶ್ರಾದ್ಧಾ ಕಾರ್ಯಕ್ರಮಗಳಲ್ಲಿ ಕಾಗೆ ಆಹಾರ ತಿನ್ನದೆ ಮೃತರ ಕುಟುಂಬಸ್ಥರು ನೊಂದುಕೊಳ್ಳುತ್ತಿದ್ದರ ಬಗ್ಗೆ ಮಾಹಿತಿ ಲಭಿಸಿತ್ತು. ತಮ್ಮ ಬಳಿ ಕಾಗೆ ಇರುವುದಿರಿಂದ ಇದನ್ನೇ ಉಪಾಯ ಮಾಡಿದ್ದ ಪ್ರಶಾಂತ್, ಕಾಗೆ ಸೇವೆ ನೀಡಲು ನಿರ್ಧರಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಫೇಸ್‍ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.

ಸಾಂದರ್ಭಿಕ ಚಿತ್ರ

ಅರಣ್ಯ ಅಧಿಕಾರಿಗಳಿಂದ ಕ್ರಮ:
ಸಾಮಾಜಿಕ ಜಾಲತಾಣದಲ್ಲಿ ಪ್ರಶಾಂತ್ ಅವರ ಪೋಸ್ಟ್ ವೈರಲ್ ಆಗುತ್ತಿದಂತೆ ಎಚ್ಚೆತ್ತ ಸ್ಥಳೀಯ ಅರಣ್ಯ ಅಧಿಕಾರಿಗಳು ಪ್ರಶಾಂತ್ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಮನವರಿಕೆ ಮಾಡಿ ಕಾಗೆಯನ್ನು ಮತ್ತೆ ಕಾಡಿಗೆ ಬಿಟ್ಟಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಯುವಕ ಪ್ರಶಾಂತ್, ನನಗೆ ಕಾಗೆಯನ್ನು ಇಟ್ಟುಕೊಂಡು ಬ್ಯುಸಿನೆಸ್ ಮಾಡುವ ಯೋಚನೆ ಇರಲಿಲ್ಲ. ತಾನು ಸಾಕಿರುವ ಕಾಗೆಗೆ ರೆಕ್ಕೆ ಸರಿ ಇರಲಿಲ್ಲ. ಆದ್ದರಿಂದ ಅದು ಚೇತರಿಕೆ ಕಂಡ ಮೇಲೂ ಆಹಾರ ನೀಡಿ ಆರೈಕೆ ಮಾಡುತ್ತಿದ್ದೆ. ಈಗ ಕಾಗೆಯನ್ನ ಅರಣ್ಯಕ್ಕೆ ಬಿಟ್ಟಿದ್ದೇವೆ ಎಂದಿದ್ದಾರೆ. ಅಲ್ಲದೆ ಈ ಹಿಂದೆ ಗಾಯಗೊಂಡಿದ್ದ ಉಡವನ್ನು ಕೂಡ ರಕ್ಷಣೆ ಮಾಡಿದ್ದೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *