ರಮೇಶ್ ಕುಮಾರ್ ಪಲಾಯನವಾದಿ- ಕೈ, ಬಿಜೆಪಿ ವಾಕ್ಸಮರಕ್ಕೆ ಕಲಾಪ ಬಲಿ

Public TV
1 Min Read

– ಸುಧಾಕರ್ ವಿರುದ್ಧ ಕಾಂಗ್ರೆಸ್, ರಮೇಶ್ ವಿರುದ್ಧ ಬಿಜೆಪಿ ಹಕ್ಕುಚ್ಯುತಿ ನೋಟಿಸ್

ಬೆಂಗಳೂರು: ವಿಧಾನಸಭೆ ಕಲಾಪ ಇಂದು ಬೆಳಗ್ಗೆ ಆರಂಭವಾಗುತ್ತಲೇ ಮತ್ತೆ ರಮೇಶ್ ಕುಮಾರ್ ಮತ್ತು ಸುಧಾಕರ್ ನಿಂದನೆ ವಿಷಯ ಪ್ರಸ್ತಾಪವಾಗಿ ಸದನ 15 ನಿಮಿಷ ಮುಂದೂಡಿಕೆಯಾದ ಪ್ರಸಂಗ ನಡೆಯಿತು.

ವಿಧಾನಸಭೆ ಕಲಾಪದ ಆರಂಭದಲ್ಲೇ ರಮೇಶ್ ಕುಮಾರ್ ಅಮಾನತಿಗೆ ಸಚಿವ ಈಶ್ವರಪ್ಪ ಸ್ಪೀಕರ್ ಕಾಗೇರಿಗೆ ಆಗ್ರಹಿಸಿದರು. ಇದಕ್ಕೆ ಬಿಜೆಪಿ ಸದಸ್ಯರು ಬೆಂಬಲ ನೀಡಿದರು. ಇತ್ತ ಕಾಂಗ್ರೆಸ್ಸಿನಿಂದಲೂ ಸುಧಾಕರ್ ವಿರುದ್ಧ ಹಕ್ಕುಚ್ಯುತಿ ನೊಟೀಸ್ ಮೇಲಿನ ಚರ್ಚೆಗೆ ಸಿದ್ದರಾಮಯ್ಯ ಆಗ್ರಹ ಮಂಡಿಸಿದರು. ಈ ವೇಳೆ ಉಭಯ ಪಕ್ಷಗಳ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿಗೆ ಸದನ ಸಾಕ್ಷಿಯಾಯ್ತು.

ಗದ್ದಲದ ನಡುವೆಯೇ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಎರಡು ಹಕ್ಕುಚ್ಯುತಿ ನೋಟಿಸ್ ಕೊಟ್ಟಿರುವ ಬಗ್ಗೆ ಸ್ಪೀಕರ್ ಕಾಗೇರಿಯವರು ಸದನದ ಗಮನಕ್ಕೆ ತಂದರು. ಸುಧಾಕರ್ ವಿರುದ್ಧ ಕಾಂಗ್ರೆಸ್, ರಮೇಶ್ ಕುಮಾರ್ ವಿರುದ್ಧ ಬಿಜೆಪಿ ಹಕ್ಕುಚ್ಯುತಿಗೆ ನೋಟಿಸ್ ಕೊಟ್ಟಿದ್ದಾರೆಂದು ಕಲಾಪದಲ್ಲಿ ಸ್ಪೀಕರ್ ಹೇಳಿದರು. ಈ ನೋಟಿಸ್‍ಗಳ ಮೇಲಿನ ಚರ್ಚೆಗೆ ಪ್ರಶ್ನೋತ್ತರ ವೇಳೆಯ ಬಳಿಕ ಚರ್ಚೆಗೆ ಅವಕಾಶ ಕೊಡುವುದಾಗಿ ಸ್ಪೀಕರ್ ಹೇಳಿದರು.

ನಮ್ಮ ನೋಟಿಸ್ ಮೊದಲು ಚರ್ಚೆಯಾಗಬೇಕೆಂದು ಉಭಯ ಪಕ್ಷಗಳು ಪಟ್ಟು ಹಿಡಿದವು. ಈ ವೇಳೆ ಸದನದಲ್ಲಿ ಗದ್ದಲ, ಕೋಲಾಹಲ ನಿಲ್ಲದೇ ಮುಂದುವರಿದಿತ್ತು. ಈ ಮಧ್ಯೆ ರಮೇಶ್ ಕುಮಾರ್ ಸದನಕ್ಕೆ ಬಾರದಿರುವುದನ್ನು ಕಂಡ ಬಿಜೆಪಿ ಸದಸ್ಯರು ತೀವ್ರ ಟೀಕೆ ವ್ಯಕ್ತಪಡಿಸಿದರು. ರಮೇಶ್ ಕುಮಾರ್ ಪಲಾಯನವಾದಿ. ಹಾಗಾಗಿ ಇಂದು ಅವರು ಸದನಕ್ಕೆ ಬಂದಿಲ್ಲ. ಎಲ್ಲಿ ಪಲಾಯನವಾದಿ ರಮೇಶ್ ಕುಮಾರ್ ಎಂದು ಬಿಜೆಪಿಯ ರೇಣುಕಾಚಾರ್ಯ ಮತ್ತಿತರೆ ಸದಸ್ಯರು ಕೂಗಿದರು. ಸದನದಲ್ಲಿ ಕೋಲಾಹಲ ನಿಲ್ಲದ ಹಿನ್ನೆಲೆಯಲ್ಲಿ ಸ್ಪೀಕರ್ ಅವರು ಕಲಾಪವನ್ನು 15 ನಿಮಿಷಗಳ ಕಾಲ ಮುಂದೂಡಬೇಕಾಯಿತು.

Share This Article
Leave a Comment

Leave a Reply

Your email address will not be published. Required fields are marked *