ಪರಿಷತ್ ಕಲಾಪದಲ್ಲಿ ‘ಅನರ್ಹ-ಅರ್ಹರ’ ಗಲಾಟೆ

Public TV
2 Min Read

ಬೆಂಗಳೂರು: 17 ಜನ ಶಾಸಕರನ್ನ ಸುಪ್ರೀಂಕೋರ್ಟ್ ಅನರ್ಹ ಮಾಡಿದ್ದು ಆಯ್ತು. ಅದರಲ್ಲಿ 11 ಜನ ಮತ್ತೆ ಚುನಾವಣೆಯಲ್ಲಿ ಗೆದ್ದು ಅರ್ಹರಾಗಿ ಸಚಿವರಾಗಿಯೂ ಆಯ್ತು. ಈಗ ಅನರ್ಹ ಅನ್ನೋ ಪದ ದೊಡ್ಡ ಗಲಾಟೆಗೆ ಕಾರಣವಾಗಿದೆ. ಅಷ್ಟಕ್ಕೂ ಈ ಗಲಾಟೆ ನಡೆದಿದ್ದು ವಿಧಾನ ಪರಿಷತ್ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯರು ಚರ್ಚೆ ವೇಳೆ ಆಡಿದ ಆ ಒಂದು ಪದದಿಂದ ಕಲಾಪದಲ್ಲಿ ಗದ್ದಲ ಗಲಾಟೆ ಉಂಟಾಯ್ತು.

ವಿಧಾನ ಪರಿಷತ್‍ನಲ್ಲಿ ಇಂದು ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚೆ ಆಗುತ್ತಿತ್ತು. ಈ ವೇಳೆ ಮಾತನಾಡುತ್ತಿದ್ದ ಕಾಂಗ್ರೆಸ್ಸಿನ ಶಾಸಕ ತಿಮ್ಮಾಪುರ ಗೋಲಿಬಾರ್ ಮಾಡಿದ ಯಾವುದೇ ಸರ್ಕಾರಗಳು ಉಳಿದಿಲ್ಲ ಅಂತ ಹಿಂದಿನ ಹಲವು ಉದಾಹರಣೆ ಕೊಟ್ಟರು. ಕೂಡಲೇ ಎದ್ದು ನಿಂತ ಕಾಂಗ್ರೆಸ್ಸಿನ ಐವಾನ್ ಡಿಸೋಜಾ ಈ ಸರ್ಕಾರನೂ ಉಳಿಯೊಲ್ಲ ಅಂತ ಲೇವಡಿ ಮಾಡಿದ್ರು. ಅದಕ್ಕೆ ಯಾಕೆ ಉಳಿಯೊಲ್ಲ ಅಂತ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನೆ ಮಾಡಿದ್ರು. ಇದಕ್ಕೆ ಕೂಡಲೇ ಎದ್ದುನಿಂತ ಕಾಂಗ್ರೆಸ್ ಸದಸ್ಯ ನಾರಾಯಣಸ್ವಾಮಿ ಇದು ಅನರ್ಹ ಸರ್ಕಾರ ಎಂದು ಬಿಟ್ಟರು. ಇದಕ್ಕೆ ಆಕ್ರೋಶಗೊಂಡ ಸಚಿವರಾದ ಬಿಸಿ ಪಾಟೀಲ್, ಸೋಮಶೇಖರ್, ಕಾಂಗ್ರೆಸ್ ಸದಸ್ಯರ ಮೇಲೆ ಮುಗಿಬಿದ್ದರು. ನಾವು ಅನರ್ಹರಲ್ಲ ಅರ್ಹರು. ನಾವು ಜನರಿಂದ ಆಯ್ಕೆ ಆಗಿದ್ದೇವೆ. ಬಾಯಿಗೆ ಬಂದಂತೆ ಮಾತಾಡಬೇಡಿ ಎಂದು ಬಿಸಿ ಪಾಟೀಲ್, ಸೋಮಶೇಖರ್ ವಾಗ್ದಾಳಿ ನಡೆಸಿದ್ರು. ಈ ವೇಳೆ ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೀತು. ಸದನದಲ್ಲಿ ಗದ್ದಲ ಗಲಾಟೆ ಆಯ್ತು.

ಇಷ್ಟಕ್ಕೆ ಸುಮ್ಮನೆ ಆಗದ ಬಿಸಿ ಪಾಟೀಲ್ ಹಾಗೂ ಸೋಮಶೇಖರ್, ಕೋರ್ಟ್ ಆದೇಶದಂತೆ ನಾವು ಗೆದ್ದಿದ್ದೇವೆ. ನೀವು ಯಾರು ನಮ್ಮನ್ನ ಅನರ್ಹರು ಎನ್ನಲು ಅಂತ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ರು. ಇಷ್ಟಕ್ಕೆ ಸುಮ್ಮನೆ ಆಗದ ಕಾಂಗ್ರೆಸ್ ನಾಯಕರು ಮತ್ತೆ ನೀವು ಅನರ್ಹರೇ ಎಂದು ಕೂಗಿದರು. ಮತ್ತೆ ಸದನದಲ್ಲಿ ಗದ್ದಲ ಗಲಾಟೆ ಆಯ್ತು. ಈ ವೇಳೆ ಎದ್ದುನಿಂತ ಕಾಂಗ್ರೆಸ್ ಸದಸ್ಯ ಪಿ.ಆರ್ ರಮೇಶ್ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಗಳೇ 17 ಜನರ ಶಾಸಕರನ್ನ ವೈರಸ್ ಎಂದಿದ್ದಾರೆ ಅಂತ ಆರೋಪ ಮಾಡಿದರು. ಈ ಮಾತಿಗೆ ಮತ್ತೆ ಗಲಾಟೆ ಪ್ರಾರಂಭ ಆಯ್ತು. ಪಿ.ಆರ್.ರಮೇಶ್ ಗೆ ತಿರುಗೇಟು ಕೊಟ್ಟ ಸೋಮಶೇಖರ್ ವೈರಸ್ ಆಗಲಿ ಏನೇ ಆಗಲಿ ನಿಮಗೇಕೆ ಸುಮ್ಮನಿರಿ ಅಂತ ಕಿಡಿಕಾರಿದರು. ಮತ್ತೆ ಸದನದಲ್ಲಿ ಗದ್ದಲ ಗಲಾಟೆ ಆಯ್ತು. ಕೂಡಲೇ ಕಾಂಗ್ರೆಸ್ ನಾರಾಯಣಸ್ವಾಮಿ ನಾವು ನಿಮ್ಮ ಸ್ನೇಹಿತರು ಅದಕ್ಕೆ ಹೇಳ್ತಿದ್ದೇವೆ ಅಂದರು. ಅದಕ್ಕೆ ಸಿಟ್ಟಾದ ಸೋಮಶೇಖರ್ ಮತ್ತು ಬಿಸಿ ಪಾಟೀಲ್, ನೀವು ಸ್ನೇಹತರಲ್ಲ ದುಷ್ಮನ್ ಗಳು ಎಂದು ಆಕ್ರೋಶ ಹೊರ ಹಾಕಿದ್ರು. ನಿಮ್ಮ ಸಹವಾಸ ಬೇಡ ಅಂತಾನೆ ನಿಮ್ಮನ್ನ ಬಿಟ್ಟು ಬಂದಿದ್ದೇವೆ ಎಂದ ಬಿಸಿ ಪಾಟೀಲ್ ವಾಗ್ದಾಳಿ ನಡೆಸಿದರು. ಮತ್ತೆ ಸದನದಲ್ಲಿ ಗಲಾಟೆ ಆದಾಗ ಮಧ್ಯೆ ಪ್ರವೇಶ ಮಾಡಿದ ಸಭಾಪತಿಗಳು ಪರಿಸ್ಥಿತಿ ಶಾಂತಗೊಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *