ಪಂಚಶೀಲನಗರದ ಕೆಂಪೇಗೌಡ ಬಿಲ್ಡಿಂಗ್ ಕೆಡವಿಸಿದಕ್ಕೆ ಸೋಮಣ್ಣ ವಿರುದ್ಧ ಪ್ರತಿಭಟನೆ

Public TV
2 Min Read

ಬೆಂಗಳೂರು: ನಾಡ ಪ್ರಭು ಕೆಂಪೇಗೌಡರು ಕಟ್ಟಿದ ನಾಡು ಬೆಂಗಳೂರಿನಲ್ಲಿ ಕೆಂಪೇಗೌಡರ ಯುವಕ ಸಂಘದ ಕಟ್ಟಡವನ್ನ ಸ್ಥಳೀಯ ಶಾಸಕರು ಉದ್ದೇಶ ಪೂರ್ವಕವಾಗಿ ಕೆಡವಿದ್ದಾರೆ ಎಂದು ಆರೋಪಿಸಿ ಇಂದು ಪ್ರತಿಭಟನೆ ಮಾಡಿದರು.

ಬೆಂಗಳೂರಿನ ಕಾವೇರಿಪುರಂ ವಾರ್ಡ್ ನ ಪಂಚಶೀಲನಗರದಲ್ಲಿ ಕೆಂಪೇಗೌಡ ಕಟ್ಟಡ ಇತ್ತು. ಅಲ್ಲಿನ ಯುವಕರು ನಾಡ ಪ್ರಭು ಕೆಂಪೇಗೌಡ ಯುವಕರ ಸಂಘದ ಕಚೇರಿಯನ್ನ ಮಾಡಿಕೊಂಡಿದ್ದರು. ಸಂಘದ ಯುವಕರು ಕಳೆದ ಚುನಾವಣಾ ಸಮಯದಲ್ಲಿ ಪ್ರಿಯಾಕೃಷ್ಣಗೆ ಸಪೋರ್ಟ್ ಮಾಡಿದ್ದರು ಎಂದು ಈ ಕಟ್ಟಡವನ್ನು ಸಚಿವ ವಿ.ಸೋಮಣ್ಣ ಅವರೇ ಬಿಬಿಎಂಪಿಗೆ ಹೇಳಿ ಹೊಡೆದಾಕಿಸಿದ್ದಾರೆ ಎಂದು ಆರೋಪಿಸಿ ಇಂದು ಮೂಡಲಪಾಳ್ಯ ವೃತ್ತದಲ್ಲಿ ಸಂಘದ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.

ಸಚಿವ ಸೋಮಣ್ಣರ ವಿರುದ್ಧ ದಿಕ್ಕಾರ ಕೂಗಿ ಇದು ನಾಡಪ್ರಭು ಕೆಂಪೇಗೌಡರಿಗೆ ಮಾಡಿದ ಅಪಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿ.ಸೋಮಣ್ಣ ಉದ್ದೇಶಪೂರ್ವಕವಾಗಿ ನಮ್ಮ ಸಂಘದ ಕಟ್ಟಡವನ್ನ ಕೆಡೆವಿಸಿದ್ದಾರೆ. ಇದು ಒಕ್ಕಲಿಗರ ಮೇಲೆ ಸೋಮಣ್ಣ ಮಾಡುತ್ತಿರೋ ದೌರ್ಜನ್ಯ. ಈ ಸಂಬಂಧ ಶ್ರೀ ನಿರ್ಮಾಲನಂದನಾಥ ಸ್ವಾಮೀಜಿಗಳಿಗೆ ದೂರು ನೀಡುತ್ತೇವೆ ಎಂದು ತಿಳಿಸಿದರು.

ನಮ್ಮ ಕಟ್ಟಡದ ಜಾಗ ನಮಗೆ ಬಿಟ್ಟು ಕೊಡಬೇಕು ಜೊತೆಗೆ ಸಚಿವರು ಕ್ಷಮೆ ಕೇಳಬೇಕು ಇಲ್ಲವಾದರೇ ಉಗ್ರ ಹೋರಾಟ ಮಾಡುತ್ತೇವೆ ಎಂದು ಕೆಂಪೇಗೌಡ ಯುವಕರ ಸಂಘದವರು ಎಚ್ಚರಿಕೆ ನೀಡಿದರು. ಈ ಕಟ್ಟಡದ ಕೆಡೆವಿದ ಬಗ್ಗೆ ಸ್ಥಳೀಯ ಬಿಬಿಎಂಪಿ ಸದಸ್ಯರು ಪ್ರತಿಕ್ರಿಯೆ ನೀಡಿದ್ದು, ಅದು ಬಿಬಿಎಂಪಿ ಜಾಗ, ಕಳೆದ 15 ವರ್ಷದಿಂದ ಅಲ್ಲಿ ಸಂಘದ ಕಟ್ಟಡವಿತ್ತು. ಈಗ ಅಲ್ಲಿ ಬಸ್ ನಿಲ್ದಾಣ ಮಾಡಲು ಕಟ್ಟಡವನ್ನ ತೆರವುಗೊಳಿಸಿದ್ದೇವೆ. ಬಸ್ ನಿಲ್ದಾಣ ಜೊತೆ ಆಸ್ಪತ್ರೆ, ಜಿಮ್ ಹಾಗೂ ಸಂಘಕ್ಕೆ ಒಂದು ಕೊಠಡಿ ಕಟ್ಟಿಸಿ ಕೊಡುಲು ನಿರ್ಧಾರ ಮಾಡಿದ್ದೇವೆ. ಈ ಕುರಿತು ಸಂಘದ ಸದಸ್ಯರೊಂದಿಗೆ ಮಾತುಕತೆ ಸಹ ಆಗಿದೆ ಎಂದರು.

ಸುಮಾರು 8 ಕೋಟಿ ರೂಪಾಯಿಗಳನ್ನ ಹೊಸ ಬಸ್ ನಿಲ್ದಾಣದ ನಿರ್ಮಾಣಕ್ಕೆ ಮೀಸಲಿಟ್ಟಿದ್ದೇವೆ ಇದು ಅಭಿವೃದ್ಧಿ ಕಾರ್ಯ. ಸಚಿವರು ಮತ್ತು ನಾವೂ ಸೇರಿಕೊಂಡು ಅಭಿವೃದ್ಧಿ ಕಾರ್ಯ ಮಾಡಲು ಮುಂದಾಗಿದ್ದೇವೆ. ಸಚಿವರು ಅಭಿವೃದ್ಧಿ ಕಾರ್ಯಕ್ಕಾಗಿ ಅಲ್ಲಿನ ಹಳೆಯ ಕಟ್ಟದವನ್ನು ಕೆಡವಿಸಿ ಹೊಸ ಕಟ್ಟಡದ ಕಾಮಗಾರಿಗೆ ಮುಂದಾಗಿದ್ದಾರೆ. ಯಾಕೇ ಹೀಗೆ ಪ್ರತಿಭಟನೆ ಮಾಡುತ್ತಿದ್ದಾರೆ ಅನ್ನೋದು ಗೊತ್ತಿಲ್ಲ ಎಂದು ಬಿಬಿಎಂಪಿ ಸದಸ್ಯೆ ಪಲ್ಲವಿ ಚನ್ನಪ್ಪ ಹೇಳಿದ್ದಾರೆ.

ಒಟ್ಟಿನಲ್ಲಿ ಸಂಘದ ಕೆಲ ಕಾರ್ಯಕರ್ತರು ಇದು ರಾಜಕೀಯ ದುರದ್ದೇಶದಿಂದ ಮಾಡಿದ ಕಾರ್ಯ ಅಂದರೆ ಬಿಬಿಎಂಪಿ ಸದಸ್ಯರು ಇದು ಅಭಿವೃದ್ಧಿ ಕಾರ್ಯ ಯಾವ ದುರುದ್ದೇಶವೂ ಇಲ್ಲ ಅಂತಿದ್ದಾರೆ. ಮುಂದೇನಾಗುತ್ತೋ ಕಾದುನೋಡಬೇಕು.

Share This Article
Leave a Comment

Leave a Reply

Your email address will not be published. Required fields are marked *