ನಾಲ್ಕು ತಲೆಮಾರಿನ ಕಥನ ‘ಸುವರ್ಣ ಸುಂದರಿ’!

Public TV
1 Min Read

ಎರಡು ವರ್ಷದ ಹಿಂದೆ ಮುಹೂರ್ತ ಆಚರಿಸಿಕೊಂಡಿದ್ದ ‘ಸುವರ್ಣ ಸುಂದರಿ’ ಚಿತ್ರ ಬಿಡುಗಡೆ ಹಂತಕ್ಕೆ ಬಂದಿದೆ. ಕ್ರಿ.ಶ. 1508 ರಿಂದ 2018ರವರೆಗಿನ ನಾಲ್ಕು ತಲೆಮಾರಿನ ಕತೆ ಈ ಚಿತ್ರದಲ್ಲಿದೆ. ಶ್ರೀ ಕೃಷ್ಣದೇವರಾಯರ ಅವಧಿಯಲ್ಲಿ ರಾಜಾ ಮಹಾದೇವರೆಡ್ಡಿ ಸಾಮ್ರಾಜ್ಯದಲ್ಲಿ ನಡೆದ ಘಟನೆಗಳನ್ನು ಈ ಚಿತ್ರದ ಸನ್ನಿವೇಶಗಳಿಗೆ ವಿಶೇಷವಾಗಿ ಬಳಸಲಾಗಿದೆ.

ಮೈ ನವಿರೇಳಿಸುವ ರೋಚಕ ಸ್ಟಂಟ್ಸ್ ಗಳು ಈ ಚಿತ್ರದಲ್ಲಿರಲಿವೆ. ಸುವರ್ಣ ಸುಂದರಿಗಾಗಿ ಕೇರಳ, ಹೈದರಾಬಾದ್, ಬೀದರ್, ವಿಧಾನಸೌಧ ರಸ್ತೆ, ನೈಸ್ ರೋಡ್‍ಗಳಲ್ಲಿ 90 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಕತೆಗೆ ಪೂರಕವಾಗಿ 50 ನಿಮಿಷ ಗ್ರಾಫಿಕ್ಸ್ ಬಳಸಲಾಗಿದೆ. ನಾಯಕಿಯಾಗಿ ಡೆಹರಾಡೂನ್ ಮೂಲದ ಸಾಕ್ಷಿ ಎರಡು ಗೆಟಪ್‍ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಾರಂಭದ ಅವಧಿಯಲ್ಲಿ ಸಾಯಿಕುಮಾರ್ ಪಾತ್ರವಿರುತ್ತದೆ. ಹಾಗೆಯೇ 1960ರ ಕಲೆಕ್ಟರ್ ಪಾತ್ರದಲ್ಲಿ ತಿಲಕ್ ನಟಿಸಿದ್ದಾರೆ. ಮತ್ತೊಬ್ಬ ನಾಯಕಿ ಪೂರ್ಣ ಮತ್ತು ಜಯಪ್ರದಾ ಪಾತ್ರದ ವಿವರವನ್ನು ಚಿತ್ರತಂಡ ಇನ್ನೂ ಜಾಹೀರು ಮಾಡಿಲ್ಲ. ಈ ಚಿತ್ರದಲ್ಲಿರುವ ಎರಡು ಹಾಡುಗಳಿಗೆ ಸಾಯಿಕಾರ್ತಿಕ್ ಸಂಗೀತ ಸಂಯೋಜಿಸಿದ್ದಾರೆ.

ಇತಿಹಾಸ ವಿಷಯದಲ್ಲಿ ಪದವಿ ಪಡೆದುಕೊಂಡಿರುವ ಎಂ.ಎಸ್.ಎನ್.ಸೂರ್ಯ ಕತೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಅವರ ಸಹೋದರಿ ನಿರ್ಮಾಪಕಿಯಾಗಿದ್ದಾರೆ. ಬಾಹುಬಲಿ-2 ಚಿತ್ರದ ಸೆಕೆಂಡ್ ಕ್ಯಾಮರಾಮೆನ್ ಯಲ್ಲಮಹಂತಿ ಈಶ್ವರ್ ಛಾಯಾಗ್ರಹಣವಿದ್ದು, ರಾಮ್ ಸುಂಕರ ಸಾಹಸ ಸಂಯೋಜಿಸಿದ್ದಾರೆ.

ಅನುಷ್ಕಾ ಶೆಟ್ಟಿ ಅಭಿನಯದ ಆರುಂಧತಿ ನಿರ್ಮಾಣದ ಸಂದರ್ಭದಲ್ಲಿ ತಂತ್ರಜ್ಞಾನ ಈಗಿನಷ್ಟು ಮುಂದುವರಿದಿರಲಿಲ್ಲ. ಆದರೆ ಸುವರ್ಣ ಸುಂದರಿಗೆ ಈಗಿನ ಅಪ್‍ಡೇಟೆಡ್ ಟೆಕ್ನಾಲಜಿಯನ್ನು ಬಳಸಿಕೊಂಡಿರುವುದರಿಂದ ದೃಶ್ಯಗಳು ಮತ್ತಷ್ಟು ನೈಜವಾಗಿ ಮೂಡಿಬಂದಿವೆ. ಇದೆಲ್ಲದರ ಪರಿಣಾಮವೆನ್ನುವಂತೆ ಆರು ಕೋಟಿಯಲ್ಲಿ ನಿರ್ಮಾಣಗೊಳ್ಳಬೇಕಿದ್ದ ಸುವರ್ಣ ಸುಂದರಿ ಪ್ರಚಾರದ ಹಂತಕ್ಕೆ ಬರುವ ಹೊತ್ತಿಗೆ ಹತ್ತು ಕೋಟಿಗೆ ಬಂದು ನಿಂತಿದೆಯಂತೆ. ಆದರೂ ಇದಕ್ಕೆಲ್ಲಾ ಚಿಂತೆ ಮಾಡದೆ ಎಂ.ಎನ್.ಲಕ್ಷೀ ಖರ್ಚು ಮಾಡಿದ್ದಾರೆ. ಈ ಚಿತ್ರವು ಇದೇ 31ರಂದು ರಾಜ್ಯದ್ಯಂತ ತೆರೆ ಕಾಣುವ ಸಾಧ್ಯತೆ ಇದೆ.

Share This Article
Leave a Comment

Leave a Reply

Your email address will not be published. Required fields are marked *