ಡಿ.ಕೆ ಶಿವಕುಮಾರ್ ಡಿಸಿಎಂ ಅಲ್ಲ, ರೀಲ್ಸ್ ಮಿನಿಸ್ಟರ್: ನಿಖಿಲ್ ಕುಮಾರಸ್ವಾಮಿ ಕಿಡಿ

Public TV
2 Min Read

ಬೆಂಗಳೂರು: ಡಿ.ಕೆ ಶಿವಕುಮಾರ್ (D.K Shivakumar) ಡಿಸಿಎಂ ಅಲ್ಲ, ರೀಲ್ಸ್ ಮಿನಿಸ್ಟರ್, ಆರ್‌ಸಿಬಿ (RCB) ಅಭಿಮಾನಿಗಳ ಸಾವಿನ ಸುದ್ದಿ ತಿಳಿದ ಮೇಲೂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಪ್‌ಗೆ ಮುತ್ತು ಕೊಟ್ಟು ಸಾವಿನಲ್ಲೂ ಸಂಭ್ರಮ ಮಾಡ್ತಾರೆ ಎಂದು ಡಿಕೆಶಿ ವಿರುದ್ಧ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರ್ಕಾರ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಪೊಲೀಸರನ್ನು ಅಮಾನತು ಮಾಡಿದ್ದಾರೆ. ಖುದ್ದು ಪೊಲೀಸರೇ ಎರಡೆರಡು ಕಡೆ ಕಾರ್ಯಕ್ರಮ ಬೇಡ ಅಂದರು ಸಿಎಂ ಮತ್ತು ಡಿಸಿಎಂ ಕ್ರೆಡಿಟ್ ಪಡೆಯೋಕೆ ಈ ಕಾರ್ಯಕ್ರಮ ಮಾಡಿ ಅನಾಹುತಕ್ಕೆ ಕಾರಣರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕಾಲ್ತುಳಿತ ಪ್ರಕರಣ ನ್ಯಾಯಾಂಗ ತನಿಖೆಗೆ ಒಪ್ಪಿಸಿ, ಇದರಲ್ಲಿ ಸರ್ಕಾರವೇ ಅಪರಾಧಿ: ಆರ್.ಅಶೋಕ್

ಸಾವಿನ ವಿಷಯ ನನಗೆ ಗೊತ್ತಿರಲಿಲ್ಲ, ಅಲ್ಲಿ ನೆಟ್ವರ್ಕ್ ಇರ್ಲಿಲ್ಲ, ನಾನು ಮಾಧ್ಯಮಗಳ ಮೂಲಕ ವಿಷಯ ತಿಳಿದುಕೊಂಡೆ ಅಂತ ಹೇಳಿದ್ರು, ಅಲ್ಲಿ ಜಾಮಾರ್ ಹಾಕಿದ್ರೆ ವಿಷಯವನ್ನ ನೀವು ಹೇಗೆ ತಿಳಿದುಕೊಂಡ್ರಿ? ಇದಕ್ಕೆ ಡಿಸಿಎಂ ಅವರೇ ಉತ್ತರಿಸಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.

ಇವರುಗಳು ಕ್ರೆಡಿಟ್ ಪಡೆದುಕೊಳ್ಳಲು ಹೋಗಿ ಅಮಾಯಕರ ಜೀವಗಳನ್ನ ಬಲಿ ಪಡೆದಿದ್ದಾರೆ. ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಜನರಿಗೆ ಅಭಿಮಾನಿಗಳಿಗೆ ಈ ಕಾರ್ಯಕ್ರಮಕ್ಕೆ ಎಲ್ಲರೂ ಆಗಮಿಸಬೇಕೆಂದು ಹೇಳಿದ್ರು. ಈಗ ಪೊಲೀಸರನ್ನ ಅಮಾನತು ಮಾಡಿರುವುದು ಕೋತಿ ತಾನು ಮೊಸರು ತಿಂದು ಮೇಕೆ ಬಾಯಿಗೆ ಒರೆಸಿದಂತಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಐಎಎಸ್, ಐಪಿಎಸ್ ಅಧಿಕಾರಿಗಳನ್ನ ಮುಂದೆ ಇಡ್ಕೊಂಡು ನಿಮಗೆ ಬೇಕಾದ ತೀರ್ಮಾನ ತೆಗೆದುಕೊಂಡು. ಕೊನೆಗೆ ಪೊಲೀಸರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡ್ತಿದ್ದಾರೆ. ಸರ್ಕಾರ ಏನೇ ತಪ್ಪುಮಾಡಿದ್ರು ನಿಮ್ಮ ಮೇಲೆಯೇ ಗೂಬೆ ಕೂರಿಸುತ್ತದೆ. ಈ ಹಿನ್ನೆಲೆಯಲ್ಲಿ ನಿಷ್ಠಾವಂತ ಅಧಿಕಾರಿಗಳಿಗೆ ಕೈಮುಗಿದು ಮನವಿ ಮಾಡುತ್ತೇನೆ. ಇನ್ನಾದರು ಎಚ್ಚೆತ್ತುಕೊಳ್ಳಿ ಎಂದಿದ್ದಾರೆ.

18 ವರ್ಷದಿಂದ ಐಪಿಎಲ್ ನಡೆಯುತ್ತಿದೆ. ಪೊಲೀಸ್ ಅಧಿಕಾರಿಗಳು ಯಾವುದೇ ಅಹಿತಕರ ಘಟನೆಗೆ ಆಸ್ಪದ ಕೊಟ್ಟಿದೆ, ಬಹಳ ಚೆನ್ನಾಗಿ ನಡೆಸಿಕೊಂಡು ಬಂದ್ದಿದ್ದಾರೆ. ಆದರೆ ಇಲ್ಲಿ ಸರ್ಕಾರದ ಒತ್ತಡಕ್ಕೆ ಮಣಿದು ಪೊಲೀಸ್ ಅಧಿಕಾರಿಗಳನ್ನು ಸಂಧಿಗ್ದ ಪರಿಸ್ಥಿತಿಗೆ ದುಡಿದವರು ಯಾರು? ಇದಕ್ಕೆ ರಾಜ್ಯದ ಮುಖ್ಯಮಂತ್ರಿಗಳೇ ಉತ್ತರ ನೀಡಬೇಕು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೃಹ ಸಚಿವ ಪರಮೇಶ್ವರ್‌ಗೆ ಬೇರೆ ಇಲಾಖೆ ಕೊಡೋದು ಒಳ್ಳೇದು. ಈ ಅವಾಂತರಕ್ಕೆ ಕಾರಣವಾದ ರೀಲ್ಸ್ ಮಿನಿಸ್ಟರ್ ಡಿ.ಕೆ ಶಿವಕುಮಾರ್ ಅವರನ್ನ ಮೊದಲು ಸಸ್ಪೆಂಡ್ ಮಾಡ್ಬೇಕು. ಪೊಲೀಸ್ ಅಧಿಕಾರಿಗಳನ್ನು ಬಲಿಪಶು ಮಾಡಿ “ಕೋತಿ ತಾನು ತಿಂದು ಮೇಕೆ ಮೂತಿಗೆ ಒರೆಸಿದಂತೆ” ಗಾದೆ ಇದೆ ಇದರಲ್ಲಿ ಕೋತಿ ಯಾರು.? ಮೇಕೆ ಯಾರು ಅಂತ ರಾಜ್ಯದ ಜನ ತೀರ್ಮಾನ ಮಾಡಬೇಕಿದೆ ಎಂದು ಹೇಳಿದ್ದಾರೆ.

ಈ ಸಾವಿನ ಘಟನೆ ಮಧ್ಯಾಹ್ನವೇ ನಡೆದಿದ್ದರೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ನನಗೆ ಮಾಹಿತಿಯೇ ಇಲ್ಲ ಅಂದ್ರು, ಆ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಿ ಕಪ್‌ಗೆ ಮುತ್ತು ಕೊಟ್ಟರು, ಇದು ಸರ್ಕಾರದ ವೈಫಲ್ಯ ಮೊದಲು ಪರಮೇಶ್ವರ್, ಡಿಸಿಎಂ ಅವರ ರಾಜೀನಾಮೆಯನ್ನು ಸಿಎಂ ಅವರು ಪಡೆಯಬೇಕು. ಇದು ಸರ್ಕಾರದ ವೈಫಲ್ಯ ಎಂದು ನಿಖಿಲ್ ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ. ಇದನ್ನೂ ಓದಿ: KSCA ವಿರುದ್ಧ ಬಲವಂತದ ಕ್ರಮ ಬೇಡ: ಹೈಕೋರ್ಟ್‌ ಮಧ್ಯಂತರ ಆದೇಶ

Share This Article