ದಿನಕ್ಕೊಂದು ದೇಶ, ಗಳಿಗೆಗೊಂದು ವೇಷ ಬದಲಿಸುವ ಪ್ರಧಾನಿ ಎಲ್ಲಿದ್ದಾರೆ: ಸಿದ್ದರಾಮಯ್ಯ

Public TV
2 Min Read

– ಹೇಡಿ ರಾಜ್ಯ ಸರ್ಕಾರಕ್ಕೆ ಕೇಂದ್ರವನ್ನು ಪ್ರಶ್ನಿಸುವ ಧೈರ್ಯ ಇಲ್ಲ

ಬೆಂಗಳೂರು: ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಸರಣಿ ಟ್ವೀಟ್ ಮೂಲಕ ಬಿಜೆಪಿ ಪಕ್ಷದ ಮೇಲೆ ಕಿಡಿಕಾರಿದ್ದಾರೆ. ದಿನಕ್ಕೊಂದು ದೇಶ, ಗಳಿಗೆಗೊಂದು ವೇಷ ಬದಲಿಸುವ ಪ್ರಧಾನಿ ಎಲ್ಲಿದ್ದಾರೆ ಎಂದು ಹೇಳುವ ಮೂಲಕ ಮೋದಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಇಂದು ಬೆಳಗ್ಗೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ದಿನಕ್ಕೊಂದು ದೇಶ ಸುತ್ತುವ, ಗಳಿಗೆಗೊಂದು ವೇಷ ಬದಲಿಸುವ ಈಗಿನ ಪ್ರಧಾನಿಗಳಿಗೆ ಒಂದು ಘಳಿಗೆ ಬಂದು ಸಂತ್ರಸ್ತರ ಗೋಳು ಕೇಳುವ ಕನಿಷ್ಠ ಮಾನವೀಯತೆ ಇಲ್ಲದಿರುವುದು ದುರಂತ ಎಂದು ಟ್ವೀಟ್ ಮಾಡುವ ಮೂಲಕ ಮೋದಿ ಅವರ ಮೇಲೆ ಗುಡುಗಿದ್ದಾರೆ.

ನಮ್ಮ ಪ್ರತಿಭಾವಂತ ವಿಜ್ಞಾನಿಗಳು ಹಗಲಿರುಳು ಶ್ರಮಿಸಿ ನಡೆಸಿದ ಚಂದ್ರಯಾನ-2 ಪ್ರಯೋಗ, ನರೇಂದ್ರ ಮೋದಿ ಹಾಜರು ಹಾಕಿದರೂ ವಿಫಲವಾಯಿತು. ಪ್ರಧಾನಿಗಳು ಅಷ್ಟೇ ಸಮಯವನ್ನು ಅತಿವೃಷ್ಟಿ ಪೀಡಿತ ಪ್ರದೇಶದ ಭೇಟಿಗೂ ನೀಡಿದ್ದರೆ ಪ್ರಾಯಶ್ಚಿತ ಮಾಡಿಕೊಂಡಂತಾಗುತಿತ್ತು ಎಂದು ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಅತಿವೃಷ್ಟಿಯಿಂದ ಮನೆ, ತೋಟ, ಗದ್ದೆಯನ್ನು ಕಳೆದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಹಾವೇರಿ, ಗದಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಐವರು ರೈತರ ಕುಟುಂಬಕ್ಕೆ ನನ್ನ ಸಂತಾಪಗಳು. ಇದೇ ರೀತಿ ನೂರಾರು ರೈತರು ಅಸಹಾಯಕರಾಗಿ ಆತ್ಮಹತ್ಯೆಯ ದಾರಿಯಲ್ಲಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಇದ್ದೂ ಸತ್ತಂತಿವೆ. ಅತಿವೃಷ್ಟಿ ಪೀಡಿತ ರೈತರ ಬ್ಯಾಂಕುಗಳಲ್ಲಿನ ಸಾಲ ಬಾಕಿಗಾಗಿ ನೋಟಿಸ್ ಜಾರಿ ಮಾಡಿ ಕಿರುಕುಳ ನೀಡುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ರಾಜ್ಯ ಸರ್ಕಾರಕ್ಕೇನಾದರೂ ಒಂದಿಷ್ಟು ಮಾನವೀಯತೆ ಎನ್ನುವುದಾದರೂ ಇದ್ದರೆ ಇಂತಹ ಕ್ರೌರ್ಯವನ್ನು ತಕ್ಷಣ ನಿಲ್ಲಿಸಬೇಕು ಎಂದು ಟ್ವಿಟ್ಟರ್ ಮೂಲಕ ಹೇಳಿದ್ದಾರೆ.

ರಾಜ್ಯಕ್ಕೆ ಬಂದೆರಗಿದ ಅತಿವೃಷ್ಟಿಯಿಂದ ರೂ.36 ಸಾವಿರ ಕೋಟಿ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ. ಕೇಂದ್ರ ಸರ್ಕಾರದಿಂದ ಇಲ್ಲಿಯವರೆಗೆ ನಯಾಪೈಸೆ ನೆರವು ಬಂದಿಲ್ಲ. ರಾಜ್ಯದ ಹೇಡಿ ಸರ್ಕಾರಕ್ಕೆ ಕೇಂದ್ರವನ್ನು ಪ್ರಶ್ನಿಸುವ ಧೈರ್ಯ ಇಲ್ಲ. 2009ರಲ್ಲಿ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿದ್ದಾಗ ಸಂಭವಿಸಿದ ಅತಿವೃಷ್ಟಿಯ ಸಂದರ್ಭದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಧಾವಿಸಿ ಬಂದು ಸಮೀಕ್ಷೆ ನಡೆಸಿ ತಕ್ಷಣ ರೂ.1500 ಕೋಟಿ ರೂ. ಪರಿಹಾರ ಘೋಷಿಸಿದ್ದರು. ಈಗಿನ ಪ್ರಧಾನಿ ಎಲ್ಲಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.

ಕಾಲ್ಗುಣದಂತಹ ಮೌಢ್ಯದಲ್ಲಿ ನನಗೆ ನಂಬಿಕೆ ಇಲ್ಲ. ಆದರೆ 2009ರಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗಲೇ ಅತಿವೃಷ್ಟಿ ಬಂದೆರಗಿತು. ನಮ್ಮ ಕಾಲದಲ್ಲಿ ರೈತರು ಆತ್ಮಹತ್ಯೆಯ ದಾರಿ ಹಿಡಿದಾಗ ನಮ್ಮ ಸರ್ಕಾರ ಕೃಷಿಭಾಗ್ಯ, ಅನ್ನಭಾಗ್ಯ, ಕ್ಷೀರಧಾರೆಯಂತ ಯೋಜನೆಗಳ ಮೂಲಕ ನೆರವಾಗಿ ಆತ್ಮಹತ್ಯೆಯ ಸರಣಿಯನ್ನು ತಡೆದಿದ್ದೆವು. ಅತಿವೃಷ್ಠಿ ಪೀಡಿತ ಪ್ರದೇಶಕ್ಕೆ ಪರಿಹಾರಕ್ಕಾಗಿ ಒತ್ತಾಯಿಸಿದಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ. ಕೇಂದ್ರ ಸರ್ಕಾರ ದಿವಾಳಿಯಾಗಿ ಹೋಗಿರುವ ಸೂಚನೆ ಇದು. ಇದು ನಿಜವಲ್ಲದೆ ಇದ್ದರೆ ಮೊದಲು ದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು ಎಂದು ಒತ್ತಯ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *