ಅನುದಾನ ಕೋರಿ ಸರ್ಕಾರಕ್ಕೆ ಸಿದ್ದರಾಮಯ್ಯ ಮತ್ತೊಂದು ಪತ್ರ

Public TV
2 Min Read

– ಬಿಜೆಪಿ ಮನೆಯಲ್ಲಿ ಅಸಮಾಧಾನದ ಕಿಡಿ

ಬೆಂಗಳೂರು: ಬಿಜೆಪಿ ಸರ್ಕಾರದಲ್ಲಿ ಶಾಸಕರು ನೆಮ್ಮದಿಯಾಗಿಲ್ಲ ಅನ್ನೋದು ಹಲವು ನಿದರ್ಶನಗಳಿಂದ ಈಗಾಗಲೇ ಗೊತ್ತಾಗಿದೆ. ಮುಖ್ಯವಾಗಿ ತಮ್ಮದೇ ಸರ್ಕಾರ ಇದ್ದಾಗಿಯೂ ಮೂಲ ಬಿಜೆಪಿ ಶಾಸಕರ ಕ್ಷೇತ್ರಗಳಿಗೂ ಅನುದಾನ ಸಿಗದಿರುವುದು ಶಾಸಕರ ನೆಮ್ಮದಿ ಕೆಡಿಸಿದೆ. ವಲಸಿಗರ ಕ್ಷೇತ್ರಗಳಿಗೆ ಅನುದಾನ ಕೊಟ್ಟ ಸರ್ಕಾರ ತಮ್ಮ ಕ್ಷೇತ್ರಗಳಿಗೆ ಇನ್ನೂ ಅನುದಾನ ಕೊಡದಿರುವುದು ಪಕ್ಷದ ಮೂಲ ಶಾಸಕರಲ್ಲಿ ಆಕ್ರೋಶ ಹುಟ್ಟಿಸಿದೆ. ಈ ಮಧ್ಯೆ ಬಿಜೆಪಿ ಶಾಸಕರಿಗೆ ವಿರೋಧ ಪಕ್ಷದ ದುಃಸ್ವಪ್ನವಾಗಿ ಕಾಡತೊಡಗಿದ್ದಾರಂತೆ.

ಬಿಜೆಪಿ ಶಾಸಕರು ಇದೀಗ ಸಿದ್ದರಾಮಯ್ಯ ಕಾರಣದಿಂದಾಗಿ ಅಸಮಧಾನಗೊಂಡಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಕ್ಷೇತ್ರಕ್ಕೆ ಇತ್ತೀಚೆಗೆ ಸರ್ಕಾರ ನೀಡಿದ 600 ಕೋಟಿ ರೂ. ಅನುದಾನ ಮೊದಲೇ ಅನುದಾನ ಸಿಕ್ತಿಲ್ಲ ಅನ್ನೋ ಕೊರಗಿನಲ್ಲಿದ್ದ ಬಿಜೆಪಿ ಶಾಸಕರಿಗೆ ಮತ್ತಷ್ಟು ಸಿಟ್ಟು ಬರಿಸಿತ್ತು. ಇದೀಗ ಅದೇ ಸಿದ್ದರಾಮಯ್ಯ ಮತ್ತೆ ಅನುದಾನ ಕೋರಿ ಸರ್ಕಾರಕ್ಕೆ ಮತ್ತೊಂದು ಬರೆದಿರುವುದು ಬಹಿರಂಗವಾಗಿದೆ. ಅಲ್ಲದೆ ಈ ಪತ್ರ ಬಿಜೆಪಿ ಶಾಸಕರ ಮನಸ್ಸಲ್ಲಿ ತಳಮಳ, ಆಕ್ರೋಶ ಹುಟ್ಟಿಸಿದೆ ಎಂದು ಹೇಳಲಾಗಿದೆ.

ಹೌದು ಸಿದ್ದರಾಮಯ್ಯ ಮತ್ತೆ ಬಿಜೆಪಿ ಶಾಸಕರಲ್ಲಿ ಅನುದಾನ ತಾರತಮ್ಯದ ಕಿಡಿ ಹಚ್ಚಿದ್ದಾರೆ. ಮೊನ್ನೆ ತಾನೇ ಸಿಎಂ ಯಡಿಯೂರಪ್ಪರಿಂದ 600 ಕೋಟಿ ರೂ ಅನುದಾನ ಕ್ಲಿಯರ್ ಮಾಡಿಸಿಕೊಂಡಿದ್ದ ಸಿದ್ದರಾಮಯ್ಯ, ಇದೀಗ ಮತ್ತೆ ಸ್ವಕ್ಷೇತ್ರ ಬಾದಾಮಿಗೆ ಮತ್ತಷ್ಟು ಅನುದಾನ ಕೋರಿ ಪತ್ರ ಬರೆದಿದ್ದಾರೆ. ಸಿದ್ದರಾಮಯ್ಯ ಈ ಬಾರಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪಗೆ ಪತ್ರ ಬರೆದಿದ್ದಾರೆ. ಒಟ್ಟು 51 ಕೋಟಿ ರೂ. ಅನುದಾನ ಕೋರಿ ಪತ್ರ ಬಾದಾಮಿ ಶಾಸಕ ಸಿದ್ದರಾಮಯ್ಯ, ಈಶ್ವರಪ್ಪಗೆ ಪತ್ರ ಬರೆದಿದ್ದಾರೆ. ನೆರೆ ಬಾಧಿತರ ಆಸರೆ ಮನೆಗಳ ಕಾಲೋನಿಗೆ ಮೂಲ ಸೌಕರ್ಯಕ್ಕೆ ಅನುದಾನ ಕೋರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಸಿದ್ದರಾಮಯ್ಯ ಪತ್ರದಿಂದ ಬಿಜೆಪಿ ಶಾಸಕರು ಗರಂ ಆಗಿದ್ದಾರೆ.

ಈಗಾಗಲೇ ವಲಸಿಗ ಶಾಸಕರಿಂದಾಗಿ ತಮ್ಮ ಕ್ಷೇತ್ರಗಳಿಗೆ ಅನುದಾನಕ್ಕೆ ಬ್ರೇಕ್ ಬಿದ್ದಿದೆ ಎಂಬ ಚಿಂತೆ, ಬೇಸರದಲ್ಲಿ ಮೂಲ ಬಿಜೆಪಿಗರಿದ್ದಾರೆ. ಈಗ ಅದು ಸಾಲದು ಅಂತ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಸರ್ಕಾರ ಅನುದಾನದ ಮೇಲೆ ಅನುದಾನ ಕೊಡ್ತಿದ್ರೆ ಪಕ್ಷದ ಶಾಸಕರಿಗೆ ಹೇಗಾಗಿರಬೇಡ ಹೇಳಿ. ಹಾಗಾಗಿ ಅನುದಾನದ ಬರೆ ಸಹಿಸದ ಆಡಳಿತ ಪಕ್ಷದ ಶಾಸಕರು ಈಗ ಅಸಮಾಧಾನದ ಹೊಗೆ ಉಗುಳುತ್ತಿದ್ದಾರೆ. ಸಿದ್ದರಾಮಯ್ಯಗೆ ಅನುದಾನದ ಬಂಪರ್, ಬಿಜೆಪಿಯಲ್ಲಿ ಅಸಮಾಧಾನ ಹೊಗೆ ಹೆಚ್ಚು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇಷ್ಟೆಲ್ಲ ಆದ ಮೇಲೂ ಬಿಜೆಪಿ ಶಾಸಕರು ಸುಮ್ಮನಿರ್ತಾರಾ? ಶಾಸಕರೆಲ್ಲ ಒಟ್ಟು ಸೇರಿ ಮುಂದಿನ ನಡೆ ಬಗ್ಗೆ ಈಗಲೇ ಒಂದು ನಿರ್ಧಾರಕ್ಕೆ ಬರ್ತಾರಾ ಅಥವಾ ಸಿದ್ದರಾಮಯ್ಯಗೆ ಈ ಅನುದಾನ ಕೊಡೋವರೆಗೂ ಶಾಸಕರು ಕಾಯ್ತಾರಾ ಅನ್ನೋ ಪ್ರಶ್ನೆಗಳು ಮೂಡಿವೆ.

ಸಿದ್ದು ಪತ್ರದಲ್ಲಿ ಏನಿದೆ?:
ಸಿದ್ದರಾಮಯ್ಯ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪಗೆ ಬರೆದಿರುವ ಪತ್ರದಲ್ಲಿ, ಸ್ವಕ್ಷೇತ್ರ ಬಾದಾಮಿಗೆ ಅನುದಾನ ಕೊಡಿ ಎಂದು ಕೋರಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಒಟ್ಟು 51 ಕೋಟಿ ರೂ ಅನುದಾನಕ್ಕೆ ಬಾದಾಮಿ ಶಾಸಕ ಸಿದ್ದರಾಮಯ್ಯ ಈ ಪತ್ರದಲ್ಲಿ ಬೇಡಿಕೆ ಇಟ್ಟಿದ್ದಾರೆ. ನೆರೆ ಬಾಧಿತರ ಆಸರೆ ಮನೆಗಳ ಕಾಲೋನಿಗೆ ಮೂಲ ಸೌಕರ್ಯಕ್ಕೆ ಈ ಅನುದಾನ ಕೋರಿದ್ದಾರೆ. 2009ರಲ್ಲಿ ನೆರೆ ಬಾಧಿತ 34 ಗ್ರಾಮಗಳ ಆಸರೆ ಕಾಲೋನಿಗಳಿವು. ಪ್ರತಿ ಗ್ರಾಮಕ್ಕೆ ಒಂದೂವರೆ ಕೋಟಿ ರೂ. ಅನುದಾನ ಬೇಡಿಕೆ ಇಟ್ಟಿದ್ದಾರೆ. ರಸ್ತೆ, ಚರಂಡಿ, ಕುಡಿವ ನೀರು, ಸೋಲಾರ್ ಲೈಟ್ ಸೇರಿ ಮೂಲ ಸೌಕರ್ಯ ಒದಗಿಸಲು ಸಿದ್ದರಾಮಯ್ಯ ಅನುದಾನ ಕೋರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *