ಕಿಸ್: ತುಂಟ ತುಟಿಗಳ ಆಟೋಗ್ರಾಫಿಗೆ ಮನಸೋತ ಪ್ರೇಕ್ಷಕರು!

Public TV
1 Min Read

ಬೆಂಗಳೂರು: ಗಾಢವಾದ ಪ್ರೀತಿಯಿಂದ, ಶ್ರದ್ಧೆಯಿಂದ ಮಾಡಿದ ಯಾವ ಸಿನಿಮಾಗಳನ್ನೂ ಕನ್ನಡದ ಪ್ರೇಕ್ಷಕರ ಪ್ರಭುಗಳು ಕಡೆಗಣಿಸಿದ ಉದಾಹರಣೆಗಳಿಲ್ಲ. ಹಾಗಿದ್ದ ಮೇಲೆ ಅಖಂಡ ಮೂರು ವರ್ಷಗಳ ಕಾಲ ನಿರ್ದೇಶಕ ಎ.ಪಿ. ಅರ್ಜುನ್ ಶ್ರಮವಹಿಸಿ ಸೃಷ್ಟಿಸಿರುವ ಕಿಸ್ ಎಂಬ ದೃಶ್ಯ ಕಾವ್ಯವನ್ನು ಒಪ್ಪಿಕೊಳ್ಳದಿರುತ್ತಾರೆಯೇ? ಕಿಸ್ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗುತ್ತಾ ಬಂದಿದ್ದರು ಕೂಡ ಪ್ರೇಕ್ಷಕರ ಕುತೂಹಲವೆಂಬುದು ಅದನ್ನು ಸದಾ ಹಿಂಬಾಲಿಸುತ್ತಲೇ ಇತ್ತು. ಅದಕ್ಕೆ ಸರಿಯಾಗಿ ಹೊರ ಬಂದಿದ್ದ ಹಾಡುಗಳು ಮತ್ತು ಟ್ರೇಲರ್‍ಗಳು ಪ್ರೇಕ್ಷಕರಲ್ಲಿ ತೀವ್ರವಾದ ನಿರೀಕ್ಷೆಗಳೇ ಪಡಿಮೂಡಿಕೊಂಡಿದ್ದವು. ಅಂತಹ ನಿರೀಕ್ಷೆಗಳಿಗೂ ಮೀರಿದ ಸೊಗಸಿನೊಂದಿಗೆ ಮೂಡಿ ಬಂದಿರೋ ಕಿಸ್ ಸಿನಿಮಾವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.

ಎ.ಪಿ ಅರ್ಜುನ್ ನಿರ್ದೇಶನ ಮತ್ತು ನಿರ್ಮಾಣದ ಕಿಸ್‍ಗೆ ಮೊದಲ ದಿನವೇ ಭರ್ಜರಿ ಓಪನಿಂಗ್ ಸಿಕ್ಕಿತ್ತು. ಆ ನಂತರದ ದಿನಗಳಲ್ಲಿಯೂ ರಾಜ್ಯಾದ್ಯಂತ ಒಂದೇ ಆವೇಗದಿಂದ ಥಿಯೇಟರ್‍ಗಳು ಭರ್ತಿಯಾಗಲಾರಂಭಿಸಿದ್ದವು. ಇದಕ್ಕೆ ಕಾರಣವಾದದ್ದು ಕಿಸ್ ಬಗ್ಗೆ ಬಾಯಿಂದ ಬಾಯಿಗೆ ಹರಡಿಕೊಂಡಿದ್ದ ಸದಾಭಿಪ್ರಾಯ. ಅಷ್ಟಕ್ಕೂ ಈ ಚಿತ್ರವನ್ನು ಅರ್ಜುನ್ ಎಲ್ಲ ವರ್ಗದ ಪ್ರೇಕ್ಷಕರನ್ನೂ ಕಾಡುವಂತೆ, ಮತ್ತೆ ಮತ್ತೆ ಚಿತ್ರಮಂದಿರಗಳತ್ತ ಸೆಳೆಯುವ ಸಮ್ಮೋಹಕ ರೀತಿಯಲ್ಲಿಯೇ ಕಟ್ಟಿಕೊಟ್ಟಿದ್ದರು. ಮೊದಲ ದಿನವೇ ತಾಜಾ ತಾಜಾ ಕಿಸ್‍ಗೆ ಜನ ಫಿದಾ ಆಗಿ ಮಾರನೇ ದಿನದಿಂದಲೇ ಸಿನಿಮಾ ಮಂದಿರಗಳು ತುಂಬಿ ತುಳುಕುವಂತಾಗಿತ್ತು. ಈ ಮೂಲಕ ವರ್ಷಾಂತರಗಳ ಶ್ರಮವೂ ಸಾರ್ಥಕ್ಯ ಕಂಡಿದೆ.

ಇವತ್ತಿನ ವಾತಾವರಣದಲ್ಲಿ ಹೊಸ ಹುಡುಗ-ಹುಡುಗಿಯನ್ನು ನಾಯಕ-ನಾಯಕಿಯರನ್ನಾಗಿಸಿ ಸಿನಿಮಾ ಮಾಡಲು ಎಂಥವರೂ ಹಿಂದೇಟು ಹಾಕುತ್ತಾರೆ. ಆದರೆ ಸ್ವತಃ ನಿರ್ಮಾಪಕರಾಗಿಯೂ ಜವಬ್ದಾರಿ ಹೊತ್ತುಕೊಂಡಿದ್ದ ಅರ್ಜುನ್ ಯಾವ ಭಯವೂ ಇಲ್ಲದೇ ಹೊಸ ಮುಖಗಳನ್ನೇ ಆಯ್ಕೆ ಮಾಡಿಕೊಂಡಿದ್ದರು. ಹಾಗೆಯೇ ನಾಯಕ ನಾಯಕಿಯರಾಗಿ ನಟಿಸಿರೋ ವಿರಾಟ್ ಮತ್ತು ಶ್ರೀಲೀಲಾ ಜೋಡಿ ಮುದ್ದು ಮುದ್ದಾಗಿಯೇ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಎ.ಪಿ ಅರ್ಜುನ್ ಹೇಳಿಕೇಳಿ ಪ್ರೇಮ ಕಥೆಗಳ ಸ್ಪೆಷಲಿಸ್ಟ್. ಈ ಸಿನಿಮಾದಲ್ಲಿಯೂ ಅವರು ಮಧುರವಾದ ಪ್ರೀತಿಯ ತಾಜಾ ಕಥೆಯನ್ನು ಹೇಳಿದ್ದಾರೆ. ಅದು ಎಲ್ಲ ಪ್ರೇಕ್ಷಕರಿಗೂ ಇಷ್ಟವಾಗಿದೆ. ಆದ್ದರಿಂದಲೇ ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿರೋ ಕಿಸ್ ಕಲೆಕ್ಷನ್ನಿನಲ್ಲಿಯೂ ದಾಖಲೆ ಬರೆದಿದೆ. ನೀವಿನ್ನೂ ಕಿಸ್ ನೋಡಿಲ್ಲವೆಂದರೆ ಒಂದೊಳ್ಳೆ ಚಿತ್ರವನ್ನು ಮಿಸ್ ಮಾಡಿಕೊಂಡಿದ್ದೀರೆಂದೇ ಅರ್ಥ!.

Share This Article
Leave a Comment

Leave a Reply

Your email address will not be published. Required fields are marked *