ಭರಾಟೆ: ಮಫ್ತಿ ನಂತ್ರ ಎದೆ ಅದುರಿಸೋ ಅವತಾರವೆತ್ತಿದ ರೋರಿಂಗ್ ಸ್ಟಾರ್!

Public TV
1 Min Read

ಬೆಂಗಳೂರು: ಉಗ್ರಂ ಎಂಬ ಚಿತ್ರದ ಮೂಲಕವೇ ಪಕ್ಕಾ ಮಾಸ್ ಇಮೇಜ್ ಪಡೆದುಕೊಂಡು ಆ ನಂತರವೂ ಅದರಲ್ಲಿಯೇ ಮಿಂಚುತ್ತಾ ಮುನ್ನಡೆಯುತ್ತಿರುವವರು ರೋರಿಂಗ್ ಸ್ಟಾರ್ ಶ್ರೀಮುರಳಿ. ಆ ನಂತರದಲ್ಲಿ ಮಫ್ತಿಯಲ್ಲಿ ಮತ್ತದೇ ತಣ್ಣಗಿನ ಪರಾಕ್ರಮದ ಮೂಲಕ ಅಭಿಮಾನಿಗಳನ್ನು ಖುಷಿಗೊಳಿಸಿದ್ದ ಅವರೀಗ ಭರಾಟೆಯ ಅಬ್ಬರದಲ್ಲಿ ಮತ್ತೊಮ್ಮೆ ಪ್ರೇಕ್ಷಕರನ್ನು ಮುಖಾಮುಖಿಯಾಗಲು ಮುಂದಾಗಿದ್ದಾರೆ. ಚಿತ್ರೀಕರಣ ಶುರುವಾದಂದಿನಿಂದ ಈ ಕ್ಷಣದವರೆಗೂ ಒಂದೇ ಆವೇಗದ ಪ್ರಚಾರ ಪಡೆದುಕೊಳ್ಳುತ್ತಿರೋ ಭರಾಟೆ ಶ್ರೀಮುರಳಿ ಇಮೇಜನ್ನು ಮತ್ತಷ್ಟು ಮಿರುಗುವಂತೆ ಮಾಡೋ ಲಕ್ಷಣಗಳೂ ಇವೆ.

ಯಾವುದೇ ಚಿತ್ರಗಳಾದರೂ ದೃಶ್ಯ ಕಾವ್ಯವಾಗೋದು ನಿರ್ಮಾಪಕರ ಕನಸುಗಾರಿಕೆಯಿಂದಲೇ. ಭರಾಟೆ ವಿಚಾರದಲ್ಲಿಯೂ ಅದು ನಿಜವಾಗಿದೆ. ನಿರ್ಮಾಪಕ ಸುಪ್ರೀತ್ ಅಂತಹ ಕನಸಿನೊಂದಿಗೆ, ವ್ಯವಹಾರದ ಮನಸ್ಥಿತಿಯನ್ನೆಲ್ಲ ಬದಿಗಿಟ್ಟು ಅಪ್ಪಟ ಕಲಾ ಪ್ರೇಮದಿಂದಲೇ ಈ ಸಿನಿಮಾವನ್ನು ಕಟ್ಟಿ ಕೊಟ್ಟಿದ್ದಾರೆ. ಆರಂಭದಿಂದಲೂ ಚೇತನ್ ಕುಮಾರ್‍ಗಾಗಿ ಈ ಸಿನಿಮಾ ನಿರ್ಮಾಣ ಮಾಡಿರೋದಾಗಿ ಹೇಳಿಕೊಳ್ಳುತ್ತಾ ಬಂದಿರೋ ಸುಪ್ರೀತ್ ಪಾಲಿಗೆ ಭರಾಟೆ ಮಹಾ ಕನಸು. ಈ ಕಾರಣದಿಂದಲೇ ರೋರಿಂಗ್ ಸ್ಟಾರ್ ಮತ್ತಷ್ಟು ಅಬ್ಬರದೊಂದಿಗೆ ಮಿಂಚುವಂತಾಗಿದೆ.

ರೋರಿಂಗ್ ಸ್ಟಾರ್ ಶ್ರೀಮುರಳಿ ಭರಾಟೆ ಮುಹೂರ್ತದ ದಿನದಿಂದಲೇ ಮಿರುಗಲಾರಂಭಿಸಿದ್ದಾರೆ. ಕಾಸ್ಟ್ಯೂಮ್ ಸೇರಿದಂತೆ ಎಲ್ಲದರಲ್ಲಿಯೂ ಅವರು ಈ ಹಿಂದಿನದಕ್ಕಿಂತಲೂ ಭಿನ್ನವಾದ ಗೆಟಪ್ಪಿನಲ್ಲಿಯೇ ಕಾಣಿಸಿಕೊಂಡಿದ್ದಾರೆ. ರಾಜಸ್ಥಾನಿ ಶೈಲಿಯ ಉಡುಗೆ ತೊಡುಗೆಯಿಂದ ಆರಂಭವಾಗಿ ಟ್ರೇಲರುಗಳಲ್ಲಿ ಖಡಕ್ ಲುಕ್ಕಲ್ಲಿ ಕಾಣಿಸಿಕೊಳ್ಳುವವರೆಗೂ ರೋರಿಂಗ್ ಸ್ಟಾರ್ ಅಬ್ಬರದ ಭರಾಟೆ ಅನೂಚಾನವಾಗಿಯೇ ಮುಂದುವರೆದಿದೆ. ಈ ಕಾರಣದಿಂದಲೇ ಶ್ರೀಮುರಳಿ ಅಭಿಮಾನಿಗಳ ಪಾಲಿಗೆ ದಸರೆ ಮತ್ತು ದೀಪಾವಳಿಯ ಮಧ್ಯೆ ಮತ್ತೊಂದು ಹಬ್ಬದಂತೆ ಭರಾಟೆ ತೆರೆ ಕಾಣುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *