ರಸಗೊಬ್ಬರ, ಕೀಟನಾಶಕ ದಾಸ್ತಾನು ಬೇಕಷ್ಟಿದೆ –  ಡಿವಿಎಸ್ ಭರವಸೆ

Public TV
2 Min Read

ನವದೆಹಲಿ: ಕರ್ನಾಟಕವೂ ಸೇರಿದಂತೆ ದೇಶದ ಯಾವುದೇ ಭಾಗದಲ್ಲಿ ರಸಗೊಬ್ಬರ ಅಥವಾ ಕೀಟನಾಶಕಗಳ ಕೊರತೆ ಉಂಟಾಗಿಲ್ಲ. ಕರ್ನಾಟಕದಲ್ಲಿ ಸದ್ಯ 7.3 ಲಕ್ಷ ಟನ್ ರಸಗೊಬ್ಬರವಿದೆ. ಏಪ್ರಿಲ್ ತಿಂಗಳಲ್ಲಿ ರಾಜ್ಯದ ಬೇಡಿಕೆ 2.57 ಲಕ್ಷ ಟನ್. ಹಾಗಾಗಿ ರೈತರು ಈ ಸಲವೂ ಮಾಮೂಲಿಯಾಗಿ ಮುಂಗಾರು ಬಿತ್ತನೆಗೆ ತಯಾರಿ ಮಾಡಿಕೊಳ್ಳಬಹುದು ಎಂದು ಕೇಂದ್ರ ರಾಸಾಯನಿ ಮತ್ತು ರಸಗೊಬ್ಬರ ಸಚಿವ ಸದಾನಂದ ಗೌಡ ಭರವಸೆ ನೀಡಿದ್ದಾರೆ.

ಲಾಕ್‍ಡೌನ್‍ನಿಂದಾಗಿ ಆರಂಭದಲ್ಲಿ ಒಂದೆರಡು ದಿನ ಸರಕು ಸಾಗಣೆಗೆ ತೊಂದರೆಯಾಗಿತ್ತು. ಆದರೆ ರಸಗೊಬ್ಬರ, ಕೀಟನಾಶಕ ಸೇರಿಂತೆ ಕೃಷಿಸಂಬಂಧಿತ ಎಲ್ಲ ಪರಿಕರಗಳನ್ನು ಅತ್ಯವಶ್ಯಕ ವಸ್ತುಗಳ ಪಟ್ಟಿಗೆ ಸೇರಿಸಿ ಉತ್ಪಾದನೆ ಹಾಗೂ ಸಾಗಣೆ ಮೇಲಿನ ನಿರ್ಬಂಧವನ್ನು ಕೇಂದ್ರ ಸರ್ಕಾರವು ಸಂಪೂರ್ಣ ತೆಗೆದುಹಾಕಿತು. ರಸಗೊಬ್ಬರ ಕಾರ್ಖಾನೆಗಳು, ಗೋಡೌನ್‍ಗಳು, ಬಂದರಗಳು, ವಿತರಣಾ ಕೇಂದ್ರಗಳ ಮಧ್ಯೆ ರಸಗೊಬ್ಬರ ಸಾಗಣೆಗೆ ಬೇಡಿಕೆಗೆ ಅನುಗುಣವಾಗಿ ಗೂಡ್ಸ್ ರೈಲುಗಳನ್ನು ಒದಗಿಸುವಂತೆ ರೇಲ್ವೆ ಇಲಾಖೆಗೆ ಕೇಂದ್ರ ಸರ್ಕಾರವು ಕಟ್ಟುನಿಟ್ಟಿನ ಆದೇಶ ನೀಡಿದೆ. ಹಾಗೆಯೇ ಜಲ ಹಾಗೂ ಭೂಸಾರಿಗೆಗೆ ರಸಗೊಬ್ಬರ, ಕೀಟನಾಶಕ ಮತ್ತಿತರ ಕೃಷಿಸಂಬಂಧಿತ ಸರಕುಗಳನ್ನು ಸಾಗಣೆಗೆ ಮುಕ್ತ ಅನುಮತಿ ನೀಡಲಾಗಿದೆ ಎಂದು ಹೇಳಿದ್ದಾರೆ.

ದೇಶದ ಬಹುತೇಕ ರಸಗೊಬ್ಬರ ಕಾರ್ಖಾನೆಗಳು ಪೂರ್ಣ ಪ್ರಮಾಣದಲ್ಲಿ ಉತ್ಪಾದನೆಯಲ್ಲಿ ತೊಡಗಿವೆ. ಈ ಸಂದರ್ಭದಲ್ಲಿ ಲಾಕ್‍ಡೌನ್‍ ನಿಯಮಗಳನ್ನು (ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮುಖಗವಸು ಧರಿಸುವುದು ಇವೇ ಮುಂತಾದವು) ಕಟ್ಟುನಿಟ್ಟಾಗಿ ಅನುಸರಿಸುವಂತೆ ಸೂಚಿಸಲಾಗಿದೆ. ದೇಶದಲ್ಲಿ ಇನ್ನೂ ಹಲವು ತಿಂಗಳಿಗೆ ಸಾಕಾಗುವಷ್ಟು ರಸಗೊಬ್ಬರ ದಾಸ್ತಾನು ಇದೆ. ಸದ್ಯ 86.87 ಲಕ್ಷ ಮೆಟ್ರಿಕ್ ಟನ್ ಯೂರಿಯಾ ದಸ್ತಾನು ಇದೆ. ಆದಾಗ್ಯೂ ಮುಂಜಾಗ್ರತಾ ಕ್ರಮವಾಗಿ 7.57 ಲಕ್ಷ ಟನ್ ಯೂರಿಯಾ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಲಾಗಿದೆ.

ದೇಶಾದ್ಯಂತ ರಸಗೊಬ್ಬರ ಮಳಿಗೆಗಳೂ ತೆರೆದಿದ್ದು ಎಂದಿನಂತೆ ವಹಿವಾಟು ನಡೆಸಿವೆ. ಕರ್ನಾಟಕದಲ್ಲಿ ಸಾಗಣೆ, ಪೂರೈಕೆಗೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದರೆ ಕೃಷಿ ಸಹಾಯವಾಣಿ 080-22212818 / 22210237 ಗೆ ಕರೆಮಾಡಿ ಬಗೆಹರಿಸಿಕೊಳ್ಳಬಹುದು. ನಾನು ಮತ್ತೆ ಸ್ಪಷ್ಟಪಡಿಸುತ್ತಿದ್ದೇನೆ. ರಸಗೊಬ್ಬರ, ಕೀಟನಾಶಕಗಳ ಕೊರತೆ ಇಲ್ಲ. ದಾಸ್ತಾನು ಸಾಕಷ್ಟಿದೆ. ಬೇಕಾದಷ್ಟು ಗೊಬ್ಬರ ಪೂರೈಸುವ ಜವಾಬ್ದಾರಿ ನಮ್ಮದು. ರೈತಬಾಂಧವರಿಗೆ ನನ್ನ ಮನವಿ. ನೀವು ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡಬೇಡಿ. ನಿರಾತಂಕವಾಗಿ ಮುಂಗಾರು ಬಿತ್ತನೆಗೆ ತಯಾರಿಮಾಡಿಕೊಳ್ಳಿ. ನಿಮಗೆ ಶುಭವಾಗಲಿ ಎಂದು ಡಿವಿಎಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮನೆ-ಮನೆಗೆ ಜನೌಷಧಿ: ಈ ಮಧ್ಯೆ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯ (PMBJP) ಜನೌಷಧಿ ಕೇಂದ್ರಗಳ ಮೂಲಕ ಮನೆಗೇ ಔಷಧ ಸರಬರಾಜು ಮಾಡುವ ಸೌಲಭ್ಯವನ್ನು ಆರಂಭಿಸಲಾಗಿದೆ. ಅಗತ್ಯವಿರುವವರು ವಿಶೇಷವಾಗಿ ಹಿರಿಯ ನಾಗರಿಕರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಅದಕ್ಕಾಗಿ ನಿಮ್ಮ ಸ್ಮಾರ್ಟ್ ಫೋನಿನಲ್ಲಿ ನಮ್ಮ ಸರ್ಕಾರವೇ ಅಭಿವೃದ್ಧಿಪಡಿಸಿರುವ ‘ಜನೌಷಧಿ ಸುಗಮ್, ಎಂಬ ಆ್ಯಪ್ ರೂಪಿಸಲಾಗಿದೆ ಎಂದು ಹೇಳಿದ್ದಾರೆ.

ಈ ಆ್ಯಪಿನಲ್ಲಿ ಹತ್ತಿರದ ಜನೌಷಧಿ ಕೇಂದ್ರ (ವಿಳಾಸ ಸಮೇತ), ಆ ಕೇಂದ್ರದ ಲೊಕೇಶನ್ ಮ್ಯಾಪ್, ಕೇಂದ್ರದಲ್ಲಿ ನಿಮಗೆ ಬೇಕಾದ ಔಷಧಿ ಲಭ್ಯತೆ ಇದೆಯೋ ಅಥವಾ ಇಲ್ಲವೋ, ಅಂಗಡಿಯ ದೂರವಾಣಿ ನಂಬರ್ – ಹೀಗೆ ಎಲ್ಲ ವಿವರಗಳು ಲಭ್ಯ. ಲಾಕ್‍ಡೌನ್ ಈ ಸಂದರ್ಭದಲ್ಲಿ ಔಷಧ ಅಂಗಡಿಗಳ ಬಳಿ ಗುಂಪು ಸೇರುವ ಅಗತ್ಯವಿಲ್ಲ. ಇದರಿಂದ ಸಾಮಾಜಿಕ ಅಂತರ ಕಾಯ್ದುಕೊಡಂತೆಯೂ ಆಯಿತು ಎಂದು ತಿಳಿಸಲಾಗಿದೆ.

ಜನೌಷಧಿ ಸುಗಮ್ ಆ್ಯಪ್ ಡೌನ್‍ಲೋಡ್ ಮಾಡಲು ಕ್ಲಿಕ್ ಮಾಡಿ: ಜನೌಷಧಿ ಸುಗಮ್

Share This Article
Leave a Comment

Leave a Reply

Your email address will not be published. Required fields are marked *