ರಂಗೇರಿದ ಬೆಂಗಳೂರು ಗ್ರಾಮಾಂತರ ಕ್ಷೇತ್ರ – ಬೃಹತ್ ಮೆರವಣಿಗೆ ಮೂಲಕ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಕೆ

Public TV
1 Min Read

– ರಾಮನಗರದಲ್ಲಿ ಡಿಕೆ ಬ್ರದರ್ಸ್ ಶಕ್ತಿ ಪ್ರದರ್ಶನ
– ಅಣ್ಣ, ಅತ್ತಿಗೆ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಡಿ.ಕೆ.ಸುರೇಶ್

ರಾಮನಗರ: ಲೋಕಸಭಾ ಚುನಾವಣೆಗೆ ರಣಕಣ ರಂಗೇರಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ.ಸುರೇಶ್ (D.K.Suresh) ಗುರುವಾರ ಉಮೇದುವಾರಿಕೆ ಸಲ್ಲಿಸಿದ್ದಾರೆ. ರಾಮನಗರದಲ್ಲಿ (Ramanagara) ಬೃಹತ್ ಮೆರವಣಿಗೆ ಹೊರಟು ನಾಮಪತ್ರ ಸಲ್ಲಿಸಿ ಶಕ್ತಿ ಪ್ರದರ್ಶಿಸಿದ್ದಾರೆ.

ನಾಮಪತ್ರ ಸಲ್ಲಿಕೆಗೂ ಮುನ್ನ ಮನೆದೇವರಿಗೆ ಡಿ.ಕೆ.ಸುರೇಶ್ ಪೂಜೆ ಸಲ್ಲಿಸಿದರು. ಬೆಳಗ್ಗೆ 9 ಗಂಟೆಗೆ ಕನಕಪುರದ ಕೆಂಕೆರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ನಂತರ ರಾಮನಗರದ ಚಾಮುಂಡೇಶ್ವರಿ ದೇವರ ದರ್ಶನ ಪಡೆದರು. ನಗರದ ಪ್ರಮುಖ ಮಸೀದಿ, ಚರ್ಚ್‌ಗೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಜೊತೆಗೆ ಮನೆಯಲ್ಲಿ ಅಣ್ಣ ಡಿ.ಕೆ.ಶಿವಕುಮಾರ್ ಹಾಗೂ ಅತ್ತಿಗೆ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಇದನ್ನೂ ಓದಿ: ಹಾಸನ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ

ರಾಮನಗರದ ಚಾಮುಂಡೇಶ್ವರಿ ದೇವಸ್ಥಾನದ ಮುಂದೆ ಡಿ.ಕೆ.ಸುರೇಶ್ ಬೆಂಬಲಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ತಮಟೆ, ವಾದ್ಯ, ಪಟ್ಟದ ಕುಣಿತ, ವೀರಗಾಸೆ ಮೂಲಕ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್‌ಗೆ ಸ್ವಾಗತ ಕೋರಿದರು.

ನಂತರ ಬೃಹತ್ ಮೆರವಣಿಗೆ ಹೊರಟರು. ಈ ವೇಳೆ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಮೆರವಣಿಗೆಯಲ್ಲಿ ಡಿ.ಕೆ.ಸುರೇಶ್‌ಗೆ ಸಚಿವ ರಾಮಲಿಂಗಾರೆಡ್ಡಿ, ಎಂಎಲ್‌ಸಿ ರವಿ, ಕುಣಿಗಲ್ ಶಾಸಕ ರಂಗನಾಥ್, ಶಾಸಕ ಬಾಲಕೃಷ್ಣ ಸಾಥ್ ನೀಡಿದರು. ಇದನ್ನೂ ಓದಿ: ಏಪ್ರಿಲ್ 1 ರಿಂದ ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್ ದರ ಹೆಚ್ಚಳ

ಮೆರವಣಿಗೆ ಡಿಸಿ ಕಚೇರಿ ವರೆಗೂ ಸಾಗಿತು. ನಂತರ ಚುನಾವಣಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರಗೆ ಡಿ.ಕೆ.ಸುರೇಶ್ ಎರಡು ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ಅಭ್ಯರ್ಥಿಗೆ ಉಸ್ತುವಾರಿ ಸಚಿವ ರಾಮಲಿಂಗ ರೆಡ್ಡಿ, ಶಾಸಕ ಬಾಲಕೃಷ್ಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಾಧರ್, ಆನೆಕಲ್ ಶಾಸಕ ಶಿವಣ್ಣ ಸಾಥ್ ನೀಡಿದರು.

Share This Article