ಸ್ಟೇರಿಂಗ್ ರಾಡ್ ಕಟ್ಟಾಗಿ ಹಳ್ಳಕ್ಕೆ ನುಗ್ಗಿದ 30 ಜನರಿದ್ದ ಬಸ್

Public TV
1 Min Read

– ತಪ್ಪಿದ ಭಾರೀ ಅನಾಹುತ, 20 ವಿದ್ಯಾರ್ಥಿಗಳು ಬಜಾವ್

ಚಿಕ್ಕಬಳ್ಳಾಪುರ: ಕೆಎಸ್ಆರ್‌ಟಿಸಿ ಬಸ್‍ನ ಸ್ಟೇರಿಂಗ್ ರಾಡ್ ಕಟ್ಟಾಗಿ ಹಳ್ಳಕ್ಕೆ ನುಗ್ಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತಿರುಮಗೊಂಡನಹಳ್ಳಿ ಬಳಿ ನಡೆದಿದೆ.

ಅದೃಷ್ಟವಶಾತ್ ಬಸ್‍ನಲ್ಲಿದ್ದ ಗ್ರಾಮಸ್ಥರಿಗೆ ಮತ್ತು ವಿದ್ಯಾರ್ಥಿಗಳಿಗೆ ಯಾವುದೇ ಪ್ರಾಣಹಾನಿಯಾಗಿಲ್ಲ. ಅಂದಹಾಗೆ ತೂಬಗೆರೆ ದೊಡ್ಡಬಳ್ಳಾಪುರ ಮಾರ್ಗವಾಗಿ ಹೊರಡಿದ್ದ ಕೆಎಸ್ಆರ್‌ಟಿಸಿ ಬಸ್ ಮಾರ್ಗ ಮಧ್ಯದಲ್ಲಿನ ತಿರುಮಗೊಂಡನಹಳ್ಳಿಯ ಬಳಿ ಬರುವಾಗ ಬಸ್‍ನ ಸ್ಟೇರಿಂಗ್ ಕಟ್ಟಾಗಿತ್ತು. ಬಳಿಕ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ರಸ್ತೆ ಬದಿಯಲ್ಲಿ ಕಟ್ಟಲಾಗಿದ್ದ ಹಸುವಿಗೆ ಗುದ್ದಿ ನಂತರ ಕೊಟ್ಟಿಗೆಯನ್ನು ನೆಲ ಸಮ ಮಾಡಿದೆ.

ರಸ್ತೆ ಬದಿಯಲ್ಲಿನ ಮರಕ್ಕೆ ಡಿಕ್ಕಿ ಹೊಡೆದು ಪಕ್ಕದಲ್ಲಿನ ಹಳ್ಳಕ್ಕೆ ನುಗ್ಗಿದೆ. ಬಸ್‍ನಲ್ಲಿ ಕಾಲೇಜು ಮತ್ತು ಶಾಲೆಗೆ ಹೊರಟ 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು. ಅದೃಷ್ಟವಶಾತ್ ಯಾರಿಗೂ ಸಣ್ಣ ಪುಟ್ಟ ಗಾಯಗಳು ಸಹ ಆಗದೆ ಪ್ರಾಣಾಪಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಬಸ್ ಹಸುವಿಗೆ ಡಿಕ್ಕಿ ಹೊಡೆದ ಪರಿಣಾಮ ಹಸುವಿನ ಕಣ್ಣಿನ ಹತ್ತಿರ ಪೆಟ್ಟಾಗಿದೆ. ಮತ್ತೊಂದೆಡೆ ಬೆಳೆಗ್ಗೆ ಘಟನೆ ನಡೆದಿದ್ದರಿಂದ ತಿರುಮಗೊಂಡನಹಳ್ಳಿಯ ಬಳಿ ಜನಜಂಗುಳಿ ಇರಲಿಲ್ಲ. ಒಂದು ವೇಳೆ ಜನಜಂಗುಳಿ ಇದ್ದ ವೇಳೆ ಘಟನೆ ಸಂಬಂಧಿಸಿದ್ದರೆ ಭಾರೀ ಅನಾಹುತವೇ ಸಂಭವಿಸುತ್ತಿತ್ತು ಅಂತ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕೆಎಸ್ಆರ್‌ಟಿಸಿ ಡಿಪೋ ಅಧಿಕಾರಿಗಳು ಗ್ರಾಮಾಂತರ ಪ್ರದೇಶಗಳಿಗೆ ಡಕೋಟ ಬಸ್‍ಗಳನ್ನ ಹಾಕುತ್ತಾರೆ. ಇದರಿಂದ ದಾರಿ ಮಧ್ಯೆ ಬಸ್ ಕೆಟ್ಟು ನಿಲ್ಲುವುದು. ಇಂತಹ ಘಟನೆಗಳು ನಡೆಯುವುದು ಸಾಮಾನ್ಯವಾಗಿದೆ ಅಂತ ಗ್ರಾಮಸ್ಥರು ಡಿಪೋ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *