ಬೆಂಗಳೂರಿನಲ್ಲಿ 7 ಕೋಟಿ ದರೋಡೆ ಕೇಸ್‌ – ಗೋವಿಂದಪುರ ಠಾಣೆ ಕಾನ್ಸ್‌ಟೇಬಲ್‌ ಸೇರಿ ಇಬ್ಬರ ಬಂಧನ!

3 Min Read

ಬೆಂಗಳೂರು: ಸಿಲಿಕಾನ್‌ ಸಿಟಿ ಅಂದ್ರೆ ಸಿಂಪಲ್ ಸಿಟಿ ಅಲ್ಲ.. ಸದಾ ಜನಜಂಗುಳಿಯಿಂದ ಕೂಡಿರುವ ಪ್ರದೇಶ. ವಾಹನಗಳು ಕೂಡ ಕಂಟಿನ್ಯೂ ಮೂವಿಂಗ್‌ನಲ್ಲೇ ಇರುವ ಬ್ಯುಸಿ ನಗರ. ಹೀಗಿದ್ದೂ ಡೈರಿ ಸರ್ಕಲ್‌ನಲ್ಲಿ ಮಟ-ಮಟ ಮಧ್ಯಾಹ್ನವೇ ದೊಡ್ಡ ದರೋಡೆಯೊಂದು ನಡೆದು ಹೋಗಿದೆ. ಸಿಕ್ಕಾಪಟ್ಟೆ ಜನ, ಟ್ರಾಫಿಕ್ ಇರುವ ಏರಿಯಾದಲ್ಲಿ ಬರೋಬ್ಬರಿ 7 ಕೋಟಿ 11 ಲಕ್ಷ ಹಣವನ್ನ ದೋಚಿ ದರೋಡೆಕೋರರು ಪರಾರಿಯಾಗಿದ್ದರು. ಇದೀಗ ಪ್ರಕರಣದ ಬೆನ್ನುಹತ್ತಿರುವ ಪೊಲೀಸರು ಗೋವಿಂದಪುರ ಠಾಣೆಯ ಕಾನ್ಸ್‌ಟೇಬಲ್‌ ಸೇರಿ ಇಬ್ಬರನ್ನ ಬಂಧಿಸಿದ್ದಾರೆ.

ದರೋಡೆಕೋರರಿಗೆ ಇನ್ನೋವಾ ಕಾರು ಕೊಟ್ಟಿದ್ದ ಇಬ್ಬರನ್ನ ಪೊಲೀಸರು ಬಂಧಿಸಿದ್ದಾರೆ. ಚಿತ್ತೂರು ಗುಡಿಪಲ್ಲಿ ಬಳಿ ಪತ್ತೆಯಾಗಿದ್ದ ಕಾರು ಎಂಜಿನ್‌ನ ಚಾರ್ಸಿ ನಂಬರ್‌ ಆಧರಿಸಿ ಇಬ್ಬರನ್ನ ಬಂಧಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಚಾರ್ಸಿ ನಂಬರ್‌ ಆಧಾರದ ಮೇಲೆ ಮೂಲ ಮಾಲೀಕನನ್ನ ಪತ್ತೆ ಮಾಡಿ ವಿಚಾರಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಕಾರನ್ನು ಮಾರಾಟ ಮಾಡಿರುವುದು ಗೊತ್ತಾಗಿದೆ. ಇಬ್ಬರು ಬಂದು ಕಾರು ಖರೀದಿಸಿದ್ದಾರೆ ಅಂತ ಮೊದಲ ಮಾಲೀಕರು ಹೇಳಿದ್ದಾರೆ. ಆ ಬಳಿಕ ದರೋಡೆಗೆ ಉದ್ದೇಶಪೂರಿತವಾಗಿಯೇ ಕಾರನ್ನು ಕೊಟ್ರಾ? ಅನ್ನೋ ಆಯಾಮದಲ್ಲೂ ವಿಚಾರಣೆ ನಡೆಸಲಾಗುತ್ತಿದೆ.

ಇನ್ನೂ ದರೋಡೆಕೋರರು ಚಿತ್ತೂರು ಮೂಲದವರೇ ಆಗಿದ್ದಾರೆ. ಅದೇ ಕಾರಣಕ್ಕೆ ಚಿತ್ತೂರು ಬಳಿಯೇ ದರೋಡೆಗೆ ಬಳಸಿದ ವಾಹನ ಬಿಟ್ಟು ಪರಾರಿಯಾಗಿದ್ದಾರೆ ಎಂಬುದು ಪೊಲೀಸ್‌ ತನಿಖೆ ವೇಳೆ ತಿಳಿದುಬಂದಿದೆ.

ಪೊಲೀಸ್‌ ಕಾನ್ಸ್‌ಟೇಬಲ್‌ ಸೇರಿ ಇಬ್ಬರ ಬಂಧನ
ಸದ್ಯ ಪ್ರಕರಣ ದಾಖಲಿಸಿಕೊಂಡು ವಿಶೇಷ ತಂಡಗಳನ್ನು ರಚಿಸಿದ್ದ ಪೊಲೀಸರು, ಗೋವಿಂದಪುರ ಠಾಣೆಯ ಕಾನ್ಸ್‌ಸ್ಟೇಬಲ್ ಅಣ್ಣಪ್ಪನಾಯ್ಕ್, ಕೇರಳ ಮೂಲದ ದೇವಿಯರ್ ಇಬ್ಬರನ್ನು ಬಂಧಿಸಲಾಗಿದೆ. ನಿನ್ನೆ ರಾತ್ರಿಪಾಳಿಯಲ್ಲಿಯೇ ಇದ್ದ ಅಣ್ಣಪ್ಪನಾಯ್ಕ್‌ ಇಂದು ಬೆಳಗ್ಗೆ ಕೆಲಸ ಮುಗಿಸಿ ಮನೆಗೆ ಹೋಗುವಾಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದೇವಿಯರ್‌ ಸಿಎಂಎಸ್‌ ಸಂಸ್ಥೆಯ ಮಾಜಿ ನೌಕರನಾಗಿದ್ದು, ಕೆಲ ದಿನಗಳ ಹಿಂದೆ ಕೆಲಸ ಬಿಟ್ಟಿದ್ದ. ಅಲ್ಲದೇ ದೇವಿಯರ್‌ ಅಣ್ಣಪ್ಪ ನಾಯ್ಕ್‌ ಕಳೆದ 6 ತಿಂಗಳಿಂದ ಸ್ನೇಹಿತರಾಗಿದ್ದರು. ಈ ಹಿಂದೆಯೂ ಅಪರಾಧ ಕೆಲಸಗಳಲ್ಲಿ ಪರಿಚಯ ಆಗಿದ್ದ ಎನ್ನಲಾಗ್ತಿದೆ. ದರೋಡೆಗೆ ಸಾಕಷ್ಟು ದಿನಗಳಿಂದ ಪ್ಲ್ಯಾನ್‌ ಮಾಡಿಕೊಂಡಿದ್ದರು ಅನ್ನೋ ಆರೋಪಗಳೂ ಕೇಳಿಬಂದಿವೆ.

7 ಕೋಟಿ ಹೊತ್ತೊಯ್ದ ರಾಬರ್ಸ್ ಹೋಗಿದ್ದೆಲ್ಲಿ..?
ಇನ್ನೂ ಕ್ಷಣಕ್ಷಣಕ್ಕೂ ಪ್ರಕರಣ ಒಂದೊಂದು ತಿರುವುಗಳನ್ನು ತೆಗೆದುಕೊಳ್ಳುತ್ತಿದೆ. ಸಿಎಂಎಸ್ ಏಜೆನ್ಸಿಯ ಇಬ್ಬರು ಸಿಬ್ಬಂದಿ ಮೇಲೆಯೇ ಅನುಮಾನ ಶುರುವಾಗಿತ್ತು. ಸಿಬ್ಬಂದಿಯ ಸಹಾಯದಿಂದಲೇ ಹಣ ಕಳವು ಮಾಡಿರುವ ಶಂಕೆ ವ್ಯಕ್ತವಾಗಿದೆ. ದರೋಡೆ ನಡೆದ 45 ನಿಮಿಷಗಳ ಬಳಿಕ ವಾಹನದಲ್ಲಿದ್ದ ಚಾಲಕ ಹಾಗೂ ಸಿಬ್ಬಂದಿ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ, ಘಟನೆ ನಡೆದು 1 ಕಿಲೋ ಮೀಟರ್ ದೂರದಲ್ಲಿ ಪೊಲೀಸ್ ಠಾಣೆ ಇದ್ದರೂ ಮಾಹಿತಿ ನೀಡುವುದಕ್ಕೆ ವಿಳಂಬ ಮಾಡಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇಷ್ಟೆಲ್ಲಾ ಬೆಳವಣಿಗೆಗಳ ಮಧ್ಯೆ ದರೋಡೆಕೋರರು ವೆಲ್ಲೂರು ಮೂಲಕ ಆಂಧ್ರಪ್ರದೇಶ ತಲುಪಿರುವ ಶಂಕೆ ವ್ಯಕ್ತವಾಗಿದ್ದು. ಅವರ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ನಾಕಾಬಂಧಿ ಹಾಕಿದ್ರೂ ಉಪಯೋಗ ಆಗಿಲ್ಲ
ಘಟನೆ ನಡೆದ 1 ಗಂಟೆಗಳ ಬಳಿಕ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಸ್ಪಾಟ್‌ಗೆ ಬಂದ ಪೊಲೀಸರು, ಸೋಕೋ ಟೀಂ, ಶ್ವಾನ ದಳ ಸಿಬ್ಬಂದಿಯಿಂದ ಪರಿಶೀಲನೆ ನಡೆಸಿದ್ರು, ಆದ್ರೆ ಪೊಲೀಸರು ಎಚ್ಚೆತ್ತುಕೊಳ್ಳುವಷ್ಟರಲ್ಲಿ ದರೋಡೆಕೋರರು ರಾಜ್ಯವನ್ನೇ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ. ಅತ್ತ ಬೆಂಗಳೂರಿನಾದ್ಯಂತ ನಾಕಾಬಂಧಿ ಹಾಕಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಪ್ರತಿಯೊಂದು ಟೋಲ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಕಲೆ ಹಾಕಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಎಲೆಕ್ಟ್ರಾನಿಕ್‌ ಸಿಟಿ ಕಡೆ ಹೋದ ದರೋಡೆಕೋರರು ಹೋಗಿದ್ದೆಲ್ಲಿಗೆ? ಅತ್ತಿಬೆಲೆ ಮೂಲಕ ತಮಿಳುನಾಡು ಕಡೆ ಹೋದ್ರಾ? ಹೊಸೂರಿನಿಂದ ಆಂಧ್ರಪ್ರದೇಶ ಕಡೆ ಹೋದ್ರಾ..? ಎಂಬುದರ ಬಗ್ಗೆ ಮಾಹಿತಿ ಕಲೆಕ್ಟ್ ಮಾಡುತ್ತಿದ್ದಾರೆ.

Share This Article