ಸಿಲಿಕಾನ್ ಸಿಟಿಯಲ್ಲಿ ನಿಲ್ಲದ `ಗುಂಡಿ’ ಕಾಟ – ಒಂದೇ ಮಳೆಗೆ ಮುಚ್ಚಿದ ಗುಂಡಿ ಮತ್ತೆ ಓಪನ್!

Public TV
2 Min Read

ಬೆಂಗಳೂರು: ಸಿಲಿಕಾನ್‌ ಸಿಟಿಗೆ ಅದೇನಾಗಿದ್ಯೋ ಗೊತ್ತಿಲ್ಲಾ.. ಅದೆಷ್ಟೇ ಪ್ರಯತ್ನ ಪಟ್ರು ರಸ್ತೆಗಳ ಸಮಸ್ಯೆಗೆ ಪರಿಹಾರ ಸಿಕ್ತಾನೆ ಇಲ್ಲಾ. ಬೆಂಗಳೂರು ರಸ್ತೆಗುಂಡಿಗಳ ವಿಚಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ ಹಾರಾಜಾಗಿದ್ರೂ ಕೂಡ ಜಿಬಿಎ ಅಧಿಕಾರಿಗಳು ಮಾತ್ರ ಬುದ್ದಿ ಕಲಿಯುತ್ತಿಲ್ಲ. ಕಳೆಪೆ ಕಾಮಗಾರಿ, ಅರೆಬರೆ ಕಾಮಗಾರಿಗಳಿಂದಾಗಿ ತನ್ನ ಮಾನವನ್ನು ತಾನೇ ಹರಾಜು ಹಾಕಿಕೊಳ್ಳುತ್ತಿದೆ. ಮೊನ್ನೆ ಮೊನ್ನೆ ಮುಚ್ಚಿರೋ ಗುಂಡಿಗಳು ಒಂದೇ ಮಳೆಗೆ ಮತ್ತೆ ಬಾಯ್ತೆರೆದು ಬಲಿಗಾಗಿ ಕಾಯ್ತಿವೆ ಈ ಬಗ್ಗೆ ನಿಮ್ಮ ʻಪಬ್ಲಿಕ್ ಟಿವಿʼ ರಿಯಾಲಿಟಿ ಚೆಕ್ ನಡೆಸಿದೆ.

ಬೆಂಗಳೂರಿಗೆ ಬಿಗ್‌ ಗಿಫ್ಟ್ ಮಾನ್ಸೂನ್‌ ಪ್ರೂಫ್ ರಸ್ತೆಯನ್ನು ಕೊಡ್ತೀವಿ. ಗುಂಡಿಯನ್ನು ಅದ್ಭುತವಾಗಿ ಮುಚ್ಚುತ್ತೇವೆ, ರಸ್ತೆ ದುರಸ್ತಿಗೆ ಬರೋದಿಲ್ಲ ಹೈ ಕ್ವಾಲಿಟಿ ರಸ್ತೆ ಅಂತಾ ಡಿಸಿಎಂ ಎಕ್ಸ್‌ನಲ್ಲಿ ಹೇಳಿದ್ದೇ ಹೇಳಿದ್ದು. ಆದ್ರೆ ಬೆಂಗಳೂರು ರೋಡ್‌ಗಳು ಮಾತ್ರ ಒಂದೇ ಮಳೆಗೆ ಬಣ್ಣ ಕಳಕೊಂಡು, ಮುಚ್ಚಿರುವ ಗುಂಡಿ ಎಲ್ಲಾ ಮತ್ತೆ ಬಾಯ್ತೆರೆದು ಬಲಿಗಾಗಿ ಕಾಯುತ್ತಿದೆ.

ಒಂದೆರಡು ವಾರದ ಹಿಂದೆ ಗುಂಡಿ ಮುಚ್ಚಿದ ರಸ್ತೆಗಳಲ್ಲಿ ಈಗ ಹೋಗಿ ನೋಡಿದ್ರೆ.. ಜಿಬಿಎ ಬಂಡವಾಳ ಬಟಾಬಯಲಾಗಿದೆ. ಒಂದೇ ಮಳೆಗೆ ರಸ್ತೆಗಳಲ್ಲಿ ಮತ್ತೆ ಗುಂಡಿಗಳು ಓಪನ್ ಆಗಿವೆ, ಅರೆಬರೆ ಕಾಮಗಾರಿ ನಡೆಯುತ್ತಿರುವ ನಗರದ ಅನೇಕ ಕಡೆ ಮಳೆಯ ಎಫೆಕ್ಟ್‌ನಿಂದ ಜನ ರಸ್ತೆಯಲ್ಲಿ ಫುಟ್ ಪಾತ್‌ನಲ್ಲಿ ಓಡಾಡದಂತೆ ಆಗಿದೆ. ಜೀವ ಕೈಯಲ್ಲಿ ಹಿಡಿದು ರಸ್ತೆಯಲ್ಲಿ ಓಡಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಬಗ್ಗೆ ನಿಮ್ಮ ʻಪಬ್ಲಿಕ್ ಟಿವಿʼ ರಿಯಾಲಿಟಿ ಚೆಕ್ ನಡೆಸಿದ್ದು ರಸ್ತೆಗಳ ಪರಿಸ್ಥಿಯನ್ನು ಬಿಚ್ಚಿಟ್ಟಿದೆ.

ಶಿವಾನಂದ ಸರ್ಕಲ್‌ನಲ್ಲಿ ಗುಂಡಿ ಗಂಡಾಂತರ
ಶಿವಾನಂದ ಸರ್ಕಲ್ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಈ ರಸ್ತೆಯಲ್ಲಿ ಇತ್ತೀಚೆಗಷ್ಟೇ ಗುಂಡಿ ಮುಚ್ಚುವ ಕಾರ್ಯ ಆಗಿತ್ತು. ಆದ್ರೆ ಮೊನ್ನೆ ಸುರಿದ ಒಂದೇ ಒಂದು ಮಳೆಗೆ ಹಾಕಿದ್ದ ಡಾಂಬರೆಲ್ಲಾ ಕಿತ್ತು ಬಂದಿದೆ. ಕಳೆಪೆ ಕಾಮಗಾರಿಯಿಂದಾಗಿ ಗುಂಡಿಗಳು ಮತ್ತೆ ಓಪನ್ ಆಗಿವೆ. ಇಲ್ಲಿ ಓಡಾಡೋ ವಾಹನ ಸವಾರರಿಗೆ ಮತ್ತೆ ಗುಂಡಿ ಕಾಟ ಎದುರಾಗಿದೆ. ಸ್ವಲ್ಪ ಯಾಮಾರಿದ್ರೂ ಕೈ ಕಾಲು ಮುರಿದು ಕೊಂಡು ಆಸ್ಪತ್ರೆಗೆ ಸೇರೋ ಪರಿಸ್ಥಿತಿ ಎದುರಾಗಿದೆ.

ಚಾಮರಾಜಪೇಟೆಯಲ್ಲಿ ಅರೆಬರೆ ಕಾಮಗಾರಿ
ಚಾಮರಾಜಪೇಟೆ ರಸ್ತೆಯಲ್ಲಂತೂ ಅರೆಬರೆ ಕಾಮಗಾರಿಯಿಂದ ಜನರು ಬೇಸತ್ತು ಹೋಗಿದ್ದಾರೆ. ಓಡಾಡೋಕು ಜಾಗವಿಲ್ಲದೆ ನಿತ್ಯ ಜನರು ಹಾಗೂ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಸಾಕಷ್ಟು ಸಮಯದಿಂದ ಈ ರಸ್ತೆಯಲ್ಲಿ ಇದೆ ಪರಿಸ್ಥಿತಿಯಿದ್ದು ಯಾವಾಗ ಈ ರಸ್ತೆ ಸರಿ ಹೋಗುತ್ತೋ ಅಂತ ಜನ ಪ್ರಶ್ನೆ ಮಾಡ್ತಿದ್ದಾರೆ ಈ ಬಗ್ಗೆ ನಿಮ್ಮ ʻಪಬ್ಲಿಕ್ ಟಿವಿʼ ರಿಯಾಲಿಟಿ ಚೆಕ್ ನಡೆಸಿದೆ ನೋಡೋಣ ಬನ್ನಿ.

ಹಳ್ಳಿ ಹಳ್ಳಿಗಳಲ್ಲೂ ಗುಂಡಿ ಗಂಡಾಂತರ!
ಹೌದು. ಬರೀ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ಗುಂಡಿ ಗಂಡಾಂತರ ಇದೀಗ ಹಳ್ಳಿಹಳ್ಳಿಗೂ ಕಾಲಿಟ್ಟಿದೆ. ತುರುವೇಕೆರೆ ತಾಲ್ಲೂಕಿನ ತೊರೆ ಮಾವಿನಹಳ್ಳಿ ಗ್ರಾಮಸ್ಥರು ರಸ್ತೆ ಗುಂಡಿಗಳಿಂದ ಬೇಸತ್ತು ಹೋಗಿದ್ದಾರೆ. ನಿರಂತರ ಮಳೆಯಿಂದಾಗಿ ಗುಂಡಿ ಬಿದ್ದು ಕೆಸರು ಗದ್ದೆಯಾದ ತೊರೆ ಮಾವಿನಹಳ್ಳಿ ರಸ್ತೆಯಲ್ಲಿ ಗ್ರಾಮಸ್ಥರು ನಾಟಿ ಮಾಡಿ ವಿನೂತನ ಪ್ರತಿಭಟನೆ ಮಾಡಿದ್ದಾರೆ. ಬೀದರ್ ಶ್ರೀರಂಗಪಟ್ಟಣ ರಸ್ತೆಗೆ ಸಂಪರ್ಕ ಕಲ್ಪಿಸುವ ಉಪ ರಸ್ತೆ ಇದಾಗಿದ್ದು. ನಿತ್ಯಸಾವಿರಾರು ವಾಹನಗಳು ಸಂಚರಿಸುವ ಪ್ರಮುಖ ರಸ್ತೆಯಾಗಿದೆ. ದುರಸ್ತಿ ಮಾಡುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಕೇಳದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಗ್ರಾಮಸ್ಥರು ಪೈರು ನಾಟಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share This Article