ಪಾಪ ಪ್ರಜ್ಞೆ ಕಾಡುತ್ತಿದೆ – ರಿಷಬ್ ಚಿತ್ರ ನೋಡಿ 200 ರೂ. ಕಳುಹಿಸಿಕೊಟ್ಟ ಅಭಿಮಾನಿ

Public TV
2 Min Read

ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರ ನೋಡಿ ಅಭಿಮಾನಿಯೋರ್ವ ಅವರಿಗೆ ಪತ್ರ ಬರೆದು ಜೊತೆಗೆ 200 ರೂ. ದುಡ್ಡನ್ನು ಕಳುಹಿಸಿಕೊಟ್ಟಿದ್ದಾರೆ.

ರಿಷಬ್ ಶೆಟ್ಟಿ ನಿರ್ದೇಶನ ಮಾಡಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರ 2018 ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಈ ಚಿತ್ರವನ್ನು ಈಗ ನೋಡಿದ ಮೈಸೂರಿನ ಅಭಿಮಾನಿಯೋರ್ವ ರಿಷಬ್ ಶೆಟ್ಟಿಗೆ ಪತ್ರ ಬರೆದು ಕ್ಷಮೆ ಕೇಳಿ ಜೊತೆಗೆ 200 ರೂ. ದುಡ್ಡನ್ನು ಕಳುಹಿಸಿಕೊಟ್ಟಿದ್ದಾರೆ.

ರಿಷಬ್‍ಗೆ ಪತ್ರ ಬರೆದಿರುವ ಮೈಸೂರಿನ ಅಭಿಮಾನಿ ಭರತ್ ರಾಮಸ್ವಾಮಿ, ನನ್ನ ಹೆಸರು ಭರತ್ ರಾಮಸ್ವಾಮಿ, ನಾನು ಮೈಸೂರಿನವನು. ವೃತ್ತಿಯಲ್ಲಿ ಒಬ್ಬ ಪುಸ್ತಕ ಪ್ರಕಾಶಕ. ನಾನು ಜನವರಿ 12 ರಂದು ನೀವು ನಿರ್ದೇಶನ ಮಾಡಿದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಎಂಬ ಸಿನಿಮಾವನ್ನು ಒಂದು ವೆಬ್‍ಸೈಟಿನಲ್ಲಿ ನೋಡಿದೆ. ಈ ಚಿತ್ರ ನನ್ನ ಊಹೆಗೂ ಮೀರಿದ್ದಾಗಿತ್ತು. ನಾನೊಬ್ಬ ಚಿತ್ರ ರಸಿಕ. ನಿಮ್ಮ ನಿರೂಪಣಾ ಶೈಲಿ ಮತ್ತು ಸ್ಕ್ರೀನ್ ಪ್ಲೇ ಅತ್ಯದ್ಭುತವಾಗಿದೆ ಎಂದು ಹೊಗಳಿದ್ದಾರೆ.

ಕನ್ನಡದ ಅಸ್ಮಿತೆ ಮತ್ತು ಕನ್ನಡದ ಮೇಲೆ ನಮಗಿರುವ ಭಾವನೆಗಳನ್ನು ಅನಂತ್ ನಾಗ್ ಅವರು ಮಾಡಿರುವ ಪಾತ್ರದ ಮೂಲಕ ಹೇಳಿಸಿದ ಶೈಲಿ ಮನ ಮುಟ್ಟುವಂತಿತ್ತು. ಇಂತಹ ರಚನಾತ್ಮಕ ಆಲೋಚನೆಗಳಿಂದ ಕೂಡಿದ ಸಿನಿಮಾವನ್ನು ಇಷ್ಟು ತಡವಾಗಿ ನೋಡಿದ ಮತ್ತು ದುಡ್ಡು ಕೊಟ್ಟು ಚಿತ್ರಮಂದಿರದಲ್ಲಿ ನೋಡದ ಪಾಪ ಪ್ರಜ್ಞೆ ನನ್ನನ್ನು ಕಾಡುತ್ತಿದೆ. ಆದ್ದರಿಂದ ಈ ಪತ್ರದೊಡನೆ 200 ರೂಪಾಯಿ ಟಿಕೆಟ್ ದರವನ್ನು ನನ್ನ ಮೆಚ್ಚುಗೆಯ ಸಂಕೇತವಾಗಿ ಕಳುಹಿಸಿರುತ್ತೇನೆ ಎಂದು ಪತ್ರದಲ್ಲಿ ಭರತ್ ತಿಳಿಸಿದ್ದಾರೆ.

ಈ ನನ್ನ ಕ್ರಿಯೆ ನಿಮಗೆ ಹಾಸ್ಯಾಸ್ಪದವೆನಿಸಿದರೂ ನನ್ನೊಳಗಿನ ಸಿನಿಮಾ ರಸಿಕನಿಗೆ ತೃಪ್ತಿ ತರುವಂತಾಗಿದೆ. ಮುಂದೆಯೂ ಇಂತಹುದೇ ಪ್ರಗತಿಪರ ಸಿನಿಮಾಗಳನ್ನು ನಿಮ್ಮ ಮೂಲಕ ತಯಾರಾಗಲಿ ಎಂದು ಆಶಿಸುತ್ತೇನೆ ಎಂದು ಪತ್ರದ ಮೂಲಕ ತಿಳಿಸಿದ್ದಾರೆ.

ಅಭಿಮಾನಿಯ ಪತ್ರವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಫೋಟೋ ಸಮೇತ ಟ್ವೀಟ್ ಮಾಡಿರುವ ರಿಷಬ್ ಶೆಟ್ಟಿ, ಇಂತಹ ಚಿತ್ರಪ್ರೇಮಿಗಳಿರುವ ತನಕ ಒಳ್ಳೆಯ ಕನ್ನಡ ಚಿತ್ರಗಳಿಗೆ ಎಂದಿಗೂ ಸೋಲಿಲ್ಲ. ಪ್ರೇಕ್ಷಕರ ಒಲವೇ ಚಿತ್ರದ ನಿಜವಾದ ಗೆಲುವು. ಭರತ್ ರಾಮಸ್ವಾಮಿ ಅವರಿಗೆ ಧನ್ಯವಾದಗಳು. ನಿಮ್ಮ ಈ ಪ್ರೀತಿಯ ಕಾಣಿಕೆಯನ್ನು ಅದರ ದುಪ್ಪಟ್ಟು ಪ್ರೀತಿಯಿಂದ ಸ್ವೀಕರಿಸುತ್ತೇವೆ. (ಜೊತೆಗೆ ಚಿತ್ರದ ಕಲೆಕ್ಷನ್ ತಿದ್ದುಪಡಿ ಮಾಡಿಕೊಳ್ಳುತ್ತೇವೆ) ಎಂದು ಬರೆದುಕೊಂಡಿದ್ದಾರೆ.

2018 ಆಗಸ್ಟ್ 24 ರಂದು ಬಿಡುಗಡೆಗೊಂಡಿದ್ದ ರಿಷಬ್ ಶೆಟ್ಟಿ ನಿರ್ದೇಶನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಮಕ್ಕಳ ಜೊತೆ ಹಿರಿಯ ನಟ ಅನಂತ್ ನಾಗ್ ಅವರು ಮನಮಿಡಿಯುವಂತೆ ಅಭಿನಯಿಸಿದ್ದರು. ಕನ್ನಡ ಭಾಷೆ, ಕನ್ನಡ ಮಾಧ್ಯಮ ಶಾಲೆಯ ಅವಶ್ಯಕತೆಯನ್ನು ಮಕ್ಕಳ ಮೂಲಕ ಮನಮುಟ್ಟುವಂತೆ ಹೇಳಿದ್ದ ಈ ಚಿತ್ರಕ್ಕೆ ಅತ್ಯುತ್ತಮ ಮಕ್ಕಳ ಚಿತ್ರ ಎಂದು ರಾಷ್ಟ್ರೀಯ ಪ್ರಶಸ್ತಿ ಕೂಡ ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *