ಬೆಂಗಳೂರಿಗರೇ ಕೇರ್‌ಫುಲ್ – ಮುಂದಿನ ಮೂರು ದಿನ ನಗರದಲ್ಲಿ ಬಿಸಿ ಗಾಳಿ ಎಚ್ಚರಿಕೆ

2 Min Read

ಬೆಂಗಳೂರು: ನಗರದಲ್ಲಿ ಮುಂದಿನ ಮೂರು ದಿನಗಳ ಕಾಲ ಅಧಿಕ ಉಷ್ಣಾಂಶ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.

ವರದಿಯ ಪ್ರಕಾರ, ಮುಂದಿನ ಮೂರು ದಿನಗಳಲ್ಲಿ ಬೆಂಗಳೂರಿನಲ್ಲಿ (Bengaluru) ಅಧಿಕ ಉಷ್ಣಾಂಶ ದಾಖಲಾಗುವ ಸಾಧ್ಯತೆಯಿದ್ದು, ಬಿಸಿ ಗಾಳಿ ಎಚ್ಚರಿಕೆ ನೀಡಲಾಗಿದೆ.ಇದನ್ನೂ ಓದಿ: ಏ.11ಕ್ಕೆ ಬೀದರ್, ಕಲಬುರಗಿಗೆ ಸಿಎಂ ಸಿದ್ದರಾಮಯ್ಯ ಪ್ರವಾಸ

ಬಿಸಿ ಗಾಳಿಯಿಂದಾಗಿ (Heat Wave Stroke) ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸಲಹೆಗಳನ್ನು ನೀಡಿದೆ.

ಸಲಹೆ ಏನು?

  • ಸಾಧ್ಯವಾದಷ್ಟು ಹೆಚ್ಚಾಗಿ ನೀರನ್ನು ಕುಡಿಯುವುದು.
  • ತೆಳುವಾದ, ಸಡಿಲವಾದ ಹತ್ತಿಯ ಉಡುಪುಗಳನ್ನು ಧರಿಸುವುದು, ಆದಷ್ಟು ಬಿಳಿ ಬಣ್ಣದ ಬಟ್ಟೆಗಳ ಬಳಕೆ ಒಳ್ಳೆಯದು. ಕಪ್ಪು ಬಟ್ಟೆ ಅಥವಾ ಬಿಗಿಯಾದ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಿ.
  • ಬಿಸಿಲಿನಲ್ಲಿ ಹೊರಗೆ ಹೋಗುವಾಗ ರಕ್ಷಣಾತ್ಮಕ ಕನ್ನಡಕಗಳು, ಟೋಪಿ, ಬೂಟುಗಳು ಅಥವಾ ಪಾದರಕ್ಷೆಗಳನ್ನು ಬಳಸಿ. ಪಾದರಕ್ಷೆ ಧರಿಸದೆ ಹೊರಹೋಗುವ ಅಭ್ಯಾಸವನ್ನು ತಪ್ಪಿಸಿ.
  • ದೂರದ ಪ್ರಯಾಣವನ್ನು ರಾತ್ರಿ ವೇಳೆ ಮಾಡುವುದು ಉತ್ತಮ, ಒಂದು ವೇಳೆ ಪ್ರಯಾಣ ಮಾಡುವ ಸಂದರ್ಭ ಬಂದರೆ ಪ್ರಯಾಣ ಮಾಡುವಾಗ ನಿಮ್ಮೊಂದಿಗೆ ನೀರನ್ನು ತೆಗೆದುಕೊಂಡು ಹೋಗುವುದು.
  • ನೀವು ಹೊರಗೆ ಕೆಲಸ ಮಾಡುತ್ತಿದ್ದರೆ, ಟೋಪಿ ಅಥವಾ ಛತ್ರಿಯನ್ನು ಬಳಸಿ ಮತ್ತು ನಿಮ್ಮ ತಲೆ, ಕುತ್ತಿಗೆ, ಮುಖ ಮತ್ತು ಕೈಕಾಲುಗಳ ಮೇಲೆ ಒದ್ದೆಯಾದ ಬಟ್ಟೆಯನ್ನು ಸಹ ಬಳಸಿ.
  • ಮನೆಯಲ್ಲಿ ತಯಾರಿಸಿದ ಪಾನೀಯಗಳಾದ ಲಸ್ಸಿ, ಶರಬತ್, ನಿಂಬೆ ನೀರು, ಮಜ್ಜಿಗೆ ಇತ್ಯಾದಿಗಳನ್ನು ಬಳಸಿ, ಅದು ದೇಹವನ್ನು ತಂಪಾಗಿಡಲು ಸಹಾಯ ಮಾಡುತ್ತದೆ.
  • ಪ್ರಾಣಿ/ಪಕ್ಷಿಗಳನ್ನು ನೆರಳಿನಲ್ಲಿ ಇರಿಸಿ ಮತ್ತು ಅವುಗಳಿಗೆ ಕುಡಿಯಲು ಸಾಕಷ್ಟು ನೀರು ಕೊಡಿ
  • ಆದಷ್ಟು ಫ್ಯಾನ್‌ಗಳನ್ನು ಬಳಸಿ, ಒದ್ದೆಯಾದ ಬಟ್ಟೆ ಅಥವಾ ಆಗಾಗ ತಣ್ಣೀರಿನಲ್ಲಿ ಸ್ನಾನ ಮಾಡಿ
  • ಕೆಲಸವನ್ನು ಆದಷ್ಟು ತಂಪಾದ ಸಮಯದಲ್ಲಿ ಮಾಡುವುದು ಹಾಗೂ ಕೆಲಸದ ಸ್ಥಳದಲ್ಲಿ ತಂಪಾದ ನೀರನ್ನು ಕುಡಿಯಿರಿ
  • ಕೆಲಸ ನಿರ್ವಹಿಸುವ ಗರ್ಭಿಣಿಯರು ಮತ್ತು ಅನಾರೋಗ್ಯದಲ್ಲಿರುವ ಕಾರ್ಮಿಕರು ಹೆಚ್ಚಿನ ಗಮನವಹಿಸಬೇಕು.
  • ಕಲ್ಲಂಗಡಿ, ಕರಬೂಜ, ಕಿತ್ತಳೆ, ದ್ರಾಕ್ಷಿ, ಅನಾನಸ್, ಸೌತೆಕಾಯಿ, ಎಳನೀರನ್ನು ಹೆಚ್ಚಾಗಿ ಸೇವಿಸಬೇಕು.
  • ನವಜಾತ ಶಿಶುಗಳು, ಹಿರಿಯ ನಾಗರಿಕರು ಹಾಗೂ ಚಿಕ್ಕ ಮಕ್ಕಳು, ಗರ್ಭಿಣಿಯರು, ಹೊರಾಂಗಣದಲ್ಲಿ ಕೆಲಸ ನಿರ್ವಹಿಸುವವರು, ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರು ಹಾಗೂ ಇತರ ಆರೋಗ್ಯ ಸಮಸ್ಯೆಗಳಿರುವವರು, ಅದರಲ್ಲೂ ವಿಶೇಷವಾಗಿ ಹೃದ್ರೋಗ ಹಾಗೂ ರಕ್ತದ ಒತ್ತಡದಿಂದ ಬಳಲುತ್ತಿರುವವರು ಹೆಚ್ಚು ಜಾಗರೂಕತೆ ವಹಿಸಬೇಕು.
  • ಮಕ್ಕಳು ಅಥವಾ ಸಾಕುಪ್ರಾಣಿಗಳನ್ನು ಬಿಸಿಲಿನಲ್ಲಿ ನಿಲ್ಲಿಸಿದ ವಾಹನಗಳ ಹತ್ತಿರ ಬಿಡಬೇಡಿ. ವಾಹನಗಳಲ್ಲಿನ ಹೆಚ್ಚಿನ ತಾಪಮಾನವು ಅವರಿಗೆ/ಅವುಗಳಿಗೆ ಅಪಾಯಕಾರಿಯಾಗಬಹುದು.
  • ಹೊರಗಿನ ತಾಪಮಾನ ಹೆಚ್ಚಾದಾಗ ಶ್ರಮದಾಯಕ ಚಟುವಟಿಕೆಗಳನ್ನು ತಪ್ಪಿಸಿ, ಹೆಚ್ಚಾಗಿ ಮಧ್ಯಾಹ್ನ 12 ರಿಂದ 3ರವರೆಗೆ ಹೊರಗೆ ಕೆಲಸ ಮಾಡುವುದನ್ನು ತಪ್ಪಿಸಿ.
  • ಬಿಸಿಲಿನ ಸಮಯದಲ್ಲಿ ಅಡುಗೆ ಮಾಡುವುದನ್ನು ತಪ್ಪಿಸಿ. ಅಡುಗೆ ಮಾಡುವ ಪ್ರದೇಶವನ್ನು ಸಮರ್ಪಕವಾಗಿ ಗಾಳಿಯಾಡಲು ಬಾಗಿಲು ಮತ್ತು ಕಿಟಕಿಗಳನ್ನು ತೆರೆಯಿರಿ.
  • ದೇಹವನ್ನು ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್, ಚಹಾ, ಕಾಫಿ ಮತ್ತು ಹಾನಿಕಾರಕ ಪಾನೀಯಗಳನ್ನು ಸೇವಿಸಬೇಡಿ. ಇವು ಹೊಟ್ಟೆ ನೋವನ್ನು ಉಂಟುಮಾಡುತ್ತದೆ. ಹಾನಿಕಾರಕವಾದ ಆಹಾರ ಮತ್ತು ಹಳಸಿದ ಆಹಾರವನ್ನು ಸೇವಿಸಬೇಡಿ.

Share This Article