ರಾಮೇಶ್ವರಂ ಕೆಫೆ ಸ್ಫೋಟ – ಬಳ್ಳಾರಿಯಲ್ಲಿ ತನಿಖೆ ಚುರುಕು, ಬಾಂಬರ್‌ನಂತೆ ಡ್ರೆಸ್‌ ಹಾಕಿ ಓರ್ವನ ವಿಚಾರಣೆ

Public TV
1 Min Read

ಬಳ್ಳಾರಿ: ಬೆಂಗಳೂರಿನ ರಾಮೇಶ್ವರಂ ಕೆಫೆ (Rameshwaram Cafe Blast) ಸ್ಫೋಟದ ಶಂಕಿತ ಉಗ್ರ ಬಳ್ಳಾರಿಯಲ್ಲೇ (Ballari) ತಲೆಮರೆಸಿಕೊಂಡಿದ್ದಾನಾ ಎಂಬ ಪ್ರಶ್ನೆ ಎದ್ದಿದೆ.

ಬೆಂಗಳೂರಿನಿಂದ (Bengalruu) ಬಸ್ಸು ಹತ್ತಿ ಬಳ್ಳಾರಿ ಬಸ್‌ ನಿಲ್ದಾಣದಲ್ಲಿ ಬಾಂಬರ್‌ ನಿಂತುಕೊಂಡಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ (CCTV) ಸೆರೆಯಾಗಿದೆ. ಬಳ್ಳಾರಿಯ ನಂತರ ಆತ ಬೀದರ್‌, ಭಟ್ಕಳಕ್ಕೆ ತೆರಳಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ ಬಳ್ಳಾರಿಯ ನಂತರ ಆತ ಎಲ್ಲಿ ಹೋಗಿದ್ದಾನೆ ಎಂಬುದರ ಸುಳಿವು ಇನ್ನೂ ಸಿಕ್ಕಿಲ್ಲ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಹೀಗಾಗಿ ರಾಷ್ಟ್ರೀಯ ತನಿಖಾ ದಳ (NIA) ಎನ್‌ಐಎ ಅಧಿಕಾರಿಗಳು ಈಗ ಬಳ್ಳಾರಿಯಲ್ಲೇ ಬೀಡು ಬಿಟ್ಟು ತನಿಖೆ ತೀವ್ರಗೊಳಿಸಿದ್ದಾರೆ.

 

ಸಾಧಾರಣವಾಗಿ ದಾಳಿ ಮಾಡಿದ ನಂತರ ಎನ್‌ಐಎ ಅಧಿಕಾರಿಗಳು ದಾಖಲೆಗಳೊಂದಿಗೆ ತೆರಳುತ್ತಾರೆ ಅಥವಾ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಾರೆ. ಆದರೆ ಕಳೆದ ಮೂರು ದಿನಗಳಿಂದ ಎನ್‌ಐಎ ಅಧಿಕಾರಿಗಳು ಬಳ್ಳಾರಿಯಲ್ಲೇ ಬೀಡು ಬಿಟ್ಟು ಶಂಕಿತ ಉಗ್ರನಿಗೆ ಶೋಧ ನಡೆಸುತ್ತಿದ್ದಾರೆ.  ಇದನ್ನೂ ಓದಿ: ಬಾಂಬ್ ಸ್ಫೋಟಕ್ಕೆ ಮುಂದಾಗಿದ್ದ ಬಳ್ಳಾರಿ ಐಸಿಸ್‌ ಟೀಂ – ದಾಳಿಯಲ್ಲಿ ಏನು ಸಿಕ್ಕಿದೆ?

ಐಸಿಸ್‌ ಬಳ್ಳಾರಿ ಮಾಡ್ಯೂಲ್‌ ಗ್ಯಾಂಗ್‌ನಲ್ಲಿದ್ದ ಮೊಹಮ್ಮದ್‌ ಮುನೀರುದ್ದೀನ್‌ನನ್ನು ಡಿಸೆಂಬರ್‌ನಲ್ಲಿ ಎನ್‌ಐಎ ಬಂಧಿಸಿತ್ತು. ಈಗ ಮುನೀರುದ್ದೀನ್‌ ಆಪ್ತನನ್ನು ವಿಚಾರಣೆ ನಡೆಸಲಾಗಿದೆ. ಮುನೀರ್ ಆಪ್ತನ ತಲೆ ಮೇಲೆ ಕ್ಯಾಪ್ ಇಟ್ಟು, ಬ್ಯಾಗ್ ಹಾಕಿ ಚಹರೆ ಗುರುತು ಹಿಡಿಯುವ ಕೆಲಸವನ್ನು ಅಧಿಕಾರಿಗಳು ಮಾಡಿದ್ದಾರೆ. ಮುನೀರ್ ಆಪ್ತನಿಗೆ ರಾಮೇಶ್ವರಂ ಕೆಫೆಯಲ್ಲಿ ಸಿಸಿಟಿವಿಯಲ್ಲಿ ಕಾಣಿಸಿದ ಉಗ್ರನಂತೆ ಡ್ರೆಸ್ ಮಾಡಿ ಹೋಲಿಕೆ ಮಾಡಿದ್ದಾರೆ. ಕೊನೆಗೆ ಹೋಲಿಕೆಯಾಗದ ಕಾರಣ ಕೆಲ ಮಾಹಿತಿ ಪಡೆದು ಆತನನ್ನು ಬಿಟ್ಟಿದ್ದಾರೆ.

ಡಿಸೆಂಬರ್‌ನಲ್ಲಿ ಬಂಧನಕ್ಕೆ ಒಳಗಾದ 8 ಮಂದಿಯಲ್ಲಿ 4 ಮಂದಿ ಬಳ್ಳಾರಿಯವರಾಗಿದ್ದಾರೆ. ಸುಲೇಮಾನ್ ಮತ್ತು ಸೈಯದ್ ಸಮೀರನನ್ನು ಬಳ್ಳಾರಿಯಲ್ಲಿ ಬಂಧಿಸಿದ್ದರೆ ಬಳ್ಳಾರಿ ಮೂಲದ ಸೈಯದ್ ಸಮೀವುಲ್ಲಾ, ಮುನೀರುದ್ದೀನ್‌ನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು.

 

Share This Article