ಹಸಿರು ವಲಯದಲ್ಲಿರೋ ರಾಮನಗರದಲ್ಲಿ ಕೈಗಾರಿಕೆ ಪ್ರಾರಂಭಿಸಲು ಅನುಮತಿ ಕೊಡಿ- ಸರ್ಕಾರಕ್ಕೆ ಹೆಚ್‍ಡಿಕೆ ಆಗ್ರಹ

Public TV
1 Min Read

ಬೆಂಗಳೂರು: ರಾಮನಗರದಲ್ಲಿ ಕೈಗಾರಿಕೆ ಪ್ರಾರಂಭ ಮಾಡಲು ಅನುಮತಿ ನೀಡಿ ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರು ಮಾಜಿ ಸಿಎಂ, ರಾಮನಗರ ಜಿಲ್ಲೆಯಾದ್ಯಂತ ಕಾರ್ಖಾನೆಗಳ ಪುನರಾರಂಭಕ್ಕೆ ರಾಜ್ಯ ಸರ್ಕಾರ ತಕ್ಷಣವೇ ಹಸಿರು ನಿಶಾನೆ ತೋರಬೇಕು. ಹಾರೋಹಳ್ಳಿ, ಬಿಡದಿ ಕೈಗಾರಿಕಾ ಪ್ರದೇಶಗಳು ಸೇರಿದಂತೆ ಜಿಲ್ಲೆಯಲ್ಲಿ ಕೈಗಾರಿಕೆಗಳಿಗೆ ಸೂಕ್ತ ಮುಂಜಾಗ್ರತಾ ಕ್ರಮಗಳೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡುವ ಮೂಲಕ ಉದ್ದಿಮೆದಾರರು ಮತ್ತು ಕಾರ್ಮಿಕರ ಬದುಕಿಗೆ ಆಸರೆಯಾಗಬೇಕು ಎಂದು ಬರೆದುಕೊಂಡಿದ್ದಾರೆ.

ಅಲ್ಲದೆ ಹೊರಗಿನಿಂದ ಬರುವ ಕಾರ್ಮಿಕರಿಗೆ ತಾತ್ಕಾಲಿಕ ನಿರ್ಬಂಧ ಮುಂದುವರಿಸಿದರೂ, 9 ಜಿಲ್ಲೆಗಳಿಗೆ ನೀಡಿರುವಂತೆ ರಾಮನಗರ ಜಿಲ್ಲೆಯ ಕಾರ್ಮಿಕರು ದುಡಿದು ತಿನ್ನಲು ತಕ್ಷಣವೇ ವಿನಾಯಿತಿ ಘೋಷಿಸಬೇಕು ಎಂದಿದ್ದಾರೆ.

ಕೊರೊನಾ ವೈರಸ್ ಮುಕ್ತವಾಗಿರುವ ಜಿಲ್ಲೆಗಳಲ್ಲಿ ನೀಡಿರುವ ವಿನಾಯ್ತಿಯನ್ನು ತಕ್ಷಣವೇ ರಾಮನಗರ ಜಿಲ್ಲೆಗೂ ಅನ್ವಯಿಸಿ. ಈ ಸಂಬಂಧ ರಾಜ್ಯ ಸರ್ಕಾರ ಆದೇಶ ಹೊರಡಿಸಬೇಕು ಎಂದು ಮುಖ್ಯಮಂತ್ರಿ ಹಾಗೂ ಮುಖ್ಯಕಾರ್ಯದರ್ಶಿಯವರಿಗೆ ಟ್ವೀಟ್ ಮೂಲಕ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಕೊಡಗು, ಉಡುಪಿ, ದಾವಣಗೆರೆ, ಚಿತ್ರದುರ್ಗ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಹಾವೇರಿ, ಕೋಲಾರ, ಕೊಪ್ಪಳ, ರಾಯಚೂರು, ಶಿವಮೊಗ್ಗ, ಯಾದಗಿರಿ ಹಾಗೂ ರಾಮನಗರವನ್ನು ಹಸಿರು ಜಿಲ್ಲೆ ಎಂದು ಈಗಾಗಲೇ ಘೋಷಣೆ ಮಾಡಲಾಗಿದೆ. ಈ ಜಿಲ್ಲೆಗಳಲ್ಲಿ ಕೈಗಾರಿಕೆ, ಅಂಗಡಿಗಳು, ಹೋಟೆಲ್ ತೆರೆಯಲು ಮೊದಲಾದವುಗಳಿಗೆ ಸರ್ಕಾರ ಅವಕಾಶ ನೀಡಿದೆ. ಆದರೆ ರಾಮನಗರಕ್ಕೆ ಮಾತ್ರ ಕೈಗಾರಿಕೆ ಆರಂಭಿಸಲು ಅವಕಾಶ ನೀಡಿಲ್ಲ. ಯಾಕೆಂದರೆ ಪಾದರಾಯನಪುರದ ಪುಂಡರನ್ನು ಮೊದಲು ರಾಮನಗರ ಜೈಲಿಗೆ ಹಾಕಿದ್ದು, ಆ ನಂತರ ಕೆಲವರ ಪರೀಕ್ಷೆಯಲ್ಲಿ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ರಾಮನಗರ ಹಸಿರು ಜಿಲ್ಲೆ ಎಂದು ಘೋಷಣೆಯಾದರೂ ಅವಕಾಶ ನೀಡಿಲ್ಲ.

ಬೆಂಗಳೂರು ನಗರದ ಸಮೀಪವೇ ರಾಮನಗರ ಇರುವ ಕಾರಣ ಒಂದು ವೇಳೆ ಅನುಮತಿ ನೀಡಿದರೆ ಜನರ ಓಡಾಟ ಹೆಚ್ಚಾಗುತ್ತದೆ. ಹೀಗಾಗಿ ಸರ್ಕಾರ ಇಲ್ಲಿ ಕೈಗಾರಿಕೆಗೆ ಅನುಮತಿ ನೀಡಿಲ್ಲ.

Share This Article
Leave a Comment

Leave a Reply

Your email address will not be published. Required fields are marked *