ದೀಪಾವಳಿಗೆ ಖಾಸಗಿ ಬಸ್‍ಗಳ ದುಬಾರಿ ಶುಲ್ಕ: ಟಿಕೆಟ್ ಬುಕ್ ಮಾಡಿ ಹಬ್ಬಕ್ಕೆ ಬಿಎಸ್‍ವೈಗೆ ಆಹ್ವಾನ

Public TV
2 Min Read

ಕಾರವಾರ: ದೀಪಾವಳಿ ಹಬ್ಬದ ದಿನಗಳಲ್ಲಿ ಖಾಸಗಿ ಬಸ್‍ಗಳ ದುಬಾರಿ ಪ್ರಯಾಣದ ದರದಿಂದ ಕಂಗೆಟ್ಟಿರುವ ಉತ್ತರ ಕನ್ನಡ ಜಿಲ್ಲೆಯ ಪ್ರಯಾಣಿಕರೊಬ್ಬರು ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಸ್ ಟಿಕೆಟ್ ಬುಕ್ ಮಾಡಿ ದೀಪಾವಳಿ ಹಬ್ಬಕ್ಕೆ ಆಹ್ವಾನಿಸಿದ್ದಾರೆ.

ಹೊನ್ನಾವರ ತಾಲೂಕಿನ ರಾಜೇಶ್ ಶೇಟ್ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಖಾಸಗಿ ಬಸ್‍ಗಳ ಟಿಕೆಟ್ ದರವು ಸಾಮಾನ್ಯ ದಿನದಲ್ಲಿ 700 ರೂ.ದಿಂದ 800 ರೂಪಾಯಿ ಇರುತ್ತದೆ. ಆದರೆ ಹಬ್ಬ ಹರಿದಿನಗಳಲ್ಲಿ 1,500 ರೂ.ದಿಂದ 2,500 ರೂ.ಕ್ಕೂ ಅಧಿಕ ದರವಾಗುತ್ತದೆ. ಇದರಿಂದಾಗಿ ಅನೇಕ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದ್ದು, ಬೆಂಗಳೂರಿನಿಂದ ಉತ್ತರ ಕನ್ನಡ ಜಿಲ್ಲೆಗೆ ಬರಬೇಕೆಂದರೆ ಒಬ್ಬರು ಕನಿಷ್ಠ 5,000 ರೂ. ತೆಗೆದಿಡಬೇಕು. ಕುಟುಂಬ ಸಮೇತ ಬರಬೇಕು ಎಂದರೆ ಬರುವ ವೇತನವನ್ನು ಟಿಕೆಟ್‍ಗೆ ಮೀಸಲಿಡಬೇಕು.

ಬಸ್ ದರದಿಂದ ಬೇಸತ್ತ ಪ್ರಯಾಣಿಕ ರಾಜೇಶ್ ಅವರು, ಎಸ್‍ಎಸ್‍ಆರ್ ಎಸ್ ಟ್ರಾವೆಲ್ಸ್ ನಲ್ಲಿ 1,570 ರೂ. ಟಿಕೆಟ್ ಬುಕ್ ಮಾಡಿದ್ದಾರೆ. ಬಳಿಕ ಟಿಕೆಟ್ ಫೋಟೋ ಟ್ವೀಟ್ ಮಾಡಿ, ಮುಖ್ಯಮಂತ್ರಿಯವರಿಗೆ ಟ್ಯಾಗ್ ಮಾಡಿ, ದೀಪಾವಳಿಗೆ ಹೊನ್ನಾವರ ತಾಲೂಕಿನ ಗುಂಡಬಾಳಕ್ಕೆ ಆಗಮಿಸುವಂತೆ ಆಹ್ವಾನ ನೀಡಿದ್ದಾರೆ.

ಈ ಮೂಲಕ ಟಿಕೆಟ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಸಮಸ್ಯೆ ಕಡೆ ಗಮನ ನೀಡುವಂತೆ ರಾಜೇಶ್ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಎಸ್‍ಆರ್ ಎಸ್ ಟ್ರಾವೆಲ್ಸ್ ನ 1,570 ರೂ. ಟಿಕೆಟ್ ಅನ್ನು ಮುಖ್ಯಮಂತ್ರಿ ಅವರ ಬೆಂಗಳೂರು ಕಚೇರಿಯ ವಿಳಾಸಕ್ಕೆ ಕಳುಹಿಸಿಕೊಟ್ಟಿದ್ದಾರೆ.

ರಾಜೇಶ್ ಅವರ ಟ್ವೀಟ್ ಅನ್ನು ಅನೇಕ ನೆಟ್ಟಿಗರು ರಿಟ್ವೀಟ್ ಮಾಡಿ, ಹಬ್ಬ ಹಾಗೂ ರಜಾ ದಿನಗಳಲ್ಲಿ ಖಾಸಗಿ ಬಸ್‍ಗಳು ದರದ ಮೂರ್ನಾಲ್ಕು ಪಟ್ಟು ಹೆಚ್ಚು ವಸೂಲಿ ಮಾಡುತ್ತಿವೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂದು ಸಿಎಂ ಯಡಿಯೂರಪ್ಪ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ರಾಜೇಶ್ ಅವರು ಕಳೆದ ಎರಡು ವರ್ಷಗಳಿಂದ ಖಾಸಗಿ ಬಸ್‍ನವರು ರಜೆ ದಿನಗಳಲ್ಲಿ ಟಿಕೆಟ್‍ಗೆ ಅಧಿಕ ದರ ವಿಧಿಸುವ ಕುರಿತು ಕರ್ನಾಟಕದ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ, ಸಾರಿಗೆ ಆಯುಕ್ತರಿಗೆ, ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಿಗೆ ಲಿಖಿತ ದೂರು ನೀಡಿದ್ದಾರೆ. ಆದರೆ ಈವರೆಗೂ ಯಾವುದೇ ಶಾಶ್ವತ ಪರಿಹಾರ ಸಿಕ್ಕಿಲ್ಲ. ಇದರಿಂದಾಗಿ ಪ್ರಯಾಣಿಕರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಅಂತಹ ಸಂಸ್ಥೆಗಳ ವಿರುದ್ಧ ಕ್ರಮಕೈಗೊಂಡು ಪ್ರಯಾಣಿಕರಿಗೆ ಆಗುವ ತೊಂದರೆ ತಪ್ಪಿಸುವಂತೆ ಒತ್ತಾಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *