ಮಹಿಳೆಯರು ಸೀರಿಯಲ್ ನೋಡೋ ಟೈಂನಲ್ಲೇ ಕಳ್ಳತನ ಮಾಡ್ತಿದ್ದ ಕಳ್ಳ ಅಂದರ್

Public TV
2 Min Read

ಬೆಂಗಳೂರು: ಮಹಿಳೆಯರು ಬೆಳಗ್ಗೆ ಮರುಪ್ರಸಾರವಾಗುವ ಸೀರಿಯಲ್ ಗಳು ನೋಡುತ್ತಿರುವಾಗ ಮನೆಗೆ ಕನ್ನ ಹಾಕಿ ಚಿನ್ನಾಭರಣ ದೋಚುತ್ತಿದ್ದ ಚಾಲಕಿ ಕಳ್ಳನನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಉದಯ್ ನೀರ್ ಮಜ್ಜಿಗೆ ಅಲಿಯಾಸ್ ಉದಯ್ ಬಂಧಿತ ಆರೋಪಿ. ಬಂಧಿತ ಆರೋಪಿಯಿಂದ ಸುಮಾರು ಅರ್ಧ ಕೆ.ಜಿ. ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿ ಉದಯ್ ಆರಂಭದಿಂದಲೂ ಮನೆ ಕಳ್ಳತನ, ದರೋಡೆ, ರಾಬರಿ ಮಾಡಿ 8 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಎಂಟು ವರ್ಷ ಇದ್ದು, ಸನ್ನಡತೆಯ ಆಧಾರದ ಮೇಲೆ ಮೂರು ತಿಂಗಳ ಹಿಂದಷ್ಟೇ ಬಿಡುಗಡೆಯಾಗಿ ಮನೆಗೆ ಆಗಮಿಸಿದ್ದ.

ಕಳ್ಳತನವನ್ನೇ ಕಸುಬು ಮಾಡಿಕೊಂಡಿದ್ದ ಉದಯ್ ಜೈಲಿಂದ ಬಂದ ಬಳಿಕವೂ ಕಳ್ಳತನ ಮಾಡುವುದನ್ನು ಮುಂದುವರಿಸಿದ್ದ. ಕಳೆದ ಎರಡುವರೆ ತಿಂಗಳಲ್ಲಿ ನಗರದ ಬಹುತೇಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ಉದಯ್ ಕೈಚಳಕ ತೋರಿಸಿದ್ದ. ಸಿಸಿಟಿವಿ ದೃಶ್ಯ ಆಧರಿಸಿ ನಗರದ ಬಹುತೇಕ ಪೊಲೀಸ್ ಠಾಣಾ ಪೊಲೀಸರು ಆರೋಪಿ ಉದಯ್ ನನ್ನು ಬಂಧಿಸಲು ಮುಂದಾಗಿದ್ದರು. ಆದರೆ ಪೊಲೀಸರ ಕೈಗೆ ಸಿಕ್ಕಿ ಬಿಳಬಾರದು ಎಂದು ಮೊಬೈಲ್ ಫೋನ್ ಕೂಡ ಬಳಸುತ್ತಿರಲಿಲ್ಲ.

ಉದಯ್ ಸಹಚರನೊಬ್ಬನ ಹಿಂದೆ ಬಿದಿದ್ದ ಪೊಲೀಸರು ಕಳ್ಳರ ಪ್ಲಾನ್ ಬಗ್ಗೆ ಮಾಹಿತಿ ಪಡೆದಿದ್ದರು. ಆರೋಪಿ ರಾತ್ರಿ ಸಮಯದಲ್ಲಿ ಕಳ್ಳತನ ಮಾಡುವ ಬಗ್ಗೆ ಸ್ಕೆಚ್ ರೂಪಿಸುತ್ತಿದ್ದ. ಬೆಳಗ್ಗಿನ ಸಮಯ 10 ಗಂಟೆಯಿಂದ 12 ಗಂಟೆ ಸಮಯದಲ್ಲಿ ಆರೋಪಿ ಕಳ್ಳತನ ಮಾಡುತ್ತಿದ್ದ. ಕಾರಣ 10 ರಿಂದ 12 ಗಂಟೆ ಸಮಯದಲ್ಲಿ ಧಾರವಾಹಿಗಳು ಮರುಪ್ರಸಾರವಾಗುವ ಸಮಯ. ರಾತ್ರಿ ಸಮಯದಲ್ಲಿ ವಿವಿಧ ಕಾರಣಗಳಿಂದ ಧಾರಾವಾಹಿ ನೋಡಲು ಆಗದೇ ಇರುವ ಮಹಿಳೆಯರು ಧಾರಾವಾಹಿ ನೋಡುವಲ್ಲಿ ಮಗ್ನರಾಗಿತ್ತಾರೆ. ಆ ಸಮಯವನ್ನೇ ಉಪಯೋಗ ಮಾಡಿಕೊಳ್ಳುತ್ತಿದ್ದ ಆರೋಪಿ ಮನೆಯ ಬಾಗಿಲು ಮುರಿದು ಕಳ್ಳತನ ಮಾಡುತ್ತಿದ್ದ.

ಕೇವಲ ಮೂರು ತಿಂಗಳ ಅವಧಿಯಲ್ಲಿ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಐದು ಕಡೆ ಸೇರಿದಂತೆ ಹಲವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ಉದಯ್ ಕೈಚಳಕ ತೋರಿಸಿದ್ದ. ಜಾಲಹಳ್ಳಿ ಪೊಲೀಸರು ಅಂತಿಮವಾಗಿ ಆರೋಪಿಯ ಸಹಚರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಉದಯ್ ಸಹಚರರಿಗೆ ತಮಿಳುನಾಡಿನ ಸೆಲಂನಿಂದ ಲ್ಯಾಂಡ್ ಲೈನ್‍ನಲ್ಲಿ ಕರೆ ಮಾಡಿದ್ದ ಮಾಹಿತಿ ಲಭಿಸಿತ್ತು. ನಂಬರ್ ಜಾಡಿ ಹಿಡಿದು ಹೋರಾಟ ಪೊಲೀಸರು ತಮಿಳುನಾಡಿನ ಸೇಲಂ ಲಾಡ್ಜ್ ನಲ್ಲಿ ಒಂದರಲ್ಲಿ ಆರೋಪಿಯನ್ನು ಬಂಧಿಸಿದ್ದರು. ಸದ್ಯ ಆರೋಪಿ ಜಾಲಹಳ್ಳಿ ಪೊಲೀಸರ ವಶದಲ್ಲಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *