ಆಪರೇಷನ್ ಕಮಲಕ್ಕೆ ಟ್ವಿಸ್ಟ್- ಬಿಎಸ್‍ವೈ ಆಸೆಗೆ ಆರ್‌ಎಸ್‌ಎಸ್‌ ಕಲ್ಲು

Public TV
1 Min Read

ಬೆಂಗಳೂರು: ಆಪರೇಷನ್ ಕಮಲದ ವಿಷಯದಲ್ಲಿ ಬಿಜೆಪಿಯಲ್ಲೇ ಮುಸುಕಿನ ಗುದ್ದಾಟ ಶುರುವಾಯ್ತಾ ಅನ್ನೋ ಪ್ರಶ್ನೆಯೊಂದು ಮೂಡಿದೆ.

ಹೌದು. ಆಪರೇಷನ್ ಕಮಲಕ್ಕೆ ಮುಂದಾದ ಬಿ.ಎಸ್ ಯಡಿಯೂರಪ್ಪಗೆ ಆರ್‌ಎಸ್‌ಎಸ್‌ ಮುಖಂಡರು ಹಾಗೂ ಕೇಂದ್ರ ಬಿಜೆಪಿ ನಾಯಕರೇ ಅಡ್ಡಗಾಲು ಹಾಕುತ್ತಿದ್ದಾರೆ. ಯಾಕೆಂದರೆ 15ಕ್ಕೂ ಹೆಚ್ಚು ಶಾಸಕರನ್ನು ಸೆಳೆದು ಆಪರೇಷನ್ ಕಮಲ ಮಾಡಿ ಸರ್ಕಾರ ಕೆಡವೋದು ಮೊದಲ ಹಂತವಾದರೆ, ಬಹುಮತ ಸಾಬೀತು ಮಾಡಿ ಸರ್ಕಾರ ರಚಿಸಿ ತಾವೇ ಮುಖ್ಯಮಂತ್ರಿ ಆಗೋದು ಯಡಿಯೂರಪ್ಪನವರ ಕನಸಾಗಿದೆ. ಆದರೆ ಬಿಎಸ್ ವೈ ಈ ಕನಸಿಗೆ ಬಿಜೆಪಿ ಕೇಂದ್ರ ನಾಯಕರು ಹಾಗೂ ಆರ್‌ಎಸ್‌ಎಸ್‌ ನಾಯಕರು ತಾತ್ಕಾಲಿಕ ಬ್ರೇಕ್ ಹಾಕಿದ್ದಾರೆ ಎನ್ನಲಾಗುತ್ತಿದೆ.

ಸರ್ಕಾರ ಕೆಡವೋದು ಓಕೆ. ಆದರೆ ಸರ್ಕಾರ ರಚಿಸೋದು ಬೇಡ ಅನ್ನೋದು ಕೇಂದ್ರ ನಾಯಕರ ವಾದವಾಗಿದೆ. ಸರ್ಕಾರ ಕೆಡವಿ ರಾಷ್ಟ್ರಪತಿ ಆಳ್ವಿಕೆ ಹೇರಿ ನವೆಂಬರ್ ಗೆ ಚುನಾವಣೆ ಎದುರಿಸೋದು ಕೇಂದ್ರ ನಾಯಕರ ಪ್ಲಾನ್ ಅನ್ನಲಾಗುತ್ತಿದೆ. ಆದರೆ ಜ್ಯೋತಿಷ್ಯದ ಪ್ರಕಾರ ನವೆಂಬರ್ ನಂತರ ಯಡಿಯೂರಪ್ಪನವರಿಗೆ ರಾಜಯೋಗವಿಲ್ಲ. ಆದ್ದರಿಂದ ಈಗಲೇ ಸರ್ಕಾರ ರಚಿಸುವ ಕನಸು ಯಡಿಯೂರಪ್ಪ ಅವರದ್ದಾಗಿದೆ ಎಂದು ಮೂಲಗಳು ತಿಳಿಸಿವೆ.

ಇತ್ತ ಚುನಾವಣೆ ಎದುರಿಸಿ ಪಕ್ಷ ಅಧಿಕಾರಕ್ಕೆ ಬಂದರೆ ತಮ್ಮನ್ನ ಸಿಎಂ ಹುದ್ದೆಯಿಂದ ದೂರ ತಳ್ಳಬಹುದು ಎಂಬ ಆತಂಕ ಯಡಿಯೂರಪ್ಪನವರನ್ನ ಕಾಡುತ್ತಿದೆಯಂತೆ. ಬಿಜೆಪಿ ನಾಯಕರು ಕೂಡ ಇದೇ ಯೋಚನೆಯಲ್ಲಿದ್ದಾರಾ ಎಂಬುವುದು ಯಡಿಯೂರಪ್ಪನವರ ಆಪ್ತ ಬಣದ ಆತಂಕವಾಗಿದೆಯಂತೆ.

ದೇಶದಲ್ಲಿ ಈಗಿರುವ ಮೋದಿ ಅಲೆಯಲ್ಲಿ ಚುನಾವಣೆ ಎದುರಿಸಿದರೆ ಯಾರನ್ನೂ ಸಿಎಂ ಅಭ್ಯರ್ಥಿ ಎಂದು ಬಿಂಬಿಸದರಿರಲು ಬಿಜೆಪಿ ನಿರ್ಧರಿಸಿದೆ. ಹಾಗಾದರೆ ಸಂಪೂರ್ಣ ಬಹುಮತದಿಂದ ಬಿಜೆಪಿ ಅಧಿಕಾರಕ್ಕೆ ಬಂದರೂ ಯಡಿಯೂರಪ್ಪಗೆ ಸಿಗಬೇಕಾದ ಸಿಎಂ ಖುರ್ಚಿ ಬೇರೆಯವರ ಪಾಲಾಗಲಿದೆ ಎನ್ನಲಾಗುತ್ತಿದೆ.

ಹೀಗೆ ಒಂದು ಕಡೆ ಜಾತಕದಲ್ಲಿ ನವೆಂಬರ್ ನಂತರ ರಾಜಯೋಗ ಇಲ್ಲ, ಇನ್ನೊಂದೆಡೆ ಚುನಾವಣೆ ನಡೆದರೆ ಸಿಎಂ ಸ್ಥಾನದ ಗ್ಯಾರಂಟಿಯು ಇಲ್ಲ. ಇದರಿಂದ ಕಂಗಾಲಾದ ಬಿಎಸ್ ವೈ ಶತಾಯಗತಾಯ ಜೂನ್ ನಲ್ಲಿ ಆಪರೇಷನ್ ಮಾಡಿ ಮುಗಿಸಿ ಸರ್ಕಾರ ರಚಿಸುವ ತವಕದಲ್ಲಿದ್ದಾರೆ. ಆದರೆ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ಸಿಗದೇ ಪೇಚಾಡುವಂತ ಸ್ಥಿತಿ ಯಡಿಯೂರಪ್ಪರಿಗೆ ಎದುರಾಗಿದೆ.

Share This Article
Leave a Comment

Leave a Reply

Your email address will not be published. Required fields are marked *