ಪ್ರಧಾನಿ ಮೋದಿ ವಿರುದ್ಧ ಜೆಡಿಎಸ್ ಆರ್ಥಿಕ, ರಾಜಕೀಯ ನಿರ್ಣಯ ಅಸ್ತ್ರ

Public TV
2 Min Read

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಜಾತ್ಯಾತೀತ ಜನತಾದಳ ಹೊಸ ಅಸ್ತ್ರದ ಮೂಲಕ ಹೋರಾಟಕ್ಕೆ ಧುಮುಕಲು ನಿರ್ಧಾರ ಮಾಡಿದೆ. ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮೋದಿ ವಿರುದ್ಧ ಮಹತ್ವದ ಆರ್ಥಿಕ ಮತ್ತು ರಾಜಕೀಯ ನಿರ್ಣಯಗಳನ್ನ ತೆಗೆದುಕೊಂಡು, ಇದೇ ವಿಷಯಗಳ ಮೇಲೆ ಹೋರಾಟಕ್ಕೆ ರೂಪುರೇಷೆ ಸಿದ್ಧಮಾಡಿಕೊಂಡಿದೆ.

ಬೆಂಗಳೂರಿನಲ್ಲಿ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರ ನೇತೃತ್ವದಲ್ಲಿ ಎರಡು ದಿನಗಳ ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯುತ್ತಿದೆ. ಕಾರ್ಯಕಾರಿಣಿಯಲ್ಲಿ ತಮಿಳುನಾಡು, ಕೇರಳ, ಅರುಣಾಚಲ ಪ್ರದೇಶ ಸೇರಿದಂತೆ ಹಲವು ರಾಜ್ಯಗಳ ಜೆಡಿಎಸ್ ನಾಯಕರು ಭಾಗವಹಿಸಿದ್ದಾರೆ. ಈ ಸಭೆಯಲ್ಲಿ ಮೋದಿ ವಿರುದ್ಧ ನಿರ್ಣಯಗಳನ್ನು ಅಂಗೀಕಾರ ಮಾಡಿ, ಹೋರಾಟ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಮೋದಿ ವಿರುದ್ಧದ ಪ್ರಮುಖ ನಿರ್ಣಯಗಳು.
ಆರ್ಥಿಕ ನಿರ್ಣಯ:
ದೇಶದ ಆರ್ಥಿಕ ವ್ಯವಸ್ಥೆ ಕುಸಿದಿದೆ. ನರೇಂದ್ರ ಮೋದಿ ಸರ್ಕಾರದ ನೀತಿ ನಿಯಮಗಳೇ ಆರ್ಥಿಕತೆ ಬೀಳಲು ಕಾರಣ ಅನ್ನೋದು ಜೆಡಿಎಸ್ ಆರೋಪ. ದೇಶದ ಜಿಡಿಪಿ 42 ವರ್ಷಗಳಲ್ಲಿ ಅತಿ ಕಡಿಮೆಗೆ ಕುಸಿದಿದೆ. ನೋಟ್ ಬ್ಯಾನ್‍ನಿಂದ ಜನರಿಗೆ ಸಮಸ್ಯೆ ಎದುರಾಗಿದೆ. ಜಿಎಸ್‍ಟಿ ಸರಿಯಾಗಿ ಜಾರಿಯಾಗದೆ ವ್ಯಾಪಾರ ವಲಯಕ್ಕೆ ಸಂಕಷ್ಟ ತಂದಿದೆ ಅನ್ನೋದು ಜೆಡಿಎಸ್ ಆರೋಪವಾಗಿದೆ.

ದೇಶದಲ್ಲಿ ಆರ್ಥಿಕತೆ ಕುಸಿತದಿಂದ ಉದ್ಯೋಗ ಸೃಷ್ಟಿ ಆಗ್ತಿಲ್ಲ. ಮಧ್ಯಮ ವರ್ಗಗಳ ಮೇಲೆ ಹೊರೆ ಆಗುತ್ತಿದೆ. ಇದೆಲ್ಲದಕ್ಕೂ ಕಾರಣ ಕೇಂದ್ರ ಸರ್ಕಾರದ ನೀತಿಗಳು ಅಂತ ನಿರ್ಣಯ ಮಂಡಿಸಿವೆ. ಅಷ್ಟೇ ಅಲ್ಲ ದೇಶದ ಆರ್ಥಿಕತೆ ಅಭಿವೃದ್ಧಿಗೆ ಕೇಂದ್ರ ನೀತಿ ರೂಪಿಸಬೇಕು. ಕಾರ್ಮಿಕ, ಕೈಗಾರಿಕಾ, ಕೃಷಿ ಕಲ್ಯಾಣ ಅಭಿವೃದ್ಧಿಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಜಿಎಸ್ ಟಿ ಸಮರ್ಪಕವಾಗಿ ಜಾರಿಗೆ ತಂದು, ಬಾಕಿ ಇರೋ ಹಣವನ್ನ ರಾಜ್ಯ ಸರ್ಕಾರಗಳಿಗೆ ಬಿಡುಗಡೆ ಮಾಡಬೇಕು ಅಂತ ಕೇಂದ್ರ ಸರ್ಕಾರಕ್ಕೆ ಜೆಡಿಎಸ್ ಒತ್ತಾಯ ಮಾಡಿದೆ.

ರಾಜಕೀಯ ನಿರ್ಣಯ:
ಕೇಂದ್ರ ಸರ್ಕಾರ ಜಾರಿಗೆ ತಂದಿರೋ ಸಿಎಎ ಜನ ವಿರೋಧಿ ಹಾಗೂ ದೇಶ ವಿರೋಧ. ದೇಶಾದ್ಯಂತ ಸಿಎಎ ವಿರುದ್ಧ ಹೋರಾಟಗಳು ನಡೆಯುತ್ತಿವೆ. CAA, NRC, NPR ನಿಂದ ದೇಶದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ ಅಂತ ರಾಜಕೀಯ ನಿರ್ಣಯವನ್ನ ಜೆಡಿಎಸ್ ತೆಗೆಕೊಂಡಿದೆ. ಅಲ್ಲದೆ ಕೂಡಲೇ CAA, NRC, NRP ಕೇಂದ್ರ ಸರ್ಕಾರ ಹಿಂಪಡೆಯಬೇಕು. ಸಿಎಎ ಹೋರಾಟಕ್ಕೆ ಪ್ರಾದೇಶಿಕ ಪಕ್ಷಗಳು, ಜಾತ್ಯಾತೀತ ಶಕ್ತಿಗಳು ಒಂದಾಗಿ ಹೋರಾಟ ಮಾಡಬೇಕು. ಮೋದಿ ಸರ್ಕಾರ ಕೂಡಲೇ ಜನಾಭಿಪ್ರಾಯಕ್ಕೆ ಬೆಲೆಕೊಟ್ಟು ಕಾಯ್ದೆ ವಾಪಸ್ ಪಡೆಯಬೇಕು ಅಂತ ಜೆಡಿಎಸ್ ಒತ್ತಾಯ ಮಾಡಿದೆ. ಇಷ್ಟೇ ಅಲ್ಲ ಇದೇ ವಿಚಾರ ಮುಂದಿಟ್ಟುಕೊಂಡು ದೆಹಲಿಯಲ್ಲೂ ಹೋರಾಟ ಮಾಡಲು ಜೆಡಿಎಸ್ ನಿರ್ಣಯ ತೆಗೆದುಕೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *