ಫೆ.28 ರಿಂದ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯ ಟೋಲ್ ಸಂಗ್ರಹ ಆರಂಭ – ಯಾವ ವಾಹನಕ್ಕೆ ಎಷ್ಟು ದರ?

Public TV
3 Min Read

ರಾಮನಗರ: ಫೆ.28ರಿಂದ ಮೈಸೂರು-ಬೆಂಗಳೂರು (Bengaluru-Mysuru Expressway) ದಶಪಥ ಹೆದ್ದಾರಿಯ ಮೊದಲ ಟೋಲ್ ಆರಂಭವಾಗಲಿದೆ. ಬೆಂಗಳೂರು-ನಿಡಘಟ್ಟ ನಡುವಿನ ಶೇಷಗಿರಿಹಳ್ಳಿಯ ಟೋಲ್ ಕಾರ್ಯಾಚರಣೆ ಮಂಗಳವಾರದಿಂದ ಶುರುವಾಗಲಿದೆ. ದಶಪಥ ಹೆದ್ದಾರಿಯ ಮೊದಲ ಹಂತದ 55.63 ಕಿ.ಮೀ ರಸ್ತೆಗೆ ಶುಲ್ಕ ವಸೂಲಿ ಕುರಿತು ಕೇಂದ್ರ ಹೆದ್ದಾರಿ ಪ್ರಾಧಿಕಾರದಿಂದ ಪ್ರಕಟಣೆ ಹೊರಡಿಸಿದೆ.

ವಿವಿಧ ಮಾದರಿಯ ವಾಹನಗಳಿಗೆ ಪ್ರತ್ಯೇಕ ದರ ನಿಗದಿ ಪಡಿಸಿರುವ ಹೆದ್ದಾರಿ ಪ್ರಾಧಿಕಾರ ಸರ್ವೀಸ್ ರಸ್ತೆ ಹೊರತುಪಡಿಸಿ, ಉಳಿದ ಆರು‌ ಪಥಗಳಿಗೆ ಶುಲ್ಕ ನಿಗದಿ ಮಾಡಿದೆ. ರಾಜಧಾನಿ ಬೆಂಗಳೂರು ಹಾಗೂ ಸಾಂಸ್ಕೃತಿಕ ನಗರಿ ಮೈಸೂರು ನಡುವೆ ಸಂಚಾರ ಸಮಯವನ್ನು ಕಡಿಮೆ ಮಾಡುವ ಸಲುವಾಗಿ ಸರ್ಕಾರ ನೂತನ ಎಕ್ಸ್‌ಪ್ರೆಸ್ ವೇ ನಿರ್ಮಾಣಕ್ಕೆ ಮುಂದಾಗಿತ್ತು. ಎರಡು ಹಂತದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಈ ಹೆದ್ದಾರಿಯ ಮೊದಲ ಹಂತದ ಕಾಮಗಾರಿಯು ಬಹುತೇಕ ಪೂರ್ಣಗೊಂಡಿದೆ. ಎರಡನೆ ಹಂತದ ಕಾಮಗಾರಿಯು ಚಾಲ್ತಿಯಲ್ಲಿದ್ದು, ಮುಕ್ತಾಯದ ಹಂತ ತಲುಪಿದೆ. ಎರಡು ಹಂತದ ಕಾಮಗಾರಿ ಮುಗಿಯುವ ಮುನ್ನವೇ ಸರ್ಕಾರ ಮೊದಲ ಹಂತದ ಸಂಚಾರಕ್ಕೆ ಟೋಲ್ ದರ ನಿಗದಿ ಪಡಿಸಿದೆ. ಫೆ.28ರ ಮಂಗಳವಾರದಿಂದಲೇ ಈ ನಿಯಮ ಜಾರಿಗೆ ಬರಲಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಅಪಾರ್ಟ್ಮೆಂಟ್‌ನ 10ನೇ ಮಹಡಿಯಿಂದ ಬಿದ್ದು ಯುವತಿ ಆತ್ಮಹತ್ಯೆ

ಪ್ರಧಾನಿ ನರೇಂದ್ರ ಮೋದಿ ಅವರು ಈ ತಿಂಗಳ 11ರಂದು ನೂತನ ಹೆದ್ದಾರಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಹಾಗಾಗಿ ಈ ವೇಳೆಯೇ ಎರಡನೇ ಹಂತದ ಕಾಮಗಾರಿಯು ಮುಕ್ತವಾಗಲಿದೆ ಎಂದು ಹೇಳಲಾಗುತ್ತಿದೆ.

ಹೀಗಿರಲಿದೆ ಟೋಲ್ ದರ!
ದಶಪಥ ಹೆದ್ದಾರಿಯ ಮೊದಲ ಹಂತದ 55.63 ಕಿ.ಮೀ ರಸ್ತೆಗೆ ಶುಲ್ಕ ವಸೂಲಿ ಮಾಡಲು ನಿರ್ಧಾರ ಮಾಡಲಾಗಿದೆ. ಹಾಗಾಗಿ ವಿವಿಧ ಮಾದರಿಯ ವಾಹನಗಳಿಗೆ ಪ್ರತ್ಯೇಕ ದರ ನಿಗದಿಪಡಿಸಲಾಗಿದೆ. ಸರ್ವೀಸ್ ರಸ್ತೆ ಹೊರತುಪಡಿಸಿ, ಉಳಿದ ಆರು ಪಥಗಳಿಗೆ ಶುಲ್ಕ ಅನ್ವಯವಾಗಲಿದೆ. ಇದನ್ನೂ ಓದಿ: ಕೋರ್ಟ್ ಎಚ್ಚರಿಕೆ ಬಳಿಕವೂ ಸಿಂಧೂರಿ ವಿರುದ್ಧ ಗುಡುಗಿದ ರೂಪಾ

ಕಾರು, ಜೀಪು, ವ್ಯಾನುಗಳಿಗೆ ಏಕಮುಖ ಸಂಚಾರಕ್ಕೆ 135 ರೂ. ನಿಗದಿ ಪಡಿಸಲಾಗಿದೆ. ಅದೇ ದಿನ ಮರು ಸಂಚಾರಕ್ಕೆ 205 ರೂ., ಸ್ಥಳೀಯ ವಾಹನಗಳಿಗೆ 70 ರೂ. ಒಂದು ತಿಂಗಳ 50 ಬಾರಿ ಏಕಮುಖ ಸಂಚಾರದ ಪಾಸ್‌ಗೆ 4,525 ರೂ. ದರ ನಿಗದಿ ಮಾಡಲಾಗಿದೆ.

ಲಘು ವಾಣಿಜ್ಯ ವಾಹನಗಳು ಮತ್ತು ಲಘು ಸರಕು ವಾಹನಗಳ ಮಿನಿ ಬಸ್‌ಗಳಿಗೆ ಏಕಮುಖ ಸಂಚಾರಕ್ಕೆ 220 ರೂ. ನಿಗದಿ ಪಡಿಸಲಾಗಿದ್ದು, ಅದೇ ದಿನ ಮರು ಸಂಚಾರಕ್ಕೆ 320 ರೂ., ಸ್ಥಳೀಯ ವಾಹನಗಳಿಗೆ 110 ರೂ. ಹಾಗೂ ಒಂದು ತಿಂಗಳ 50 ಬಾರಿ ಏಕಮುಖ ಸಂಚಾರದ ಪಾಸ್‌ಗೆ 7,315 ರೂ. ದರ ನಿಗದಿ. ಭಾರಿ ನಿರ್ಮಾಣ ಯಂತ್ರ, ಭೂ ಅಗೆತ ಸಾಧನ, ಬಹು ಆಕ್ಸೆಲ್ ವಾಹನ (6ರಿಂದ 8 ಆಕ್ಸೆಲ್) ಏಕಮುಖ ಸಂಚಾರಕ್ಕೆ 720 ರೂ. ನಿಗದಿ ಮಾಡಲಾಗಿದೆ. ಜೊತೆಗೆ ಅದೇ ದಿನ ಮರು ಸಂಚಾರಕ್ಕೆ 1,080 ರೂ. ಸ್ಥಳೀಯ ವಾಹನಗಳಿಗೆ 360ರೂ. ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್‌ಗೆ 24,030 ರೂ. ದರ ನಿಗದಿಗೊಳಿಸಲಾಗಿದೆ.

ಅತೀ ಗಾತ್ರದ ವಾಹನಗಳು (7ರಿಂದ ಹೆಚ್ಚಿನ ಆಕ್ಸೆಲ್) ಏಕಮುಖ ಸಂಚಾರಕ್ಕೆ 880 ರೂ. ಅದೇ ದಿನ ಮರು ಸಂಚಾರಕ್ಕೆ 1,315 ರೂ., ಸ್ಥಳೀಯ ವಾಹನಗಳಿಗೆ 440 ರೂ. ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್‌ಗೆ 29255ರೂ ದರ ನಿಗದಿ ಮಾಡಲಾಗಿದೆ. ಸರ್ಕಾರ ನಿಗದಿ ಪಡಿಸಿರುವ ಟೋಲ್ ದರಕ್ಕೆ ಜನಸಾಮಾನ್ಯರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ದಶಪಥ ರಸ್ತೆಯ ಸಂಚಾರವೂ ದುಬಾರಿಯಾಗಿರುವ ಕುರಿತು ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಿಗದಿ ಮಾಡಿರುವ ಟೋಲ್ ದರ ಕಡಿಮೆ ಮಾಡಬೇಕೆಂಬ ಆಗ್ರಹವೂ ಕೇಳಿ ಬರುತ್ತಿದೆ. ಇದನ್ನೂ ಓದಿ: ಉತ್ತರ ಪ್ರದೇಶದ ಸಿಎಂ ಮದುವೆಯಾಗಿದ್ರೆ ಬೆಲೆ ಏರಿಕೆ ಆಗುತ್ತಿರಲಿಲ್ಲ – ಯೋಗಿ ಆದಿತ್ಯನಾಥ್ ವಿರುದ್ಧ ಇಬ್ರಾಹಿಂ ವ್ಯಂಗ್ಯ

Share This Article
Leave a Comment

Leave a Reply

Your email address will not be published. Required fields are marked *