ಸಹಜ ಸ್ಥಿತಿಗೆ ಮರಳಿದ ದಶಪಥ ಹೈವೇ ಟೋಲ್

Public TV
2 Min Read

ಬೆಂಗಳೂರು: ಬೆಂಗಳೂರು -ಮೈಸೂರು ದಶಪಥ ಹೆದ್ದಾರಿಯಲ್ಲಿ ಟೋಲ್‌ ಸಂಗ್ರಹಕ್ಕೆ ಮಂಗಳವಾರ ವಿವಿಧ ಸಂಘಟನೆಗಳಿಂದ ರಸ್ತೆ ತಡೆದು ಭಾರೀ ವಿರೋಧ ವ್ಯಕ್ತವಾಗಿದ್ದ ಬೆನ್ನಲ್ಲೇ ಇದೀಗ ಸಹಜ ಸ್ಥಿತಿಗೆ ತಲುಪಿದೆ.

ಭಾರೀ ವಿರೋಧದ ನಡುವೆಯೂ ಪಟ್ಟು ಬಿಡದ ಹೆದ್ದಾರಿ ಪ್ರಾಧಿಕಾರ ಮಂಗಳವಾರದಿಂದ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯ (Bengaluru Mysuru Expressway) ಟೋಲ್ (Toll) ಸಂಗ್ರಹ ಆರಂಭಿಸಿತ್ತು. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಮೊದಲ ಹಂತದ 55.63 ಕಿ.ಮೀ ರಸ್ತೆಯ ಟೋಲ್ ವಸೂಲಾತಿ ಪ್ರಕ್ರಿಯೆ ಮಂಗಳವಾರದಿಂದ ಪ್ರಾರಂಭವಾಗಿದೆ.

ಬಿಡದಿ ಬಳಿಯ ಕಣಮಿಣಕಿ ಗ್ರಾಮ ಹಾಗೂ ಶೇಷಗಿರಿಹಳ್ಳಿ ಬಳಿಯ ಟೋಲ್ ಕಾರ್ಯಾಚರಣೆ ಆರಂಭಿಸಿ, ವಿವಿಧ ಬಗೆಯ ವಾಹನಗಳಿಗೆ ಪ್ರತ್ಯೇಕ ದರ ನಿಗದಿ ಮಾಡಿ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ.  ಆದರೆ  ಟೋಲ್ ಆರಂಭಕ್ಕೆ ವಿವಿಧ ಕನ್ನಡಪರ ಸಂಘಟನೆಗಳೂ ಸೇರಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ (Protest) ನಡೆಸಿ ಆಕ್ರೋಶ ಹೊರಹಾಕಿತ್ತು.  ಸರಿಯಾದ ಮೂಲಭೂತ ಸೌಕರ್ಯಗಳನ್ನು ನೀಡದೇ ದುಬಾರಿ ಶುಲ್ಕ ವಸೂಲಿ ಮಾಡುತ್ತಿರುವ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಬಿಡದಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಶೇಷಗಿರಿಹಳ್ಳಿ ಟೋಲ್ ಬಳಿ ರಸ್ತೆ ತಡೆಗೆ ಮುಂದಾಗಿದ್ದರು. ಈ ವೇಳೆ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಆದರೆ ಇಂದು ಸದ್ಯ ಟೋಲ್ ಬಳಿ ಶಾಂತ ವಾತಾವರಣದ ಪರಿಸ್ಥಿತಿಯಿದೆ. ಮುನ್ನೆಚ್ಚರಿಕೆಯಾಗಿ ಕೆಲ ಪೊಲೀಸ್ ಸಿಬ್ಬಂದಿಯನ್ನು ಟೋಲ್‌ ಬಳಿ ನಿಯೋಜನೆ ಮಾಡಲಾಗಿದೆ. ಮಂಗಳವಾರ ಉಂಟಾಗಿದ್ದ ಕೆಲವು ತಾಂತ್ರಿಕ ಸಮಸ್ಯೆಗಳನ್ನು ಟೋಲ್ ಸಿಬ್ಬಂದಿ ಸರಿಪಡಿಸಿಕೊಂಡಿದ್ದಾರೆ. ಇತ್ತ ದ್ವಿಚಕ್ರ ವಾಹನ ಸವಾರರಿಗೂ ಎಲಿವೇಟೆಡ್ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಟೋಲ್ ಪಾವತಿ ಮಾಡದೇ ಸಂಚಾರಕ್ಕೆ ಅನುವು ನೀಡಿದ್ದಾರೆ. ಟೋಲ್‌ನ ಒಂದು ಲೇನ್‌ನಲ್ಲಿ ಬೈಕ್ ಸವಾರರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ಫಸ್ಟ್‌ ಟೈಂ ನೇರ ಮುಖಾಮುಖಿ – ಅಮೆರಿಕ ಡ್ರೋನ್‍ಗೆ ರಷ್ಯಾದ ಯುದ್ಧ ವಿಮಾನ ಡಿಕ್ಕಿ

ಈ ಹಿಂದೆ ಎನ್‌ಹೆಚ್ಐ ಎಲಿವೇಟೆಡ್ ರಸ್ತೆಯಲ್ಲಿ ಬೈಕ್ ಸವಾರರ ಎಂಟ್ರಿಗೆ ನಿರ್ಬಂಧ ವಿಧಿಸಿತ್ತು. ಸದ್ಯಕ್ಕೆ ಸರ್ವಿಸ್ ರೋಡ್ ಕಾಮಗಾರಿ ಸಂಪೂರ್ಣ ಮುಕ್ತಾಯವಾಗದ ಹಿನ್ನೆಲೆಯಲ್ಲಿ ಎಲಿವೇಟೆಡ್ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಪ್ರಯಾಣಿಕರಿಗೆ ಟಿಕೆಟ್ ದರ ಏರಿಕೆ; ಯಾವ ಬಸ್‌ನಲ್ಲಿ ಹೋದ್ರೆ ಎಷ್ಟು?

Share This Article
Leave a Comment

Leave a Reply

Your email address will not be published. Required fields are marked *