ಬಚ್ಚೇಗೌಡರು ಒಪ್ಪಿಕೊಂಡ ಮೇಲೆ ನಾನು ರಾಜೀನಾಮೆ ನೀಡಿದೆ – ಎಂಟಿಬಿ ಕಿಡಿ

Public TV
1 Min Read

– ಶರತ್ ಕಾಂಗ್ರೆಸ್ ಜೊತೆ ಒಳಒಪ್ಪಂದ ಮಾಡಿಕೊಂಡಿದ್ದಾರೆ

ಬೆಂಗಳೂರು: ಹೈವೋಲ್ಟೆಜ್ ಕ್ಷೇತ್ರ ಎಂದೇ ಬಿಂಬಿತವಾಗಿರೋ ಬೆಂಗಳೂರು ಗ್ರಾಮಾಂತರ ಹೊಸಕೋಟೆಯಲ್ಲಿ ಅನರ್ಹ ಶಾಸಕ ಎಂಟಿಬಿ ಹಾಗೂ ಸಂಸದ ಬಚ್ಚೇಗೌಡರ ನಡುವೆ ವಾರ್ ಶುರುವಾಗಿದೆ. ಸಂಸದ ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ ಪಕ್ಷೇತರರಾಗಿ ಇದೇ 15 ರಂದು ನಾಮಪತ್ರ ಸಲ್ಲಿಕೆ ಮಾಡಲು ನಿರ್ಧಾರ ಮಾಡಿದ್ದಾರೆ.

ಶರತ್ ಕಣಕ್ಕಿಳಿಯೋದು ಖಚಿತವಾಗುತ್ತಿದ್ದಂತೆ ಎಂಟಿಬಿ ನಾಗರಾಜ್ ಸಂಸದ ಬಚ್ಚೇಗೌಡರ ವಿರುದ್ದ ಕಿಡಿಕಾರಿದ್ದಾರೆ. ಎಂಟಿಬಿ ಯಡಿಯೂರಪ್ಪನವರ ಸಮ್ಮುಖದಲ್ಲಿ ಸಂಸದ ಬಿ.ಎನ್ ಬಚ್ಚೇಗೌಡರು ಒಪ್ಪಿಕೊಂಡ ಮೇಲೆ ನಾನು ರಾಜೀನಾಮೆ ನೀಡಿದ್ದಾಗಿ ಎಂಟಿಬಿ ಒಪ್ಪಂದವನ್ನು ಬಹಿರಂಗ ಪಡಿಸಿದ್ದಾರೆ. ಹೊಸಕೋಟೆ ಕ್ಷೇತ್ರದ ಮುಖಂಡರ ಮನೆಯೊಂದರಲ್ಲಿ ಬಹಿರಂಗವಾಗಿ ಸತ್ಯವನ್ನು ಹೊರಹಾಕಿದ್ದಾರೆ.

ಬಿಜೆಪಿಗೆ ಬರಲು ಒಪ್ಪಿಕೊಂಡ ಬಚ್ಚೇಗೌಡ ಇದೀಗ ಉಲ್ಟಾ ಹೊಡೆಯುತ್ತಿದ್ದು, ಶರತ್‍ಗೆ ಎಂಎಲ್‍ಸಿ ದೊಡ್ಡಬಳ್ಳಾಪುರ ಬಿಜೆಪಿ ಟಿಕೆಟ್ ಅಥವಾ ಮುಂದಿನ ಎಂಪಿ ಚುನಾವಣೆಗೆ ಟಿಕೆಟ್ ನಿಡೋದಾಗಿ ಬಿಎಸ್‍ವೈ ಭರವಸೆ ನೀಡಿದ್ದರು ಎಂದು ಎಂಟಿಬಿ ಹೇಳಿದ್ದಾರೆ. ಜೊತೆಗೆ ಬಿಜೆಪಿ ಟಿಕೆಟ್ ಬದಲಾಗಿ ಗೃಹಮಂಡಳಿ ಅಧ್ಯಕ್ಷ ಸ್ಥಾನ ನೀಡಿದರೂ ತಿರಸ್ಕರಿಸಿದ ಶರತ್ ಬಚ್ಚೇಗೌಡ ಕಾಂಗ್ರೆಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆಂದು ಆಕ್ರೋಶವನ್ನು ಹೊರಹಾಕಿದ್ದಾರೆ.

ಒಂದು ಶರತ್ ಗೆಲ್ಲಬೇಕು, ಇಲ್ಲವೆ ಕಾಂಗ್ರೆಸ್ ಗೆಲ್ಲಬೇಕು, ಯಾವುದೇ ಕಾರಣಕ್ಕೂ ಎಂಟಿಬಿ ನಾಗರಾಜ್ ಗೆಲ್ಲಲು ಬಿಡಬಾರದೆಂದು ಒಳತಂತ್ರವನ್ನು ರೂಪಿಸಿದ್ದಾರೆಂದು ಎಂಟಿಬಿ ಆರೋಪಿಸಿದ್ದಾರೆ. ಈ ಮೊದಲೇ ಮಾಡಿಕೊಂಡ ಒಪ್ಪಂದಂತೆ ನಾನು ಬಚ್ಚೇಗೌಡ, ಅವರ ಪುತ್ರ ಶರತ್ ಮೂವರು ಸೇರಿ ಹೊಸಕೋಟೆ ತಾಲೂಕನ್ನು ಅಭಿವೃದ್ಧಿ ಪಡಿಸುವುದನ್ನು ಬಿಟ್ಟು ಅಪ್ಪ ಮಗ ಹೈಡ್ರಾಮಾ ಮಾಡುತ್ತಿದ್ದಾರೆ ಎಂದು ಎಂಟಿಬಿ ವಾಗ್ದಾಳಿ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *