ಪ್ರಿಯಕರನೊಂದಿಗೆ ಮೋಜು ಮಸ್ತಿಗಾಗಿ ತಮ್ಮನ ಹೆಸರಲ್ಲಿ ಸಾಲ

Public TV
2 Min Read

– ತಾಯಿಯನ್ನು ಕೊಂದ ಮಗಳು ಬೆಂಗಳೂರಿಗೆ
– ಅಂಡಮಾನ್ ನಿಂದ ಎಳೆದುತಂದ ಪೊಲೀಸರು

ಬೆಂಗಳೂರು: ತನ್ನ ಹೆತ್ತ ತಾಯಿಯನ್ನು ಚಾಕುವಿನಿಂದ ಇರಿದು ಕೊಂದು ಪೈಶಾಚಿಕ ಕೃತ್ಯ ಎಸಗಿ ಪ್ರಿಯಕರನ ಜೊತೆ ಅಂಡಮಾನ್ ಗೆ ಹೋಗಿ ತಲೆ ಮರಿಸಿಕೊಂಡಿದ್ದ ಆರೋಪಿಗಳನ್ನು ಬಂಧನ ಮಾಡಿದ್ದ ಪೋಲಿಸರು ಇಂದು ಅಂಡಮಾನ್ ನಿಂದ ಕೆ.ಆರ್ ಪುರಂ ಪೋಲಿಸ್ ಠಾಣೆಗೆ ಕರೆತಂದಿದ್ದಾರೆ.

ಕೆ ಆರ್ ಪುರಂ ನಿವಾಸಿಯಾದ ಅಮೃತಾ ಕಳೆದ ಫೆಬ್ರವರಿ 1 ನೇ ತಾರೀಖಿನಂದು ತನ್ನ ಹೆತ್ತ ತಾಯಿಯನ್ನು ಕೊಲೆ ಮಾಡಿ ಪ್ರಿಯಕರ ಶ್ರೀಧರ್ ರಾವ್ ಜೊತೆ ಅಂಡಮಾನ್ ಗೆ ಹೋಗಿ ತಲೆಮಾರಿಸಿಕೊಂಡಿದ್ದಳು. ಈ ಬಗ್ಗೆ ಸ್ಥಳಕ್ಕೆ ಭೇಟಿ ಪ್ರಕರಣ ದಾಖಲು ಮಾಡಿಕೊಂಡು, ವಿಶೇಷ ತಂಡ ರಚನೆ ಮಾಡಿ ತನಿಖೆ ಆರಂಭಿಸಿದ ಕೆ.ಆರ್ ಪುರಂನ ಡಿಸಿಪಿ ಅನುಚೇತ್ ಹಾಗೂ ಇನ್ಸ್ ಪೆಕ್ಟರ್ ಅಂಬರೀಶ್ ನೇತೃತ್ವದ ತಂಡ ಆರೋಪಿಗಳನ್ನು ಬಂಧನ ಮಾಡಿತ್ತು.

ಬಂಧನದ ಬಳಿಕ ಅಲ್ಲಿನ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ಇಂದು ಕೆ.ಆರ್ ಪುರಂ ಪೋಲಿಸ್ ಠಾಣೆಗೆ ಕರೆತಂದು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದು, ವಿಚಾರಣೆ ವೇಳೆ ಆರೋಪಿ ಅಮೃತಾ ಸ್ಫೋಟಕ ಮಾಹಿತಿಗಳನ್ನು ಒಂದೊಂದಾಗಿಯೇ ಬಿಚ್ಚಿಟ್ಟಿದ್ದಾಳೆ. ತಾಯಿ ಹಾಗೂ ಸಹೋದರನ ಕೊಲೆಗೆ ಕಳೆದ ನಾಲ್ಕು ತಿಂಗಳ ಹಿಂದೆಯೇ ಸ್ಕೆಚ್ ಹಾಕಲಾಗಿತ್ತು ಎಂದು ತನಿಖೆ ವೇಳೆ ಬಾಯ್ಬಿಟ್ಟಿದ್ದಾಳೆ.

ತಮ್ಮನ ಹೆಸರಲ್ಲಿ ಸಾಲ:
ಜೊತೆಗೆ ತನ್ನ ಪ್ರಿಯಕರನೊಂದಿಗೆ ಮಜಾ ಮಾಡೋದಕ್ಕಾಗಿ ತಮ್ಮನ ಹೆಸರಿನಲ್ಲಿ ಬರೋಬ್ಬರಿ 15 ಲಕ್ಷ ರೂಪಾಯಿ ಸಾಲ ಮಾಡಿದ್ದಾಳೆ. ತಮ್ಮ ಹರೀಶ್‍ನ ಹೆಸರಿನಲ್ಲಿ ಅಮೃತಾ ಸಾಲ ಮಾಡಿಕೊಂಡಿದ್ದಳು. ಜೊತೆಗೆ ಪ್ರಿಯಕರ ಶ್ರೀಧರನಿಗೆ ಲಕ್ಷಾಂತರ ರೂಪಾರಿ ಬೈಕ್ ಕೊಡಿಸಿದ್ದಳು. ಅಲ್ಲದೇ ಐಷರಾಮಿ ಜೀವನ ಮಾಡುವುದು ಈ ಇಬ್ಬರ ಪ್ರಮುಖ ಉದ್ದೇಶ ಆಗಿತ್ತು. ಇದಕ್ಕಾಗಿ ಸಿಕ್ಕ ಸಿಕ್ಕ ಬ್ಯಾಂಕ್‍ಗಳಿಂದ ಸಾಲ ಮಾಡಿದ್ದಾಳೆ. ತಮ್ಮನಿಗೆ ಗೊತ್ತಾಗದಂತೆ ಆತ ಸಹಿಯನ್ನು ಪಡೆಯುತ್ತಿದ್ದಳು. ಕೆಲಮೊಮ್ಮೆ ತಮ್ಮ ಹರೀಶ್‍ನಿಗೆ ಸುಳ್ಳು ಹೇಳಿ ಬ್ಯಾಂಕ್‍ಗೆ ಕರೆದುಕೊಂಡು ಹೋಗಿದ್ದಾಳೆ. ಆದರೆ ಅಕ್ಕ ನನ್ನ ಹೆಸರಿನಲ್ಲಿ ಸಾಲ ಮಾಡುತ್ತಿದ್ದಾಳೆ ಅನ್ನೋದೆ ಅವನಿಗೆ ಗೊತ್ತಿರಲಿಲ್ಲ.

ಅಮೃತಾಳ ಪ್ರಿಯಕರನಿಗೆ ಮತ್ತೊಂದು ಚಾಳಿ ಇತ್ತು. ಒಂದು ಕಡೆ ನೆಟ್ಟಗೆ ಕೆಲಸ ಮಾಡುತ್ತಿರಲಿಲ್ಲ. ಕೆಲಸಕ್ಕೆ ಸೇರಿದ ಆರು ತಿಂಗಳಲ್ಲಿ ಕೆಲಸ ಬಿಟ್ಟು ಹೋಗುತ್ತಿದ್ದ. ಬಿಟ್ಟಿಯಾಗಿ ಹಣ ಕೈ ಸೇರುತ್ತಿದ್ದರಿಂದ ಶ್ರೀಧರನಿಗೆ ಕೆಲಸದ ಅವಶ್ಯಕತೆ ಇರಲಿಲ್ಲ.

ಕೊಲೆಯಲ್ಲಿ ಪ್ರಿಯಕರ ಶ್ರೀಧರ್ ರಾವ್ ಕೈವಾಡ ಇದೆಯೋ ಇಲ್ಲವೋ ಎನ್ನುವ ಬಗ್ಗೆ ಅಮೃತ ಕೊಲೆ ಬಳಿಕ ಶ್ರೀಧರ್ ಜೊತೆ ಅಂಡಮಾನಿಗೆ ಹೋಗಲು ಪ್ಲಾನ್ ಮಾಡಿದ್ಲಾ ಎನ್ನುವ ಬಗ್ಗೆ ಪೋಲಿಸರು ತನಿಖೆ ನಡೆಸುತ್ತಿದ್ದಾರೆ. ಶ್ರೀಧರ್ ರಾವ್ ಹಾಗೂ ಅಮೃತಳನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ಪೋಲಿಸರು ವಿಚಾರಣೆ ಪೂರ್ತಿಗೊಂಡ ನಂತರ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *