– ಪ್ರಸ್ತಾವಿತ ಕಾರಿಡಾರ್‌ನಲ್ಲಿ 25 ನಿಲ್ದಾಣಗಳ ನಿರ್ಮಾಣ
ಬೆಂಗಳೂರು: ತುಮಕೂರಿಗೆ ಮೆಟ್ರೋ ಸೇವೆಗಳನ್ನು ವಿಸ್ತರಿಸಲು ಸಮಗ್ರ ಯೋಜನಾ ವರದಿ (DPR) ತಯಾರಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಶನಿವಾರ ಟೆಂಡರ್ ಕರೆದಿದೆ.
ಈಗಾಗಲೇ ಸಿಲ್ಕ್ ಇನ್‌ಸ್ಟಿಟ್ಯೂಟ್‌ನಿಂದ ಮಾದಾವರದವರೆಗೆ ಹಸಿರು ಮಾರ್ಗದ ಮೆಟ್ರೋ ಸೇವೆಯಿದೆ. ಹೊಸ ಪ್ರಸ್ತಾವಿತ 59.6 ಕಿಮೀ ಮಾರ್ಗವು ಮಾದಾವರದಿಂದ ತುಮಕೂರುವರೆಗೆ (Tumakuru) ವಿಸ್ತರಣೆಯಾಗಲಿದೆ.
ಬೊಮ್ಮಸಂದ್ರ-ಹೊಸೂರು ಮೆಟ್ರೋ ವಿಸ್ತರಣೆಯು ಆಮೆ ವೇಗದಲ್ಲಿ ಸಾಗುತ್ತಿದೆ. ಒಂದು ವೇಳೆ ಈ ಯೋಜನೆ ಯಶಸ್ವಿಯಾದರೆ ರಾಜ್ಯದ ಮೊದಲ ಅಂತರ-ನಗರ ಮೆಟ್ರೋ ಯೋಜನೆಯಾಗಲಿದೆ.
ಈ ಹಿಂದೆ ಮಾದಾವರ-ತುಮಕೂರು ಕಾರಿಡಾರ್‌ನ ಡಿಪಿಆರ್‌ಗಾಗಿ ಕಾರ್ಯಸಾಧ್ಯತಾ ಅಧ್ಯಯನವನ್ನು ಕೈಗೊಳ್ಳಲು ಸರ್ಕಾರದ ನಿರ್ದೇಶನ ನೀಡಿತ್ತು. ಮೇ ತಿಂಗಳಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾದ ಕಾರ್ಯಸಾಧ್ಯತಾ ಅಧ್ಯಯನವನ್ನು ಅಂತಿಮವಾಗಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಡಿಯಲ್ಲಿ ಜಾರಿಗೊಳಿಸಲು ಅನುಮೋದಿಸಲಾಗಿದೆ.
ಈ ಯೋಜನೆಗೆ 20,649 ಕೋಟಿ ರೂ. ವೆಚ್ಚವಾಗುವ ನಿರೀಕ್ಷೆ ಇದೆ. ಬಿಡ್‌ದಾರರು 4.5 ಲಕ್ಷ ರೂ. ಹೆಚ್ಚು ಮುಂಗಡ ಹಣದೊಂದಿಗೆ(EMD) ನ.20ರ ಒಳಗಡೆ ಟೆಂಡರ್‌ಗೆ ಅರ್ಜಿ ಸಲ್ಲಿಸಬೇಕೆಂದು ಸೂಚಿಸಲಾಗಿದೆ. ಬಿಡ್‌ದಾರರ ಆಯ್ಕೆಯ ನಂತರ ಡಿಪಿಆರ್ ತಯಾರಿಕೆಗೆ ಕನಿಷ್ಠ 4-5 ತಿಂಗಳುಗಳು ಬೇಕಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದನ್ನೂ ಓದಿ: ರಾಮನಗರ ಆಯ್ತು, ಈಗ ಬೆಂಗಳೂರು ದಕ್ಷಿಣ ಜಿಲ್ಲೆಗೆ ಕುಣಿಗಲ್ ವಿಲೀನ?
ತುಮಕೂರು ಕೈಗಾರಿಕಾ ಉಪನಗರವಾಗಿ ಹೊರಹೊಮ್ಮುತ್ತಿದ್ದು ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಲು ಮೆಟ್ರೋ ಸೇವೆಗಳನ್ನು ವಿಸ್ತರಿಸಲು ರಾಜಕಾರಣಿಗಳಿಂದ ಮತ್ತು ಉದ್ಯಮಗಳಿಂದ ಬೇಡಿಕೆ ಬಂದಿತ್ತು. ಸಾಧ್ಯತಾ ವರದಿಯ ಪ್ರಕಾರ ಒಂದು ಗಂಟೆಗೆ ಒಂದು ದಿಕ್ಕಿನಲ್ಲಿ 15,000 ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸಬಹುದು ಎಂಬ ನಿರೀಕ್ಷೆಯಲ್ಲಿ ಬಿಎಂಆರ್‌ಸಿಎಲ್ ಇದೆ.
ಮಾದಾವರದ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಿಂದ (BIEC) ಪ್ರಾರಂಭವಾಗುವ ಈ ಪ್ರಸ್ತಾವಿತ ಕಾರಿಡಾರ್‌ನಲ್ಲಿ 25 ಎತ್ತರದ ನಿಲ್ದಾಣಗಳು (ಎಲ್ಲವೂ ಎಲೆವೆಟೆಡ್ ಮಾದರಿಯ ನಿಲ್ದಾಣಗಳು) ನಿರ್ಮಾಣವಾಗಲಿದೆ. ನೆಲಮಂಗಲ, ದಾಬಸ್‌ಪೇಟೆ ಮತ್ತು ಕ್ಯಾತಸಂದ್ರದಂತಹ ಪ್ರಮುಖ ಪ್ರದೇಶಗಳ ಮೂಲಕ ಮೆಟ್ರೋ ಹಾದುಹೋಗಲಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೆರಡು ಡಬಲ್ ಡೆಕ್ಕರ್ ಫ್ಲೈಓವರ್‌ಗೆ ಡಿಕೆಶಿ ಪ್ಲಾನ್
ಪ್ರಕ್ರಿಯೆ ಮುಗಿದ ನಂತರ ಬಿಡ್‌ಗಳನ್ನು ಪರಿಶೀಲಿಸಲಾಗುತ್ತದೆ. ತಾಂತ್ರಿಕ ಅರ್ಹತೆ, ಆರ್ಥಿಕ ಮಾನದಂಡಗಳು ಮತ್ತು ಇತರ ಹಲವು ವಿಷಯಗಳನ್ನು ಚರ್ಚಿಸಲಾಗುತ್ತದೆ. ಈಗ ಅಂತಿಮ ದಿನಾಂಕವನ್ನು ನಿಗದಿ ಮಾಡಲು ಸಾಧ್ಯವಿಲ್ಲ. ಈ ಎಲ್ಲಾ ಪ್ರಕ್ರಿಯೆ ಮುಕ್ತಾಯಕ್ಕೆ ಕನಿಷ್ಠ 5-6 ತಿಂಗಳು ತೆಗೆದುಕೊಳ್ಳಬಹುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಲ್ಲೆಲ್ಲಿ ನಿಲ್ದಾಣ ಬರಲಿದೆ?
ಮಾದಾವರ, ಮಾಕಳಿ, ದಾಸನಪುರ, ನೆಲಮಂಗಲ, ವೀವರ್ ಕಾಲೋನಿ, ನೆಲಮಂಗಲ ವಿಶ್ವೇಶ್ವರಪುರ, ನೆಲಮಂಗಲ ಟೋಲ್‌ಗೇಟ್, ಬೂದಿಹಾಳ್, ಟಿ. ಬೇಗೂರು, ತಿಪ್ಪಗೊಂಡನಹಳ್ಳಿ, ಕುಲವನಹಳ್ಳಿ, ಮಹಿಮಾಪುರ, ಬಿಲ್ಲನ್‌ಕೋಟೆ, ಸೋಂಪುರ ಕೈಗಾರಿಕಾ ಪ್ರದೇಶ, ದಾಬಸ್‌ಪೇಟೆ, ನಲ್ಲಾಯನಪಾಳ್ಯ, ಚಿಕ್ಕಹಳ್ಳಿ, ಹಿರೇಹಳ್ಳಿ ಕೈಗಾರಿಕಾ ಪ್ರದೇಶ, ಪಂಡಿತನಹಳ್ಳಿ, ಕ್ಯಾತ್ಸಂದ್ರ ಬೈಪಾಸ್, ಕ್ಯಾತ್ಸಂದ್ರ, ಎಸ್‌ಐಟಿ (ಸಿದ್ಧಾರ್ಥ ಕಾಲೇಜು), ತುಮಕೂರು ಬಸ್ ನಿಲ್ದಾಣ, ಟೂಡಾ ಲೇಔಟ್, ನಾಗಣ್ಣ ಪಾಳ್ಯ, ಶಿರಾ ಗೇಟ್ ಬಳಿ ಎಲಿವೇಟೆಡ್ ಮೆಟ್ರೋ ನಿಲ್ದಾಣಗಳು ನಿರ್ಮಾಣವಾಗುವ ಸಾಧ್ಯತೆಯಿದೆ.

