ಬೆಂಗಳೂರು: ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 42 ವರ್ಷದ ವ್ಯಕ್ತಿಯೊಬ್ಬನನ್ನು ನಗರದ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ರಾಮು ಎಂದು ಗುರುತಿಸಲಾಗಿದೆ. ಈತ ಮಾಗಡಿರೋಡ್ ನಿವಾಸಿಯಾಗಿದ್ದಾನೆ. ಆನಂದ್ ಅವರಿಗೆ ರಾಮು ಗೆಳೆಯ ಹಾಗೂ ದೂರದ ಸಂಬಂಧಿಕ ಕೂಡ ಆಗಿದ್ದನು.
ಫೈನಾನ್ಶಿಯರ್ ಆಗಿರುವ 56 ವರ್ಷದ ಆನಂದ್ ನವೆಂಬರ್ 6ರಂದು ಕೆಂಪೇಗೌಡ ನಗರದ ಜಿಂಕೆ ಪಾರ್ಕ್ ಬಳಿಯ ಸ್ಮಶಾನದ ಸಮೀಪ ಮೃತಪಟ್ಟಿದ್ದರು. ಈ ಸಂಬಂಧ ಅನುಮಾನಾಸ್ಪದ ಸಾವು ಎಂದು ಪ್ರಕರಣ ಕೂಡ ದಾಖಲಿಸಿಕೊಳ್ಳಲಾಗಿತ್ತು.
ಇತ್ತ ತನ್ನ ತಂದೆ ಮೃತಪಟ್ಟ ಬಳಿಕ ಅವರ ಬಳಿಯಿದ್ದ ಚಿನ್ನಾಭರಣ ಹಾಗೂ ಇತರ ಮೌಲ್ಯಾಧಾರಿತ ವಸ್ತುಗಳು ನಾಪತ್ತೆಯಾಗಿವೆ ಎಂದು ಆನಂದ್ ಮಗ ದೂರು ನೀಡಿದ್ದಾನೆ. ದೂರು ಸ್ವೀಕರಿಸಿ ತನಿಖೆ ನಡೆಸಿದಾಗ ಚಿನ್ನದ ಸರ, 72 ಗ್ರಾಂನ ಚಿನ್ನದ ಉಂಗುರ, ಮೊಬೈಲ್ ಫೋನ್ ಹಾಗೂ 5 ಲಕ್ಷದ ಬ್ಯಾಂಕ್ ಚೆಕ್ ಕೂಡ ಕಳವು ಆಗಿರೋದು ಬೆಳಕಿಗೆ ಬಂದಿತ್ತು ಎಂದು ಪೊಲಿಸ್ ಅಧಿಕಾರಿ ತಿಳಿಸಿದ್ದಾರೆ.
ನಾನು ಮತ್ತು ಆನಂದ್ ಸ್ಮಶಾನದ ಬಳಿ ಮಾತನಾಡುತ್ತಾ ಕುಳಿತಿದ್ದೆವು. ಈ ವೇಳೆ ಅಚಾನಕ್ ಆಗಿ ಆನಂದ್ ಬಿದ್ದು ಮೃತಪಟ್ಟರು ಎಂದು ರಾಮು ತಿಳಿಸಿದ್ದಾನೆ. ಪ್ರಕರಣ ಸಂಬಂಧ ರಾಮುವನ್ನು ಬಂಧಿಸಲಾಗಿದೆ. ಹಾಗೂ ಆತ ಕಳವುಗೈದ ವಸ್ತುಗಳನ್ನು ವಾಪಸ್ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.