-ಬೇರೊಬ್ಬನ ಜೊತೆ ಓಡಾಡಿದ್ರೆ ಏನ್ ಮಾಡಲಿ?
ಬೆಂಗಳೂರು: ತಾನು ಪ್ರೀತಿಸಿದ ಯುವತಿ ಕೈಕೊಟ್ಟಳೆಂದು ಆಕೆಯ ಮನೆಯ ಮುಂದೆಯೇ ಯುವಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸಿಲಿಕಾನ್ ಸಿಟಿಯ ಕೆ.ಪಿ ಅಗ್ರಹಾರ 16 ನೇ ಕ್ರಾಸ್ ನಲ್ಲಿ ನಡೆದಿದೆ.
ಮನೋಜ್ ಎಂಬಾತನೇ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿ. ಈತ ಪ್ರೀತಿಸಿದ ಹುಡುಗಿಯ ಮನೆ ಮುಂದೆ ನಿಂತು 5 ಲೀಟರ್ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ.
ಮನೋಜ್ ಎಂಟು ವರ್ಷಗಳಿಂದ ಸ್ವಾತಿ(ಹೆಸರು ಬದಲಾಯಿಸಲಾಗಿದೆ) ಎಂಬ ಯುವತಿಯನ್ನು ಪ್ರೀತಿಸುತ್ತಿದ್ದನು. ಆದರೆ ಇದೀಗ ಬೇರೊಬ್ಬನ ಜೊತೆ ಓಡಾಡುತ್ತಿದ್ದಾಳೆ ಎಂದು ಶಂಕಿಸಿ ಮನೋಜ್, ಆಕೆಯ ಜೊತೆ ಜಗಳವಾಡಿದ್ದನು. ಇಬ್ಬರ ನಡುವೆ ಜಗಳವಾಗಿದ್ದರಿಂದ ಸ್ವಾತಿ, ಮನೋಜ್ ಜೊತೆಗಿನ 8 ವರ್ಷದ ಪ್ರೀತಿಗೆ ಕೊನೆ ಹಾಡಿದ್ದಳು.
ಇಷ್ಟು ವರ್ಷ ಪ್ರೀತಿಸಿ, ಇದೀಗ ತನ್ನನ್ನು ಕೈ ಬಿಟ್ಟಳು ಎಂದು ಮನನೊಂದ ಯುವಕ ಆಕೆಯ ಮನೆಯ ಬಳಿ ಹೋಗಿ, ತನ್ನ ಗಾಡಿಯಿಂದ ಪೆಟ್ರೋಲ್ ತೆಗೆದು, ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿ ಅಪಾಯದಿಂದ ಆತನನ್ನು ಪಾರು ಮಾಡಿದ್ದಾರೆ.
7 ವರ್ಷದಿಂದ ಅವಳನ್ನು ನಾನು ಪ್ರೀತಿ ಮಾಡುತ್ತಿದ್ದೇನೆ. ಈಗ ಅವಳು ಬೇರೋಬ್ಬನ ಜೊತೆ ಓಡಾಡುತ್ತಿರುವುದನ್ನು ನೋಡಿದ್ದೇನೆ. ಅದಕ್ಕೆ ಸಾಕ್ಷಿ ಕೂಡ ನನ್ನ ಬಳಿ ಇದೆ. ಇಷ್ಟು ದಿನ ಅವಳಿಗೋಸ್ಕರ ಜೀವನ ಹಾಳು ಮಾಡಿಕೊಂಡಿದ್ದೇನೆ. ಇದೀಗ ಅವಳೇ ಬೇರೊಬ್ಬನ ಜೊತೆ ಓಡಾಡುತ್ತಿದ್ದಾಳೆ ಅಂದರೆ ಏನು ಮಾಡಲಿ ಅಣ್ಣಾ ಎಂದು ಸ್ಥಳೀಯರೊಬ್ಬರು ಯಾಕೆ ಪೆಟ್ರೋಲ್ ಸುರಿದುಕೊಂಡೆ ಎಂದು ಕೇಳಿದಾಗ ಮನೋಜ್ ತಿಳಿಸಿದ್ದಾನೆ.
ಘಟನೆ ಸಂಬಂಧ ಕೆ.ಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.