‘ಬೇರೆಯವನನ್ನು ಮದ್ವೆಯಾಗಲು ಪ್ರಯತ್ನಿಸಿದ್ರೆ ಗ್ಯಾಂಗ್‍ರೇಪ್ ಆಗುತ್ತೆ’

Public TV
2 Min Read

– ಬೆಂಗ್ಳೂರಲ್ಲಿ ಮಹಿಳೆಗೆ ಬೆದರಿಕೆ

ಬೆಂಗಳೂರು: ವ್ಯಕ್ತಿಯೊಬ್ಬ 32 ವರ್ಷದ ಮಹಿಳೆಗೆ ಮದುವೆಯಾಗುವಂತೆ ಒತ್ತಾಯಿಸಿ ಬೆದರಿಕೆ ಹಾಕಿರುವ ಪ್ರಕರಣವೊಂದು ಬೆಂಗಳೂರಿನ ಕೆ.ಆರ್ ಪುರಂನಲ್ಲಿ ಬೆಳಕಿಗೆ ಬಂದಿದೆ.

ಆರೋಪಿಯನ್ನು ಪ್ರಸಾದ್ ಎಂದು ಗುರುತಿಸಲಾಗಿದೆ. ಸದ್ಯ ಈತ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಏನಿದು ಘಟನೆ?:
ರಾಮಮೂರ್ತಿನಗರ ನಿವಾಸಿ ಮಹಿಳೆ ಕೆಲ ಸಮಯಗಳಿಂದ ಆರೋಪಿ ಪ್ರಸಾದ್ ಜೊತೆ ಸಂಬಂಧ ಹೊಂದಿದ್ದರು. ಈ ವಿಚಾರ ಮಹಿಳೆಯ ತಂದೆಯ ಗಮನಕ್ಕೆ ಬಂದಿದ್ದು, ಮಗಳ ಈ ಸಂಬಂಧದ ಬಗ್ಗೆ ಗರಂ ಆಗಿದ್ದಾರೆ. ಅಲ್ಲದೆ ಆತನಿಂದ ದೂರ ಇರುವಂತೆ ವಾರ್ನ್ ಮಾಡಿದ್ದಾರೆ.

ಕೆಲ ತಿಂಗಳ ಬಳಿಕ ಮಹಿಳೆಯ ತಂದೆ ಪೊಲೀಸ್ ಠಾಣೆಗೆ ತೆರಳಿ ಪ್ರಸಾದ್ ವಿರುದ್ಧ ದೂರು ದಾಖಲಿಸಿದ್ದಾರೆ. ಅಲ್ಲದೆ ತನ್ನ ಮಗಳ ತಂಟೆಗೆ ಆತ ಬರಬಾರದೆಂದು ಸೂಚನೆ ನೀಡಲು ದೂರಿನಲ್ಲಿ ತಿಳಿಸಿದ್ದಾರೆ. ಹಾಗೆಯೇ ಪೊಲೀಸರು ಕೂಡ ಪ್ರಸಾದ್ ಗೆ ವಾರ್ನ್ ಮಾಡಿದ್ದರು.

ಪೊಲೀಸರು ವಾರ್ನ್ ಮಾಡುತ್ತಿದ್ದಂತೆಯೇ ಇತ್ತ ಮಹಿಳೆ ಕೂಡ ಪ್ರಸಾದ್ ನನ್ನು ಕಡೆಗಣಿಸಲು ಪ್ರಾರಂಭಿಸಿದರು. ಈ ವಿಚಾರ ಪ್ರಸಾದ್ ನನ್ನು ಮತ್ತಷ್ಟು ಕೆರಳಿಸಿದೆ. ಈ ಹಿನ್ನೆಲೆಯಲ್ಲಿ ಪ್ರಸಾದ್ ಒಂದು ದಿನ ತನ್ನ ನಾಲ್ವರು ಸಹಪಾಠಿಗಳೊಂದಿಗೆ ಸಂಜೆ 6.25ರ ಸುಮಾರಿಗೆ ನೇರವಾಗಿ ಮಹಿಳೆಯ ಮನೆಗೆ ತೆರಳಿದ್ದಾನೆ. ಇತ್ತ ದುರಾದೃಷ್ಟ ಎಂಬತೆ ಮಹಿಳೆ ಮನೆಯಲ್ಲಿ ಒಬ್ಬರೇ ಇದ್ದರು. ಹೀಗಾಗಿ ಒಂದಾ ನೀನು ಇಲ್ಲಿಂದ ಹೋಗಬೇಕು, ಇಲ್ಲ ನಾನು ಅಪ್ಪನಿಗೆ ಕರೆ ಮಾಡುತ್ತೇನೆ. ಅಲ್ಲದೆ ಪೊಲೀಸರನ್ನು ಕೂಡ ಮನೆಗೆ ಕರೆಸುತ್ತೇನೆ ಎಂದು ಮಹಿಳೆ ಬೆದರಿಸಿದ್ದಾರೆ.

ಈ ವೇಳೆ ಪ್ರಸಾದ್, ತನ್ನ ಸ್ನೇಹಿತರ ಕೈಯಲ್ಲಿದ್ದ ಸೈಕಲ್ ಚೈನ್ ನಲ್ಲಿ ಆಕೆಯನ್ನು ಕಟ್ಟಿ ಹಾಕಿ ಹಲ್ಲೆ ಮಾಡಿದ್ದಾನೆ. ಅಲ್ಲದೆ ನೀನು ಬೇರೊಬ್ಬನ ಜೊತೆ ಮದುವೆಯಾಗಲು ಯತ್ನಿಸಿದರೆ ನಿನ್ನ ಮೇಲೆ ಗ್ಯಾಂಗ್ ರೇಪ್ ಎಸಗುವುದಾಗಿ ಬೆದರಿಕೆ ಕೂಡ ಹಾಕಿದ್ದಾನೆ. ಇದಕ್ಕೆ ಆತನ ಸ್ನೇಹಿತರು ಕೂಡ ದನಿಗೂಡಿಸಿದ್ದಾರೆ.

ಪ್ರಸಾದ್ ಆಕೆಯ ತಲೆಗೆ ಸರಪಳಿಯಿಂದ ಬಡಿದ ಪರಿಣಾಮ ಆಕೆಯ ತಲೆಯಲ್ಲಿ ರಕ್ತಸ್ರಾವವಾಗುತ್ತಿತ್ತು. ಇದರಿಂದ ಗಾಬರಿಗೊಂಡ ಮಹಿಳೆ ಜೋರಾಗಿ ಕಿರುಚಿಕೊಂಡಿದ್ದಾರೆ. ಈ ವೇಳೆ ತನ್ನ ಸಹಪಾಠಿಗಳೊಂದಿಗೆ ಪ್ರಸಾದ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ನನ್ನ ಮಗಳ ತಲೆಗೆ 4 ಹೊಲಿಗೆ ಹಾಕಲಾಗಿದೆ. ಅಲ್ಲದೆ ಅವರು ಮತ್ತೆ ಬಂದು ನನ್ನ ಮಗಳ ಮೇಲೆ ದಾಳಿ ಮಾಡಬಹುದೆಂಬ ಭಯ ಶುರುವಾಗಿದೆ ಎಂದು ಮಹಿಳೆಯ ತಂದೆ ತನ್ನ ಅಲವತ್ತುಕೊಂಡಿದ್ದಾರೆ. ಇತ್ತ ಮಹಿಳೆಯ ಕೆ ಆರ್ ಪುರಂ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *