ಮುಂಬೈಯನ್ನು ಶೀಘ್ರವೇ ಹಿಂದಿಕ್ಕಿ 2ನೇ ಸ್ಥಾನಕ್ಕೆ ಏರಲಿದೆ ಬೆಂಗ್ಳೂರು ವಿಮಾನ ನಿಲ್ದಾಣ

Public TV
2 Min Read

ಬೆಂಗಳೂರು: ಸಿಲಿಕಾನ್ ಸಿಟಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎಎಲ್) ಇದೀಗ ಮುಂಬೈ ನಿಲ್ದಾಣವನ್ನು ಹಿಂದಿಕ್ಕಿ ಎರಡನೇ ಅತಿ ಹೆಚ್ಚು ದಟ್ಟಣೆ ಹೊಂದಿದ ಏರ್ ಪೋರ್ಟ್ ಆಗುವತ್ತ ಹೆಜ್ಜೆ ಇಡಲಿದೆ.

ಒಂದು ರನ್ ವೇಯಲ್ಲಿ ಅತಿ ಹೆಚ್ಚು ವಿಮಾನಗಳನ್ನು ನಿರ್ವಹಿಸುತ್ತಿರುವ ಏಕೈಕ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಕೆಐಎಎಲ್ ಪಾತ್ರವಾಗಿದ್ದು, ಎರಡನೇ ರನ್‍ವೇ ಸಹ ಡಿಸೆಂಬರ್ 5ರಿಂದ ಕಾರ್ಯನಿರ್ವಹಿಸಲಿದೆ. ನಂತರ ಪ್ರತಿ ದಿನ ಇನ್ನೂ ಹೆಚ್ಚು ವಿಮಾನಗಳನ್ನು ನಿರ್ವಹಿಸಲು ಸಜ್ಜಾಗುತ್ತಿದೆ. ಈ ಮೂಲಕ ಮುಂದಿನ ಚಳಿಗಾಲದ ಹೊತ್ತಿಗೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮೂರನೇ ಸ್ಥಾನಕ್ಕೆ ದೂಡಿ ಎರಡನೇ ಸ್ಥಾನವನ್ನು ಅಲಂಕರಿಸಲಿದೆ.

ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ 2009ರಲ್ಲಿ ಮುಂಬೈ ನಿಲ್ದಾಣವನ್ನು ಹಿಂದಿಕ್ಕಿ ಭಾರತದ ಅತ್ಯಂತ ದಟ್ಟಣೆಯ ವಿಮಾನ ನಿಲ್ದಾಣ ಎಂದು ಖ್ಯಾತಿ ಪಡೆದಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಎರಡು ಕ್ರಾಸ್ ರನ್ ವೇಗಳಿದ್ದು, ಪ್ರತಿನಿತ್ಯ 960 ವಿಮಾನಗಳನ್ನು ನಿಯಂತ್ರಿಸುತ್ತದೆ. ಕೆಲವು ಬಾರಿ ಇದು 1 ಸಾವಿರ ವಿಮಾನಗಳನ್ನು ನಿಯಂತ್ರಿಸುತ್ತದೆ.

ಪ್ರಸ್ತುತ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿ ದಿನ ಒಟ್ಟು 731 ವಿಮಾನಗಳನ್ನು ನಿರ್ವಹಿಸುತ್ತಿದೆ. ಇದಕ್ಕಿಂತ ಹೆಚ್ಚು ವಿಮಾನಗಳನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಆದರೆ ಇತರೆ ವಿಮಾನ ನಿಲ್ದಾಣಗಳಿಗೆ ಹೋಲಿಸಿದರೆ ಒಂದೇ ರನ್ ವೇಯಲ್ಲಿ ಈ ಪರಿಪ್ರಮಾಣದ ವಿಮಾನಗಳನ್ನು ನಿಯಂತ್ರಿಸುತ್ತಿದ್ದು ಪ್ರಪಂಚದ ಅತ್ಯಂತ ಬ್ಯುಸಿಯಸ್ಟ್ ರನ್ ವೇ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪ್ರಸ್ತುತ ಕೆಂಪೇಗೌಡ ವಿಮಾನ ನಿಲ್ದಾಣ ಪ್ರತಿ ದಿನ 731 ವಿಮಾನಗಳನ್ನು ನಿರ್ವಹಿಸುತ್ತಿದ್ದು, ಡಿಸೆಂಬರ್ 5ರಿಂದ ಎರಡನೇ ರನ್ ವೇ ಕಾರ್ಯಾರಂಭ ಮಾಡಿದರೆ ವಿಮಾನಗಳ ನಿರ್ವಹಣೆ ಪ್ರಮಾಣ ಭಾರೀ ಪ್ರಮಾಣದಲ್ಲಿ ಏರಿಕೆಯಾಗಲಿದೆ. ಮುಂದಿನ ಚಳಿಗಾಲದ ಹೊತ್ತಿಗೆ ಬೆಂಗಳೂರು ವಿಮಾನ ನಿಲ್ದಾಣ ಮುಂಬೈಯನ್ನು ಮೀರಿಸುತ್ತದೆ ಎಂದು ಹಿರಿಯ ಏರ್ ಟ್ರಾಫಿಕ್ ಕಂಟ್ರೋಲ್ ಅಧಿಕಾರಿ(ಎಟಿಸಿ) ಮಾಹಿತಿ ನೀಡಿದ್ದಾರೆ.

ಇನ್ನೊಂದೆಡೆ ದೆಹಲಿ ವಿಮಾನ ನಿಲ್ದಾಣ ಸಹ 2021ರ ಬೇಸಿಗೆ ವೇಳೆಗೆ ನಾಲ್ಕನೇ ರನ್ ವೇಯನ್ನು ಪ್ರಾರಂಭಿಸುತ್ತಿದೆ. ಪ್ರಸ್ತುತ 3 ರನ್ ವೇಗಳಲ್ಲಿ 1,515 ವಿಮಾನಗಳನ್ನು ಪ್ರತಿನಿತ್ಯ ನಿರ್ವಹಿಸುತ್ತಿದೆ. ಬ್ಯುಸಿಯಸ್ಟ್ ವಿಮಾನ ನಿಲ್ದಾಣಗಳ ಪೈಕಿ ಕ್ರಮವಾಗಿ ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್, ಚೆನ್ನೈ ಹಾಗೂ ಕೋಲ್ಕತ್ತಾ ವಿಮಾನ ನಿಲ್ದಾಣಗಳು ಸ್ಥಾನ ಪಡೆದಿವೆ.

ದಶಕಗಳಿಂದ ಮುಂಬೈ ವಾಯುಯಾನದ ಹಬ್ ಆಗಿ ಮಾರ್ಪಟ್ಟಿದೆ. ವಾಣಿಜ್ಯ ನಗರಿಯ ನವಿ ಮುಂಬೈ ವಿಮಾನ ನಿಲ್ದಾಣ ಪ್ರಾರಂಭವಾದರೆ ಮತ್ತೆ ಹೆಚ್ಚು ವಿಮಾನಗಳ ಸಂಪರ್ಕಕ್ಕೆ ಸಹಕಾರಿಯಾಗಲಿದೆ. ಉತ್ತರ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಇನ್ನೊಂದು ವಿಮಾನ ನಿಲ್ದಾಣ ಕಾರ್ಯಾರಂಭವಾಗಲು ಇನ್ನೂ 3-4 ವರ್ಷ ಬೇಕಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *