ನಮ್ಗೆ ಶಾಸಕರ ಅಗತ್ಯವಿಲ್ಲ, ಅವರೇ ಬರ್ತೀನಿ ಅಂದ್ರೆ ಬಿಡೋದಕ್ಕೆ ಆಗಲ್ಲ- ಅರವಿಂದ ಲಿಂಬಾವಳಿ

Public TV
1 Min Read

ಬೆಂಗಳೂರು: ಎರಡೂ ಪಕ್ಷಗಳ ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ. ಡಿಸೆಂಬರ್ 9ರಂದು ಯಾರು ಬರ್ತಾರೆ ಅನ್ನೋದನ್ನ ಹೇಳುತ್ತೇವೆ. ಪಕ್ಷಕ್ಕೆ ಸೇರಿಸಿಕೊಳ್ಳುವುದನ್ನ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಮಗೆ ಶಾಸಕರ ಅಗತ್ಯ ಇಲ್ಲ. ಆದರೆ ಅವರೇ ಬರುತ್ತೇನೆ ಎಂದು ಹೇಳಿದರೆ ಬಿಡೋದಕ್ಕೆ ಆಗಲ್ಲ. ಬೈ ಎಲೆಕ್ಷನ್ ಬಳಿಕ ಕಾಂಗ್ರೆಸ್, ಜೆಡಿಎಸ್ ಸ್ಥಿತಿ ಚಿಂತಾಜನಕ ಆಗುತ್ತದೆ ಎಂದು ಉಪಚುನಾವಣೆ ಬಿಜೆಪಿ ಉಸ್ತುವಾರಿ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 15 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ಇದೆ. ಉಪಚುನಾವಣೆ ಬಳಿಕ ನಮ್ಮ ಸರ್ಕಾರ ಸುಭದ್ರವಾಗಲಿದೆ. ಮಹಾರಾಷ್ಟ್ರದ ಬೆಳವಣಿಗೆ ಬಳಿಕ ನಾನೂ ಸಿಎಂ ಆಗಬಹುದು ಅಂತ ಕಾಂಗ್ರೆಸ್ ನಾಯಕರಲ್ಲಿ ಆಸೆ ಹುಟ್ಟಿಕೊಂಡಿದೆ. ಜೆಡಿಎಸ್ ಕೂಡ ಸೋನಿಯಾ ಸೂಚನೆಗೆ ಕಾಯುತ್ತೇವೆ ಎಂದು ಹೇಳಿ ಈಗ ಮತ್ತೆ ಬಿಜೆಪಿ ಸರ್ಕಾರ ಸುಭದ್ರ ಅಂತಿದ್ದಾರೆ. ಇದೆಲ್ಲವೂ ಜನರನ್ನ ಗೊಂದಲದಲ್ಲಿ ಸಿಲುಕಿಸಲು ಸೃಷ್ಟಿಸಿ ಅವರೇ ಗೊಂದಲದಲ್ಲಿ ಸಿಲುಕಿದ್ದಾರೆ. ಇದರಿಂದ ಬಿಜೆಪಿಗೆ ಸಹಾಯ ಮಾಡಿದ್ದಕ್ಕೆ ಅವರಿಗೆ ಧನ್ಯವಾದಗಳು ಎಂದರು.

ಉಪಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಕಾಂಗ್ರೆಸ್, ಜೆಡಿಎಸ್ ಗೆ ಇದ್ದಿದ್ರೆ ರಾಜ್ಯಸಭೆಗೆ ಅಭ್ಯರ್ಥಿ ಹಾಕಬಹುದಿತ್ತು. ಅವರಿಗೆ ವಿಶ್ವಾಸ ಇಲ್ಲದೇ ರಾಜ್ಯಸಭೆಗೆ ಸ್ಪರ್ಧಿಸಿಲ್ಲ. ನಮ್ಮ ಪಕ್ಷದ ಅಭ್ಯರ್ಥಿಯಾಗಿರುವ ಕೆ.ಸಿ ರಾಮಮೂರ್ತಿ ಅವರು ಅವಿರೋಧ ಆಯ್ಕೆಯಾಗುತ್ತಿದ್ದಾರೆ. ಅವರಿಗೆ ಅಭಿನಂದನೆ ತಿಳಿಸಿದರು.

ಇದೇ ವೇಳೆ ಬೈ ಎಲೆಕ್ಷನ್ ಬಳಿಕ ಕ್ಯಾಬಿನೆಟ್ ವಿಸ್ತರಣೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ, ಹೈಕಮಾಂಡ್ ಚರ್ಚೆ ಮಾಡಿ ಅಂತಿಮಗೊಳಿಸುತ್ತಾರೆ. ಯಾರನ್ನು ಸೇರಿಸಿಕೊಳ್ಳಬೇಕೋ, ಬಿಡಬೇಕೋ ಅನ್ನೋದನ್ನ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *